ಅಧಿಕಾರಕ್ಕೆ ಬಂದರೆ ಅತ್ಯಾಚಾರಿಗಳಿಗೆ ಗುಂಡಿಕ್ಕಲು ಆದೇಶ: ಕುಮಾರಸ್ವಾಮಿ

7

ಅಧಿಕಾರಕ್ಕೆ ಬಂದರೆ ಅತ್ಯಾಚಾರಿಗಳಿಗೆ ಗುಂಡಿಕ್ಕಲು ಆದೇಶ: ಕುಮಾರಸ್ವಾಮಿ

Published:
Updated:
ಅಧಿಕಾರಕ್ಕೆ ಬಂದರೆ ಅತ್ಯಾಚಾರಿಗಳಿಗೆ ಗುಂಡಿಕ್ಕಲು ಆದೇಶ: ಕುಮಾರಸ್ವಾಮಿ

ಬೀದರ್‌: ‘ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಹಾಡಹಗಲೇ ಕೊಲೆ ಮಾಡುವ ದುಷ್ಕರ್ಮಿಗಳಿಗೆ ಸ್ಥಳದಲ್ಲೇ ಗುಂಡಿಕ್ಕುವ ಆದೇಶವನ್ನು ನಾವು ಅಧಿಕಾರಕ್ಕೆ ಬಂದರೆ ಹೊರಡಿಸುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಂಗಳೂರಿನಲ್ಲಿ ಮನೆಯ ಬೆಡ್‌ ರೂಮ್‌ಗೆ ನುಗ್ಗಿ ರೌಡಿ ಕೊಲೆ ಮಾಡಲಾಗಿದೆ. ವಿಜಯಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಡಿವೈಎಸ್‌ಪಿ ಮನೆಗೇ ನುಗ್ಗಿ ಸರಗಳ್ಳತನ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ದುಷ್ಕರ್ಮಿಗಳ ಅಟ್ಟಹಾಸ ತಡೆಯಲು ಕಠಿಣ ಕ್ರಮ ಅನಿವಾರ್ಯ’ ಎಂದರು.

‘ಈಗ ಎಂತಹ ಅಪರಾಧ ಮಾಡಿದರೂ ಕೆಲವು ದಿನಗಳ ನಂತರ ಜಾಮೀನು ಪಡೆದು ಜೈಲಿನಿಂದ ಹೊರಗೆ ಬರಬಹುದು ಎನ್ನುವ ವಿಶ್ವಾಸ ದುಷ್ಕರ್ಮಿಗಳಲ್ಲಿದೆ. ಹೀಗಾಗಿ ಅವರಿಗೆ ಕಾನೂನಿನ ಭಯ ಇಲ್ಲವಾಗಿದೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕಬೇಕಿದ್ದರೆ ಮೊದಲು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಆಡಳಿತದಲ್ಲಿರುವ ಪಕ್ಷಗಳು ಈ ಕೆಲಸವನ್ನು ಮೊದಲು ಮಾಡಬೇಕು’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಸಮಾನ ಅವಕಾಶ ದೊರೆಯಬೇಕು. ಶೋಷಣೆಗೆ ಒಳಗಾದವರಿಗೆ ಸಂವಿಧಾನದ ಅಡಿಯಲ್ಲಿಯೇ ಮೀಸಲಾತಿ ಕಲ್ಪಿಸಲಾಗಿದೆ. ಇನ್ನುಳಿದ ಸಮಾಜದ ಕಡು ಬಡವರ ಮಕ್ಕಳಿಗೂ ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡುವ ದಿಸೆಯಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

‘ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸರ್ಕಾರದ ಖರ್ಚಿನಲ್ಲಿ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಲಾಗುವುದು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry