ಪೊಲೀಸರನ್ನು ಎಳೆದಾಡಿದರು

7

ಪೊಲೀಸರನ್ನು ಎಳೆದಾಡಿದರು

Published:
Updated:

ಬೆಂಗಳೂರು: ವಾಹನಗಳ ತಪಾಸಣೆ ನಡೆಸುತ್ತಿದ್ದ ಬಾಗಲಗುಂಟೆ ಠಾಣೆಯ ಪೊಲೀಸರ ಜತೆ ಮೂವರು ದುಷ್ಕರ್ಮಿಗಳು ಮಂಗಳವಾರ ಸಂಜೆ ಜಗಳವಾಡಿದ್ದಾರೆ. ಸಿಬ್ಬಂದಿಯ ಸಮವಸ್ತ್ರ ಹರಿದು ಹಾಕಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು, ಜೀವ ಬೆದರಿಕೆ ಆರೋಪದಡಿ ಸುನೀತ್‌ ಕುಮಾರ್‌ (23) ಹಾಗೂ ಪ್ರಶಾಂತ್‌ (23) ಎಂಬುವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಕಿರಣ್‌

ನಾಪತ್ತೆಯಾಗಿದ್ದಾನೆ.  ಹೆಡ್‌ ಕಾನ್‌ಸ್ಟೆಬಲ್‌ ಗಿರೀಶ್‌ ಹಾಗೂ ಕಾನ್‌ಸ್ಟೆಬಲ್‌ ಹರೀಶ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸರಗಳವು ಪ್ರಕರಣಗಳು ಹೆಚ್ಚು ವರದಿಯಾಗಿದ್ದರಿಂದ ಬಂದೋಬಸ್ತ್‌ ಕೈಗೊಳ್ಳುವಂತೆ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌, ನಗರದ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದರು. ಬಾಗಲಗುಂಟೆ ಇನ್‌ಸ್ಪೆಕ್ಟರ್‌, ಹೆಚ್ಚಿನ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜನೆ ಮಾಡಿದ್ದರು.

ಇನ್‌ಸ್ಪೆಕ್ಟರ್ ಸೂಚನೆಯಂತೆ ಹೆಡ್‌ ಕಾನ್‌ಸ್ಟೆಬಲ್‌ ಗಿರೀಶ್‌ ಹಾಗೂ ಕಾನ್‌ಸ್ಟೆಬಲ್ ಹರೀಶ್‌, ವಿ.ಎನ್‌. ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಸಮೀಪದ ಪೈಪ್‌ಲೈನ್‌ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಸಂಜೆ 4 ಗಂಟೆಗೆ ಮೂವರು ಆರೋಪಿಗಳು, ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ನಿಲ್ಲಿಸಿ ಬೈಕ್‌ ದಾಖಲೆಗಳನ್ನು ತೋರಿಸುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದರು.

‘ಅಷ್ಟಕ್ಕೆ ಜಗಳ ತೆಗೆದ ಆರೋಪಿಗಳು, ಗಿರೀಶ್‌ ಸಮವಸ್ತ್ರ ಹಿಡಿದು ಎಳೆದಾಡಿದರು. ಬಿಡಿಸಲು ಹೋದ ಹರೀಶ್‌ ಅವರನ್ನು ತಳ್ಳಿದರು. ಇದನ್ನು ಕಂಡು ಸ್ಥಳೀಯರು ಸಹಾಯಕ್ಕೆ ಧಾವಿಸಿದರು. ಅಷ್ಟರಲ್ಲಿ ಕಿರಣ್‌ ಓಡಿಹೋದ. ಇನ್ನಿಬ್ಬರನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದೇವೆ’ ಎಂದು ವಿವರಿಸಿದರು.

ಮಾನವ ಹಕ್ಕು ಸಂಘಟನೆ ಹೆಸರು ಹೇಳಿ ಬೆದರಿಕೆ: ಬೈಕ್‌ ದಾಖಲೆ ತೋರಿಸಲು ನಿರಾಕರಿಸಿದ್ದ ಆರೋಪಿ ಸುನೀತ್‌ ಕುಮಾರ್‌, ‘ನಾವು ಮಾನವ ಹಕ್ಕು ಸಂಘಟನೆಯ ಸದಸ್ಯರು. ನಮ್ಮ ವಾಹನವನ್ನು ತಪಾಸಣೆ ಮಾಡಲು ನೀವ್ಯಾರು? ನಿಮಗೇನು ಅಧಿಕಾರವಿದೆ’ ಎಂದು ಅವಾಚ್ಯವಾಗಿ ನಿಂದಿಸಿದ್ದ ಎಂದು ಪೊಲೀಸರು ತಿಳಿಸಿದರು.

‘ನಮ್ಮನ್ನು ಎದುರು ಹಾಕಿಕೊಳ್ಳಬೇಡಿ. ಆ ರೀತಿ ಮಾಡಿದರೆ, ನಮ್ಮ ಸಂಘಟನೆ ವತಿಯಿಂದ ನಿಮ್ಮನ್ನು ಕೆಲಸದಿಂದ ತೆಗೆಸುತ್ತೇವೆ. ನಿಮಗೊಂದು ಗತಿ ಕಾಣಿಸುತ್ತೇವೆ’ ಎಂದು ಕೂಡಾ ಬೆದರಿಕೆ ಹಾಕಿದ್ದರು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry