ನೇತ್ರಾವತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

7
ಇಬ್ಬರನ್ನು ರಕ್ಷಿಸಲು ಹೋಗಿ ತಾನೇ ಕಲ್ಲುಗಣಿ ಹೊಂಡಕ್ಕೆ ಬಲಿಯಾಗಿದ್ದ ಧೀರ ಬಾಲೆ

ನೇತ್ರಾವತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

Published:
Updated:
ನೇತ್ರಾವತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ನವದೆಹಲಿ: ಮುಚ್ಚದೆ ಬಿಟ್ಟ ಕಲ್ಲು ಕ್ವಾರಿಯ ಆಳದ ಹೊಂಡಕ್ಕೆ ಬಿದ್ದ ಇಬ್ಬರು ಬಾಲಕರನ್ನು ರಕ್ಷಿಸಲು ಮುಂದಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಕನ್ನಡ ಕಿಶೋರಿ ನೇತ್ರಾವತಿ ಮಹಾಂತೇಶ ಪ್ರತಿಷ್ಠಿತ ಗೀತಾಂಜಲಿ ಛೋಪ್ರಾ ಮರಣೋತ್ತರ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.

2017ರ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವ ಹದಿನೇಳು ಮಕ್ಕಳು/ ಪೋಷಕರ ಜೊತೆ ನೇತ್ರಾವತಿಯ ತಂದೆ ಮಹಾಂತೇಶ ಚವಾಣ ಇದೇ 24ರಂದು ಇಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ತಮ್ಮ ಕರುಳಿನ ಕುಡಿಗೆ ಸಿಕ್ಕ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. 26ರ ಗಣರಾಜ್ಯೋತ್ಸವ ಪರೇಡಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಚ್ಚದೆ ಬಿಟ್ಟ ಕಲ್ಲು ಗಣಿಕಾರಿಕೆಯ ಆಳದ ಗುಂಡಿಗಳಿಗೆ ಮಳೆಗಾಲದಲ್ಲಿ ನೀರು ತುಂಬಿ ಜನ ಜಾನುವಾರುಗಳನ್ನು ಬಲಿ ಪಡೆಯುವ ಅನೇಕ ವರದಿಗಳ ಸರಣಿಗೆ ನೇತ್ರಾವತಿ ಮುಳುಗಿದ ವರದಿಯೂ 2017ರಲ್ಲಿ ಸೇರಿ ಹೋಯಿತು.

ಬಡಕೂಲಿಕಾರರ ಕುಟುಂಬಕ್ಕೆ ಉದ್ಯೋಗ ಒದಗಿಸಿ ಆಶ್ರಯ ನೀಡಿದ್ದ ಉಡುಪಿ ಸನಿಹದ ಕನ್ನಾರಿನ ಪ್ರಸನ್ನ ಪ್ರಸಾದ್ ದಂಪತಿ ಮನಸು ಮಾಡದಿದ್ದರೆ ನೇತ್ರಾವತಿಯತ್ಯಾಗ ಮತ್ತು ಕಲ್ಲು ಕ್ವಾರಿಯನ್ನು ಮುಚ್ಚಿಸದ ಜಿಲ್ಲಾಡಳಿತದ ನಿರ್ಲಕ್ಷ್ಯ ಬೆಳಕಿಗೆ ಬರುತ್ತಿರಲಿಲ್ಲ. ಈ ದಂಪತಿಗಳ ಎಡೆಬಿಡದ ಪ್ರಯತ್ನ ಮತ್ತು ಕಳಕಳಿ ಬಡಬಾಲೆಗೆ ರಾಜ್ಯಮಟ್ಟದ ಶೌರ್ಯ ಪ್ರಶಸ್ತಿ ದೊರಕಿಸಿಕೊಟ್ಟಿತು. ರಾಷ್ಟ್ರಮಟ್ಟದ ಪ್ರತಿಷ್ಠಿತ ಗೀತಾಂಜಲಿ ಛೋಪ್ರ ಪ್ರಶಸ್ತಿ ದೊರೆಯಲು ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ನೆರವಾಯಿತು.

ಬಡ ಕೂಲಿಕಾರರ ಕುಟುಂಬಕ್ಕೆ ಸೇರಿದ ನೇತ್ರಾವತಿ ಓದಿನಲ್ಲಿ ಜಾಣೆ. ಬುದ್ಧಿಮಾಂದ್ಯ ತಮ್ಮಂದಿರನ್ನು ನೋಡಿಕೊಳ್ಳಲು ಏಳನೆಯ ತರಗತಿಗೇ ಶಾಲೆ ಬಿಡಬೇಕಾಯಿತು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ವಡ್ಡರಹೊಸೂರಿನ ಚವಾಣ ಕುಟುಂಬ ಈ ಪ್ರದೇಶದ ಇತರೆ ಸಾವಿರಾರು ಬಡಕುಟುಂಬಗಳಂತೆ ಹೊಟ್ಟೆಪಾಡು ಅರಸಿ ಕರಾವಳಿಗೆ ಗುಳೆ ಹೋಯಿತು. ಉಡುಪಿ ಸನಿಹದ ಕನ್ನಾರಿನಲ್ಲಿ ನೆಲೆ ನಿಂತಿತು. ಮಹಾಂತೇಶ ಕಲ್ಲು ಜಜ್ಜುವ ಕ್ರಶರ್ ನಲ್ಲಿ ದಿನಗೂಲಿ ಮಾಡಿದರೆ, ಆತನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸ್ಥಳೀಯ ಅನ್ನಪೂರ್ಣ ಸಸಿತೋಟದಲ್ಲಿ ಬದುಕು ಕಂಡುಕೊಂಡರು.

2017ರ ಮೇ ತಿಂಗಳಲ್ಲಿ ಜಾತ್ರೆಗೆಂದು ವಡ್ಡರಹೊಸೂರಿಗೆ ಹೊರಟಿತು ಈ ಕುಟುಂಬ. ಸ್ಥಳೀಯ ಕಲ್ಲು ಕ್ವಾರಿಯಲ್ಲಿ ಮಳೆಗಾಲದ ನೀರು 30 ಅಡಿ ಆಳಕ್ಕೆ ಭರ್ತಿಯಾಗಿತ್ತು. ಇದೇ ಕ್ವಾರಿ ನೀರಿನಲ್ಲಿ ಬಟ್ಟೆ ಒಗೆಯಲು ಕುಳಿತಿದ್ದಳು ನೇತ್ರಾವತಿ. ಆಗ ಆಕೆಯ ವಯಸ್ಸು 14 ವರ್ಷ 10 ತಿಂಗಳು.

ತನ್ನ ಮಾವನ ಇಬ್ಬರು ಮಕ್ಕಳು ಮುತ್ತು ರಾಠೋಡ (16) ಮತ್ತು ಗಣೇಶ ರಾಠೋಡ (10) ನೀರಿಗೆ ಬಿದ್ದು ಮುಳುಗುತ್ತಿದ್ದುದನ್ನು ಕಂಡು ಕಾಪಾಡುವಂತೆ ಅಲ್ಲಿಯೇ ಬಟ್ಟೆ ಒಗೆಯುತ್ತಿದ್ದ ಇತರೆ ಹೆಣ್ಣುಮಕ್ಕಳಲ್ಲಿ ಮೊರೆ ಇಟ್ಟಳು. ಅವರು ಒಗೆಯುತ್ತಿದ್ದ ಸೀರೆಯನ್ನೇ ತೇಲಿ ಬಿಟ್ಟು ಹುಡುಗರನ್ನು ರಕ್ಷಿಸಲು ಕೋರಿದಳು.ಯಾರಿಂದಲೂ ಸಹಾಯ ದೊರೆಯಲಿಲ್ಲ. ತಾನು ಒಗೆಯುತ್ತಿದ್ದ ಬಟ್ಟೆಗಳಲ್ಲಿ ಸೀರೆ ಇರಲಿಲ್ಲ. ಕಡೆಗೆ ತಾನೇ ನೀರಿಗೆ ಧುಮುಕಿ ಮುತ್ತುವನ್ನು ದಡಕ್ಕೆ ಎಳೆದು ತರುವಷ್ಟರಲ್ಲಿ ತೀರಾ ಆಯಾಸವಾಗಿತ್ತು.

ನೆರವು ಬಾರದ ಕಾರಣ ಆಯಾಸವನ್ನೂ ಲೆಕ್ಕಿಸದೆ ಎರಡನೆಯ ಸಲ ನೀರಿಗೆ ಬಿದ್ದು ಗಣೇಶನನ್ನು ಎಳೆ ತರುವ ಪ್ರಯತ್ನದಲ್ಲಿ ಸಫಲ ಆಗಲಿಲ್ಲ. ಪ್ರಾಣಪಾಯದ ಭೀತಿಯಲ್ಲಿದ್ದ ಮುತ್ತು ಈಕೆಯ ಕುತ್ತಿಗೆ ಒತ್ತಿ ಹಿಡಿದು ತಲೆಯ ಮೇಲೆ ಹತ್ತಿ ಕುಳಿತುಬಿಟ್ಟಿದ್ದ. ಇಬ್ಬರೂ ಮುಳುಗಿ ಪ್ರಾಣ ಬಿಟ್ಟದ್ದನ್ನು ದಡದಲ್ಲಿದ್ದವರು ನಿಷ್ಕ್ರಿಯರಾಗಿ ನೋಡಿದರು.

ಮಗಳನ್ನು ಕಳೆದುಕೊಂಡ ಮಹಾಂತೇಶ ಚವಾಣ ಅವರಿಗೆ ಈ ಎಲ್ಲ ವಿವರಗಳನ್ನು ಮತ್ತೊಮ್ಮೆ ಹೇಳುವಷ್ಟು ತ್ರಾಣ ಇನ್ನೂ ಬಂದಿಲ್ಲ. ತಮಗೆ ನೆರವಾದ ಉಡುಪಿಯ ಪ್ರಸನ್ನ ಪ್ರಸಾದ್ ದಂಪತಿಯ ವಿಳಾಸ ವಿವರ ನೀಡಿದರು.

ನಿರ್ಲಕ್ಷ್ಯದ ತಿಪ್ಪೆಯಲ್ಲಿ ಹೂತು ಹೋಗುತ್ತಿದ್ದ ಶೌರ್ಯ- ತ್ಯಾಗದ ಈ ಕತೆಯನ್ನು ಸರ್ಕಾರ- ಸಮಾಜಕ್ಕೆ ತಲುಪಿಸಿದ ಕನ್ನಾರಿನ ಅನ್ನಪೂರ್ಣ ನರ್ಸರಿಯ ಪ್ರಸನ್ನ- ಪ್ರಸಾದ್ ದಂಪತಿಯೇ ಈ ವಿವರಗಳನ್ನು ನಮ್ಮನ್ನು ಸಂಪರ್ಕಿಸಿದ 'ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡರು.

ಯಾರೋ ಗಣಿಗಾರಿಕೆ ನಡೆಸಿ ಲಾಭ ದೋಚಿ ಮುಚ್ಚದೆ ಬಿಟ್ಟ ಕ್ವಾರಿಯ ಸುತ್ತ ಕನಿಷ್ಠ ಪಕ್ಷ ಒಂದು ಬೇಲಿ, ಇಲ್ಲವೇ ಅಪಾಯದ ಸೂಚನೆಯ ನಾಮಫಲಕ ಹಾಕುವಷ್ಟೂ ಕಾಳಜಿ ಸರ್ಕಾರಕ್ಕೆ ಇಲ್ಲ. ಈ ಸೀಮೆಯ ಹಳ್ಳಿಗರ ಪಾಲಿಗೆ ಮಳೆಗಾಲದಲ್ಲಿ ಈ ಕ್ವಾರಿಗಳೇ ಜಲಮೂಲ. ಇದೂ ಇಲ್ಲವಾದರೆ ಬಟ್ಟೆ ತೊಳೆಯಲು ಕಿಲೋಮೀಟರು ಗಟ್ಟಲೆ ದೂರ ಹೋಗಬೇಕು ಎಂಬುದು ಕ್ರೂರವ್ಯಂಗ್ಯ.

ನೀರಿನ ಕಾರಣಕ್ಕಾಗಿ ಮತ್ತು ಕ್ವಾರಿಯ ಮಾಲೀಕರು ಪ್ರಭಾವಿ ಕುಳ ಎಂಬ ಕಾರಣಕ್ಕಾಗಿ ಅದನ್ನು ಮುಚ್ಚಿಸುವ ಮನವಿಗೆ ಸ್ಥಳೀಯರು ಸಹಿ ಹಾಕಲಿಲ್ಲ. ಶೌರ್ಯ ಪ್ರಶಸ್ತಿ ಬಿಟ್ಟರೆ, ಸರ್ಕಾರದ ನಿರ್ಲಕ್ಷ್ಯದ ಕಾರಣ ಸಿಗಲೇಬೇಕಾದ ಪರಿಹಾರ ಈ ಬಡಕುಟುಂಬಕ್ಕೆ ಜಿಲ್ಲಾಡಳಿತದಿಂದ ಸಿಕ್ಕಿಲ್ಲದಿರುವುದು ಬಡವರಿಗೆ ಬಗೆದ ಪರಮ ಅನ್ಯಾಯ ಎನ್ನುತ್ತಾರೆ ಪ್ರಸನ್ನ ಪ್ರಸಾದ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry