ತೊಗಾಡಿಯಾ ನಾಪತ್ತೆ: ಉಳಿದ ಗೊಂದಲ

7

ತೊಗಾಡಿಯಾ ನಾಪತ್ತೆ: ಉಳಿದ ಗೊಂದಲ

Published:
Updated:
ತೊಗಾಡಿಯಾ ನಾಪತ್ತೆ: ಉಳಿದ ಗೊಂದಲ

ಅಹಮದಾಬಾದ್: ತೊಗಾಡಿಯಾ ನಾಪತ್ತೆ ಪ್ರಕರಣ ಸೋಮವಾರ ಸಂಜೆವರೆಗೂ ನಿಗೂಢವಾಗಿತ್ತು. ರಾಜಸ್ಥಾನ ಪೊಲೀಸರಾಗಲೀ, ಸ್ಥಳೀಯ ಪೊಲೀಸರಾಗಲೀ ಅವರನ್ನು ಬಂಧಿಸಿಲ್ಲ ಎಂದು ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದರು.

ಇದಕ್ಕೂ ಮೊದಲು, ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತೊಗಾಡಿಯಾ ಅವರನ್ನು ಬಂಧಿಸಿದ್ದಾರೆ ಎಂದು ವಿಎಚ್‌ಪಿ ಹೇಳಿತ್ತು. ಆದರೆ, ಪೊಲೀಸರು ಇದನ್ನು ನಿರಾಕರಿಸಿದ್ದರು.

ತೊಗಾಡಿಯಾ ಪತ್ತೆಯಾದ ಬಳಿಕ ದೆಹಲಿಯಲ್ಲಿ ವಿಎಚ್‌ಪಿ ಹೇಳಿಕೆ ಬಿಡುಗಡೆ ಮಾಡಿತ್ತು.

‘ತೊಗಾಡಿಯಾ ಅವರು ಶಾಹಿಭಾಗ್‌ ಪ್ರದೇಶದಲ್ಲಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದ್ದರಿಂದ ಈ ರೀತಿ ಆಗಿತ್ತು. ನಂತರ ಅವರನ್ನು ಅದೇ ಪ್ರದೇಶದ ಚಂದ್ರಮಣಿ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಅದು ಹೇಳಿತ್ತು.

ತನಿಖೆಗೆ ಕಾಂಗ್ರೆಸ್‌ ಆಗ್ರಹ; ಮೋದಿ, ಶಾ ಕೈವಾಡ–ಹಾರ್ದಿಕ್‌:

ಪೊಲೀಸ್‌ ಎನ್‌ಕೌಂಟರ್‌ ಮೂಲಕ ‌ತಮ್ಮ ಹತ್ಯೆಗೆ ಯತ್ನಿಸಲಾಗುತ್ತಿದೆ ಎಂದು ತೊಗಾಡಿಯಾ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಗುಜರಾತ್‌ ಕಾಂಗ್ರೆಸ್‌ ಒತ್ತಾಯಿಸಿದೆ.

ಕಾಂಗ್ರೆಸ್‌ ಮುಖಂಡ ಅರ್ಜುನ್‌ ಮೊಧ್ವಾಡಿಯಾ ಅವರು ಆಸ್ಪತ್ರೆಯಲ್ಲಿ ತೊಗಾಡಿಯಾ ಅವರನ್ನು ಭೇಟಿ ಮಾಡಿದ್ದಾರೆ.

‘ಎನ್‌ಕೌಂಟರ್‌ ವಿಚಾರದಲ್ಲಿ ರಾಜಸ್ಥಾನ ಪೊಲೀಸರ ಇತಿಹಾಸ ನಮಗೆಲ್ಲರಿಗೂ ಗೊತ್ತಿದೆ. ಬಿಜೆಪಿ ವಿರುದ್ಧ ಧ್ವನಿ ಎತ್ತಿದವರಿಗೆ ಏನಾಗುತ್ತದೆ ಎಂಬುದೂ ತಿಳಿದಿದೆ. ಹಾಗಾಗಿ, ತೊಗಾಡಿಯಾ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಮತ್ತು ರಾಜ್ಯ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಕೂಡ ತನಿಖೆಗೆ ಆಗ್ರಹಿಸಿದ್ದಾರೆ.

ಹಾರ್ದಿಕ್ ಭೇಟಿ: ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಕೂಡ ತೊಗಾಡಿಯಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರತ್ತ ಬೆಟ್ಟು ಮಾಡಿದ್ದಾರೆ.

‘ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ತೊಗಾಡಿಯಾ ಅವರ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ಆದರೆ, ನನ್ನ ಬೆಂಬಲ ಯಾವಾಗಲೂ ಅವರಿಗೆ ಇದೆ. ಮೋದಿ ಮತ್ತು ಅಮಿತ್‌ ಶಾ ಯಾವೆಲ್ಲ ರೀತಿಯ ಪಿತೂರಿ ನಡೆಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತಿದೆ. ಹಿಂದೂಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹಿಂದೂ ಸಂಘಟನೆಯೊಂದರ ನಾಯಕರೊಬ್ಬರು ಈಗ ಖಂಡಿತವಾಗಿಯೂ ಅಪಾಯದಲ್ಲಿದ್ದಾರೆ’ ಎಂದು ಹಾರ್ದಿಕ್‌ ಹೇಳಿದ್ದಾರೆ.

‘ಸೂಕ್ತ ಸಂದರ್ಭದಲ್ಲಿ ಬಹಿರಂಗ’

‘ನನ್ನ ವಿರುದ್ಧದ ಹಳೆ ಪ್ರಕರಣಗಳನ್ನು ಮತ್ತೆ ತೆರೆಯಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನನ್ನನ್ನು ಬಂಧಿಸುವ ಮೂಲಕ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ’ ಎಂದು ತೊಗಾಡಿಯಾ ಆರೋಪಿಸಿದ್ದಾರೆ.

‘ಯಾರ ಆದೇಶದ ಪ್ರಕಾರ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಸರಿಯಾದ ಸಮಯಲ್ಲಿ ಸಾಕ್ಷ್ಯಗಳ ಸಮೇತ ಬಹಿರಂಗ ಪಡಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ವಿಎಚ್‌ಪಿಯೊಂದಿಗೆ ಗುರುತಿಸಿಕೊಂಡಿರುವ ವೈದ್ಯರಿಗೆ ಸಿಬಿಐ ಬೆದರಿಕೆ ಒಡ್ಡುತ್ತಿದೆ ಎಂದೂ ಅವರು ದೂರಿದ್ದಾರೆ.

ಆರೋಗ್ಯ ಸ್ಥಿರ: ವೈದ್ಯರ ಹೇಳಿಕೆ

ಪ್ರವೀಣ್‌ ತೊಗಾಡಿಯಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ತೊಗಾಡಿಯಾ ಅವರು ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ಹರಡುತ್ತಲೇ ವಿಎಚ್‌ಪಿಯ ನೂರಾರು ಕಾರ್ಯಕರ್ತರು ಸೋಮವಾರ ರಾತ್ರಿಯೇ ಆಸ್ಪತ್ರೆಯ ಮುಂದೆ ಜಮಾಯಿಸಿದರು.

‘ಆಂಬುಲೆನ್ಸ್‌ನಲ್ಲಿ ತೊಗಾಡಿಯಾ ಅವರನ್ನು ಯಾರೋ ಆಸ್ಪತ್ರೆಗೆ ಕರೆತಂದಿದ್ದರು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ರೂಪ್‌ಕುಮಾರ್‌ ಅಗರ್‌ವಾಲ್‌ ಹೇಳಿದ್ದಾರೆ.‌

ಅಹಮದಾಬಾದ್‌ನ ಜಂಟಿ ಪೊಲೀಸ್‌ ಕಮಿಷನರ್‌ (ಅಪರಾಧ) ಜೆ.ಕೆ. ಭಟ್‌ ಕೂಡ ವಿಎಚ್‌ಪಿ ಮುಖಂಡನ ಆರೋಗ್ಯ ವಿಚಾರಿಸಿದ್ದಾರೆ. ಅಪರಾಧ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ‍ಪಡೆದಿದ್ದಾರೆ.

* ನನಗೆ ಸಾವಿನ ಭಯವಿಲ್ಲ. ಎನ್‌ಕೌಂಟರ್‌ಗೂ ಹೆದರುವುದಿಲ್ಲ. ಆದರೆ, ನೆಲದ ಕಾನೂನು ಪಾಲಿಸುವಾಗ ನನ್ನನ್ನು ನಾನು ರಕ್ಷಿಸಿಕೊಳ್ಳಲೇಬೇಕು

-ಪ್ರವೀಣ್‌ ತೊಗಾಡಿಯಾ, ವಿಎಚ್‌ಪಿ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry