ಫೆ. 18ರಂದು ತ್ರಿಪುರಾ, ಫೆ. 27ರಂದು ನಾಗಾಲ್ಯಾಂಡ್‌, ಮೇಘಾಲಯದಲ್ಲಿ ಚುನಾವಣೆ

6

ಫೆ. 18ರಂದು ತ್ರಿಪುರಾ, ಫೆ. 27ರಂದು ನಾಗಾಲ್ಯಾಂಡ್‌, ಮೇಘಾಲಯದಲ್ಲಿ ಚುನಾವಣೆ

Published:
Updated:
ಫೆ. 18ರಂದು ತ್ರಿಪುರಾ, ಫೆ. 27ರಂದು ನಾಗಾಲ್ಯಾಂಡ್‌, ಮೇಘಾಲಯದಲ್ಲಿ ಚುನಾವಣೆ

ನವದೆಹಲಿ: ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದೆ. ತ್ರಿಪುರಾದಲ್ಲಿ ಫೆಬ್ರುವರಿ 18ರಂದು ಮತ್ತು ಮೇಘಾಲಯ ಹಾಗೂ ನಾಗಾಲ್ಯಾಂಡ್‌ಗಳಲ್ಲಿ ಫೆಬ್ರುವರಿ 27ರಂದು ಮತದಾನವಾಗಲಿದೆ. ಮಾರ್ಚ್‌ 3ರಂದು ಮತ ಎಣಿಕೆ ನಡೆಯಲಿದೆ.

ತ್ರಿಪುರಾದಲ್ಲಿ ಸಿಪಿಎಂ ಸರ್ಕಾರ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕಳೆದ ಕೆಲವು ವರ್ಷಗಳಲ್ಲಿ ತ್ರಿಪುರಾದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮೊದಲು, ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಮುಖ್ಯ ವಿರೋಧ ಪಕ್ಷಗಳಾಗಿದ್ದವು.

ನಾಗಾಲ್ಯಾಂಡ್‌ನಲ್ಲಿ ಅಧಿಕಾರದಲ್ಲಿರುವ ನಾಗಾ ಪೀಪಲ್ಸ್‌ ಫ್ರಂಟ್‌, ಎನ್‌ಡಿಎಯ ಭಾಗವಾಗಿದೆ. ಆದರೆ ಈ ಪಕ್ಷದಲ್ಲಿ ಈಗ ಭಾರಿ ಒಳಜಗಳ ಇದೆ. ಕಾಂಗ್ರೆಸ್‌ ಇಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದು ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಮೇಘಾಲಯದಲ್ಲಿ ಮುಕುಲ್‌ ಸಂಗ್ಮಾ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದೆ. ಇಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಮಿತ್ರಪಕ್ಷಗಳು ಭಾರಿ ಪ್ರಯತ್ನ ನಡೆಸುತ್ತಿವೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಚುನಾವಣಾ ಬಾಂಡ್‌ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ಬಳಿಕ ಚುನಾವಣೆ ನಡೆಯಲಿರುವ ಮೊದಲ ರಾಜ್ಯಗಳು ಇವು.

ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವ ವಿಚಾರದಲ್ಲಿ ಚುನಾವಣಾ ಬಾಂಡ್‌ಗಳಿಂದಾಗಿ ಪಾರದರ್ಶಕತೆ ಬರುವ ನಿರೀಕ್ಷೆ ಇದೆ. ಚುನಾವಣಾ ಬಾಂಡ್‌ ವ್ಯವಸ್ಥೆಯು ಎಷ್ಟು ಪರಿಣಾಮಕಾರಿ ಎಂಬುದನ್ನು ಚುನಾವಣಾ ಆಯೋಗವು ಪರಿಶೀಲನೆಗೆ ಒಳಪಡಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಹೇಳಿದ್ದಾರೆ.

ತ್ರಿಪುರಾದಲ್ಲಿ ಈಗ ಸಿಪಿಎಂನ 50 ಮತ್ತು ಸಿಪಿಐನ ಒಬ್ಬ ಶಾಸಕರಿದ್ದಾರೆ. ಬಿಜೆ‍ಪಿಯ ಏಳು ಮತ್ತು ಕಾಂಗ್ರೆಸ್‌ನ ಇಬ್ಬರು ಪ್ರತಿನಿಧಿಗಳಿದ್ದಾರೆ. ಮೇಘಾಲಯದಲ್ಲಿ ಕಾಂಗ್ರೆಸ್‌ 24 ಶಾಸಕರನ್ನು ಹೊಂದಿದೆ. ಯುಡಿಪಿಯ ಏಳು, ಎಚ್‌ಎಸ್‌ಪಿಡಿಪಿಯ ನಾಲ್ಕು ಶಾಸಕರಿದ್ದಾರೆ. ಬಿಜೆಪಿ ಮತ್ತು ಎನ್‌ಸಿಪಿ ತಲಾ ಎರಡು ಶಾಸಕರನ್ನು ಹೊಂದಿದೆ. ನಾಗಾಲ್ಯಾಂಡ್‌ನಲ್ಲಿ ನಾಗಾಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ 45 ಶಾಸಕರನ್ನು ಹೊಂದಿದೆ. ಬಿಜೆಪಿ ನಾಲ್ವರು ಪ್ರತಿನಿಧಿಗಳನ್ನು ಹೊಂದಿದೆ.

ಈ ರಾಜ್ಯಗಳಲ್ಲಿ ತಲಾ 60 ಕ್ಷೇತ್ರಗಳಿವೆ. ಮತದಾನ ದೃಢೀಕರಣ ಯಂತ್ರವನ್ನು ಎಲ್ಲ ಮತಗಟ್ಟೆಗಳಲ್ಲಿಯೂ ಬಳಸಲಾಗುವುದು.

ಗೋರಖಪುರ: ಮಾರ್ಚ್‌ನಲ್ಲಿ ಉಪಚುನಾವಣೆ?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆಯಿಂದ ತೆರವಾಗಿರುವ ಗೋರಖಪುರ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ರಾಜೀನಾಮೆಯಿಂದ ತೆರವಾದ ಫುಲ್ಪುರ ಲೋಕಸಭಾ ಕ್ಷೇತ್ರಗಳಿಗೆ ಮಾರ್ಚ್‌ ತಿಂಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry