ಅರಣ್ಯೇತರ ಉದ್ದೇಶಕ್ಕೆ ಭೂಮಿ ಬಳಕೆ: ಕ್ರಮಕ್ಕೆ ಹಿರೇಮಠ ಒತ್ತಾಯ

7

ಅರಣ್ಯೇತರ ಉದ್ದೇಶಕ್ಕೆ ಭೂಮಿ ಬಳಕೆ: ಕ್ರಮಕ್ಕೆ ಹಿರೇಮಠ ಒತ್ತಾಯ

Published:
Updated:

ಹುಬ್ಬಳ್ಳಿ: ‘ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 3,700 ಎಕರೆ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸುವ ಸಂಬಂಧ ಹೊರಡಿಸಿರುವ ಆದೇಶವನ್ನು ಸರ್ಕಾರ ರದ್ದುಗೊಳಿಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

‘ಮೀಸಲು ಅರಣ್ಯ ಭೂಮಿಯನ್ನು 2015ರಲ್ಲಿ ಅರಣ್ಯೇತರ ಚಟುವಟಿಕೆಗೆ ಬಳಸಬಹುದು ಎಂದು ಕಾನೂನು ಬಾಹಿರವಾಗಿ ಆದೇಶ ಹೊರಡಿಸಲಾಗಿದೆ. ಈ ಆದೇಶ ರದ್ದುಗೊಳಿಸುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದು  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸದರಿ ಜಾಗದಲ್ಲಿ ಈಗಾಗಲೇ ಗಣಿಗಾರಿಕೆ ಸೇರಿದಂತೆ, ಅರಣ್ಯೇತರ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ, ಕೂಡಲೇ ಅದನ್ನು ತಡೆಯಬೇಕು. ಇಲ್ಲದಿದ್ದರೆ, ಸುಪ್ರೀಂಕೋರ್ಟ್ ಮೋರೆ ಹೋಗಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಐತಿಹಾಸಿಕ ಬೆಳವಣಿಗೆ: ‘ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಮೂಲಕ, ನ್ಯಾಯಾಂಗದ ಸ್ವಾಯತ್ತತೆಗೆ ಕುತ್ತು ಇದೆ ಎಂಬುದರ ಸೂಚನೆ ನೀಡಿದ್ದಾರೆ. ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದ್ದು, ನ್ಯಾಯಾಂಗದ ಪಾವಿತ್ರ್ಯ ಮತ್ತು ಸ್ವಾಯತ್ತತೆ ಕಾಪಾಡುವ ಕೆಲಸ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry