ಮತ ಚಲಾಯಿಸಿ; ಪ್ರಜಾಪ್ರಭುತ್ವ ಬಲಗೊಳಿಸಿ

7
ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜೋತ್ನ್ಸಾ ಕರೆ

ಮತ ಚಲಾಯಿಸಿ; ಪ್ರಜಾಪ್ರಭುತ್ವ ಬಲಗೊಳಿಸಿ

Published:
Updated:
ಮತ ಚಲಾಯಿಸಿ; ಪ್ರಜಾಪ್ರಭುತ್ವ ಬಲಗೊಳಿಸಿ

ಚಿತ್ರದುರ್ಗ: ದೇಶದಲ್ಲಿ ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬ ಪ್ರಜೆಯೂ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ನ್ಸಾ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಖಾತರಿಪಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಮತದಾನದ ಹಕ್ಕು ಚಲಾಯಿಸಿದಾಗ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆ ಮತದಾರರಲ್ಲಿರುತ್ತದೆ. ಹಕ್ಕುಗಳನ್ನು ಕೇಳುವ ಮುನ್ನ ದೇಶಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

‘ವ್ಯವಸ್ಥೆಯೇ ಸರಿಯಿಲ್ಲ. ಉತ್ತಮರು ಆಯ್ಕೆಯಾಗಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದಾಗಿ ಹಕ್ಕನ್ನು ಚಲಾಯಿಸದೆ, ದೂರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು ನಾವು ವ್ಯವಸ್ಥೆಯೊಳಗಿನ ಲೋಪ ಸರಿಪಡಿಸಲು ಪ್ರಯತ್ನಿಸಬೇಕು. ಅರ್ಹರನ್ನು ಆಯ್ಕೆ ಮಾಡದೇ, ಟೀಕೆ-ಟಿಪ್ಪಣಿ ಮಾಡುವುದರಿಂದ ಯಾರಿಗೂ ಅನುಕೂಲ ಆಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ದೇಶದ ಒಟ್ಟು ಮತದಾರರಲ್ಲಿ ಶೇ 60ರಷ್ಟು 35 ವರ್ಷದೊಳಗಿನವರೇ ಇದ್ದಾರೆ. ಭವಿಷ್ಯದ ಸದೃಢ ಭಾರತ, ನವಯುಗ ನಮ್ಮದಾಗಬೇಕಾದರೆ, ಯುವ ನಾಯಕತ್ವ ಬೆಳೆಯಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತಮರನ್ನು ಆಯ್ಕೆ ಮಾಡುವುದರಲ್ಲಿ ದೇಶದ ಭವಿಷ್ಯ ನಿಂತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ ಮಾತನಾಡಿ, ‘ಸ್ಪರ್ಧೆಯಲ್ಲಿ ಜಯ, ಅಪಜಯ ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ’ಎಂದರು.

ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಅರಿವು ಮೂಡಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದು, ತಿದ್ದುಪಡಿ ಮಾಡಿಸುವುದು, ಹೆಸರನ್ನು ಕೈ ಬಿಡುವುದು, ವರ್ಗಾವಣೆ ಈ ಎಲ್ಲ ವಿಷಯಗಳನ್ನು ಅರಿತುಕೊಳ್ಳುವುದು ಪ್ರತಿಯೊಬ್ಬ ಮತದಾರರ ಕರ್ತವ್ಯ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಹೇಳಿದರು.

ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ, ಡಿಡಿಪಿಐ ಎಂ.ರೇವಣಸಿದ್ದಪ್ಪ, ಬಿಇಒ ನಾಗಭೂಷಣ್, ಡಿಡಿಪಿಯು ತಿಮ್ಮರಾಯಪ್ಪ ಇದ್ದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮತದಾನದ ವಿಷಯದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲೆ, ಪ್ರಬಂಧ ಹಾಗೂ ಕೋಲಾಜ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

**

ಮತ ಚಲಾವಣೆಯಿಂದ ದೂರ ಉಳಿದು ವ್ಯವಸ್ಥೆಯನ್ನು ದೂರುವುದು ಬೇಜವಾಬ್ದಾರಿತನದ ಪರಮಾವಧಿ.

ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry