ಆಯೋಗಗಳ ಶಿಫಾರಸು ಕಡೆಗಣನೆಗೆ ಬೇಸರ

7

ಆಯೋಗಗಳ ಶಿಫಾರಸು ಕಡೆಗಣನೆಗೆ ಬೇಸರ

Published:
Updated:

ಧಾರವಾಡ: ‘ಹಲವು ಆಯೋಗಗಳ ಶಿಫಾರಸು ಇದ್ದರೂ ಕಳೆದ 70 ವರ್ಷಗಳಿಂದ ಉಪ್ಪಾರ ಸಮುದಾಯತ್ತ ಯಾವುದೇ ಸರ್ಕಾರ ಗಮನ ಹರಿಸಿಲ್ಲ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ವಾಟನಾಳ ಮಾತನಾಡಿ, ‘ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ವೆಂಕಟಸ್ವಾಮಿ, ಚಿನ್ನಪ್ಪ ರಡ್ಡಿ ಮತ್ತು ಹಾವನೂರು ಆಯೋಗಗಳ ವರದಿಯಲ್ಲಿ ಉಪ್ಪಾರ ಸಮಾಜವು ಹಿಂದುಳಿದ ಸಮಾಜವೆಂದು ವರದಿ ನೀಡಿದ್ದರೂ ಸರ್ಕಾರ ಕಿಂಚಿತ್ತೂ ಗಮನ ಹರಿಸಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಪ್ಪಾರ ಸಮುದಾಯದ ಜನರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಪರಿಶಿಷ್ಟ ಜಾತಿಯಲ್ಲಿದೆ. ಬಿಹಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಪಾರಸು ಮಾಡಲಾಗಿದೆ’ ಎಂದರು.

‘2006ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಉಪ್ಪಾರ ರಾಜ್ಯ ಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು, ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಉಪ್ಪಾರ ಸಮುದಾಯವನ್ನು ಮೀಸಲಾತಿ ಪಟ್ಟಿಗೆ ಸೇರಿಸುವುದಾಗಿ ಎರಡು ಬಾರಿ ವಾಗ್ದಾನ ನೀಡಿದ್ದರು. ಆದರೆ ಈವರೆಗೂ ಅದು ಈಡೇರಿಲ್ಲ’ ಎಂದು ಆರೋಪಿಸಿದರು.

‘ಉಪ್ಪಾರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದರೆ ಮಾತ್ರ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯ. ಹೀಗಾಗಿ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಸಮಾಜಕ್ಕಿರುವ ಆದಾಯ ಮಿತಿ ತೆಗೆದು ಹಾಕಬೇಕು. ಪ್ರತ್ಯೇಕ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು. ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಸಮಾಜದ ಸದಸ್ಯರು ಜಿಲ್ಲಾಧಿಕಾರಿಗೆಮನವಿ ಸಲ್ಲಿಸಿದರು. ಬಿಜೆಪಿ ಮುಖಂಡ ಲಕ್ಷ್ಮಣ ಉಪ್ಪಾರ, ಸರ್ಕಾರಿ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎನ್‌.ಎಂ. ದಾಟನಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry