ದೇವರ ಹೆಸರಿನಲ್ಲಿ ವಂಚನೆ ಆರೋಪ

6
ಪೊಲೀಸರ ರಾಜಿ ಸಂಧಾನ; ಎಚ್ಚರಿಕೆ, ಬಗೆಹರಿದ ಸಮಸ್ಯೆ

ದೇವರ ಹೆಸರಿನಲ್ಲಿ ವಂಚನೆ ಆರೋಪ

Published:
Updated:

ಹೊಸದುರ್ಗ: ತಾಲ್ಲೂಕಿನ ಮತ್ತೋಡು ಗ್ರಾಮದ ಲೋಕೇಶ್‌ ತನ್ನ ಮೈಮೇಲೆ ದೇವರು ಬರುತ್ತದೆಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಕಂಚೀಪುರದಲ್ಲಿ ಮಂಗಳವಾರ ಸಂಜೆ ಎರಡು ಗುಂಪುಗಳ ನಡುವೆ ಸಂಜೆ ಘರ್ಷಣೆ ನಡೆದಿತ್ತು.

ನಂತರದ ಬೆಳವಣಿಗೆಯಲ್ಲಿ ಕಂಚಿಪುರ ಗ್ರಾಮದಲ್ಲೇ ಆರೋಪಿಗಳ ಪರ ಮತ್ತು ವಿರೋಧದ ಬಣಗಳು ಸೃಷ್ಟಿಯಾಗಿ, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಶ್ರೀರಾಂಪುರ ಠಾಣೆ ಪೊಲೀಸರು ಬುಧವಾರ ಲೋಕೇಶ್‌ ಮತ್ತು ಎರಡೂ ಗುಂಪಿನವರನ್ನು ಕರೆಸಿ ರಾಜಿ ಸಂಧಾನ ಮಾಡಿದ್ದಾರೆ.

ಈ ವೇಳೆ ವಿರೋಧಿ ಗುಂಪಿನವರು, ‘ಕಂಚೀ ವರದರಾಜಸ್ವಾಮಿಯ ಪೂಜಾರಿಕೆ ವಂಶಸ್ಥರು ಹಾಗೂ ಆ ದೇವರ ಮುದ್ರೆ ಆಗಿರುವ ವ್ಯಕ್ತಿ ಹೊರತುಪಡಿಸಿ, ಬೇರೆ ಯಾರ ಮೇಲೂ ಬರುವುದಿಲ್ಲ. ಊರು ಬಿಟ್ಟು ಬೆಂಗಳೂರಿನಲ್ಲಿರುವ ಲೋಕೇಶ್‌ ತನ್ನ ಮೈಮೇಲೆ ಕಂಚೀವರದರಾಜಸ್ವಾಮಿ ಬರುತ್ತದೆ ಎಂದು ಜನರನ್ನು ನಂಬಿಸಿದ್ದಾನೆ. ಕಷ್ಟಗಳ ನಿವಾರಣೆಗೆಂದು ಆತನ ಬಳಿ ಹೋಗುವ ಜನರಿಂದ ಹಣ ಸುಲಿಗೆ ಮಾಡಿದ್ದಾನೆ. ಇವನನ್ನು ನಂಬಿ ಅನೇಕರು ಮೋಸ ಹೋಗಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಲೋಕೇಶ್‌ ಬೆಂಬಲಿಸುವ ಇನ್ನೊಂದು ಬಣ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ‘ಲೋಕೇಶ್‌ ಮೈಮೇಲೆ ಅನೇಕ ವರ್ಷಗಳಿಂದಲೂ ದೇವರು ಬರುತ್ತಿದೆ. ಇವನ ಮಾತಿನಂತೆ ಅನೇಕರಿಗೆ ಅನುಕೂಲಗಳಾಗಿವೆ. ಆತನ ಏಳಿಗೆ ಸಹಿಸದವರು ವಿನಾ ಕಾರಣ ದೂರುತ್ತಿದ್ದಾರೆ ಎಂದು ಮನವಿ ಮಾಡಿದರು.

ಎರಡೂ ಬಣದವರ ಅಭಿಪ್ರಾಯ ಆಲಿಸಿದ ಪಿಎಸ್‌ಐ ಶಿವನಂಜಶೆಟ್ಟಿ, ‘ಸರ್ಕಾರವೇ ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿದೆ. ಹಾಗಾಗಿ, ದೇವರು ಮೈಮೇಲೆ ಬರುತ್ತಿದೆ ಎಂದು ಹೇಳಿಕೊಂಡು ತಿರುಗಾಡಬಾರದು. ಮತ್ತೊಮ್ಮೆ ಇಂಥ ದೂರು ಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry