ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

7

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

Published:
Updated:
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

ಚಿಂಚೋಳಿ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜಾತ್ಯತೀತ ಜನತಾ ದಳ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವ್ಯಕ್ತಪಡಿಸಿದರು. ಗುರುವಾರ ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಧ್ಯಮಗಳು ಜೆಡಿಎಸ್‌ ಎರಡಂಕಿ ತಲುಪುವುದಿಲ್ಲ ಎನ್ನುತ್ತಿದ್ದವು. ಈಗ 45ರಿಂದ 60 ಸ್ಥಾನ ಗೆಲ್ಲಲಿದೆ ಎನ್ನುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯದ 6.5 ಕೋಟಿ ಜನರ ಆಶೀರ್ವಾದದಿಂದ ಜೆಡಿಎಸ್‌ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯಲಿದೆ’ ಎಂದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಕುಳಿತು ಕಾಲಹರಣ ಮಾಡಲಿಲ್ಲ. ಗ್ರಾಮ ವಾಸ್ತವ್ಯದ ಮೂಲಕ ಜನ ಸಾಮಾನ್ಯರ ಬಳಿಗೆ ಬಂದು ಅವರ ಕಷ್ಟ ಆಲಿಸಿದೆ. ಅಂದು ಹುಮ್ನಾಬಾದ ಮತಕ್ಷೇತ್ರದ ಮುಸಲ್ಮಾನ ಸಮುದಾಯದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ದಿವಂಗತ ಮಿರಾಜುದ್ದಿನ್‌ ಪಟೇಲ್‌ ನನಗೆ ವಿಷಯ ತಿಳಿಸಿದಾಗ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ನಿಶ್ಚಯಿಸಿ, ಅಲ್ಲಿಗೆ ಬಂದು ವಾಸ್ತವ್ಯ ಮಾಡಿದೆ’.

‘ರೈತನ ಮನೆಯಲ್ಲಿ ಊಟ ಮಾಡಿ ಅವರ ಗೋಳು ಕೇಳಿದೆ. ಈ ರೈತರ ಸಮಸ್ಯೆಗೆ ಪರಿಹಾರ ಇಲ್ಲವೆ ಎಂದು ಚಿಂತಿಸಿದೆ. ಮರುದಿನ ಬೆಳಿಗ್ಗೆ ಎದ್ದು ಮೊದಲು ನಾನು ಘೋಷಣೆ ಮಾಡಿದ್ದು ರೈತರ ಸಾಲ ಮನ್ನಾ. ಆಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಾಲಮನ್ನಾ ವಿರೋಧಿಸಿದರು. ಆದರೆ, ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಒಂದೊಮ್ಮೆ ಸದನದಲ್ಲಿ ಸಾಲ ಮನ್ನಾ ಕುರಿತು ಚರ್ಚೆ ನಡೆದಾಗ ಬಿಎಸ್‌ವೈ ಹೇಳಿದರು ‘ನನಗೆ ಕೇಂದ್ರ ಸರ್ಕಾರ ನೋಟು ಮುದ್ರಿಸುವ ಯಂತ್ರ ನೀಡಿಲ್ಲ. ಹೀಗಾಗಿ, ಸಾಲ ಮನ್ನಾ ಸಾಧ್ಯವಿಲ್ಲ’ ಎಂದರು. ಆದರೆ, ನನಗೆ ಯಾವ ರೈತರು ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸದಿದ್ದರೂ ನಾನು ಸಾಲ ಮನ್ನಾ ಮಾಡಿ, ಕೇವಲ 20 ದಿನಗಳಲ್ಲಿ ರೈತರ ಖಾತೆಗೆ ಹಣ ಬಿಡುಗಡೆ ಮಾಡಿದೆ. ಇದು ನನಗೂ ಬಿಎಸ್‌ವೈಗೂ ಇರುವ ವ್ಯತ್ಯಾಸ’ ಎಂದು ಕುಮಾರಸ್ವಾಮಿ ವಿವರಿಸಿದರು.

‘ಕಳೆದ 4 ವರ್ಷದಿಂದ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಲಮನ್ನಾಕ್ಕೆ ಒತ್ತಾಯಿಸಿ ಹೋರಾಟ ನಡೆಸಿದೆ. ಇದಕ್ಕೆ ಮಣಿದು ಕಳೆದ ಸಾಲಿನ ಜೂನ್‌ 18ರಂದು ಸಿದ್ದರಾಮಯ್ಯ ₹50 ಸಾವಿರವರೆಗಿನ ಸಹಕಾರಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, 7 ತಿಂಗಳು ಗತಿಸಿದರೂ ರೈತರ ಖಾತೆ ಹಣ ಬರಲಿಲ್ಲ. ಕೇವಲ ಸುಳ್ಳು ಹೇಳುವುದು ಹಾಗೂ ಬಿಜೆಪಿ–ಕಾಂಗ್ರೆಸ್‌ ಕೆಸರೆರಚಾಟದಲ್ಲಿಯೇ ಕಾಲಹರಣ ಮಾಡುತ್ತಿವೆ. ಇದು ನನಗೂ ಸಿದ್ದರಾಮಯ್ಯನವರಿಗೂ ಇರುವ ವ್ಯತ್ಯಾಸ’ ಎಂದರು.

‘ನನಗೆ ಒಂದು ಬಾರಿ ಅವಕಾಶ ಕೊಡಿ. ರಾಜ್ಯದ ಜನರ ಜೀವನ ಉಜ್ವಲಗೊಳಿಸುತ್ತೇನೆ. ಅತಂತ್ರ ವಿಧಾನಸಭೆಯಿಂದ ಜನಪರ ಸರ್ಕಾರ ಸಾಧ್ಯವಿಲ್ಲ. ಹೀಗಾಗಿ, ಪೂರ್ಣಪ್ರಮಾಣದಲ್ಲಿ ಬಹುಮತ ಸಿಗಬೇಕು. ಇದಕ್ಕಾಗಿ ನಾನು 113 ಸ್ಥಾನ ಗೆಲ್ಲುವ ಗುರಿಯೊಂದಿಗೆ ರಾಜ್ಯದಲ್ಲಿ ಪ್ರವಾಸ ನಡೆಸಿದ್ದೇನೆ. ನನ್ನ ತಂಗಿ ಸುಶೀಲಾಬಾಯಿಯನ್ನು ಗೆಲ್ಲಿಸಿ, ನನ್ನ ಶಕ್ತಿ ಹೆಚ್ಚಿಸಿ’ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಜೆಡಿಎಸ್‌ ಅಭ್ಯರ್ಥಿ ಸುಶೀಲಾಬಾಯಿ ಬಸವರಾಜ ಕೊರವಿ, ನಶೀಮ ಪಟೇಲ್‌, ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು.

ಪಕ್ಷದ ನಾಯಕರಾದ ಅಲ್ತಾಫ್‌, ಜಾಫರ್‌ ಹುಸೇನ್‌, ಕೃಷ್ಣಾರೆಡ್ಡಿ, ಶಿವಕುಮಾರ ಕೊಳ್ಳೂರು, ಶಿವಕುಮಾರ ನಾಟಿಕಾರ, ಆರ್‌.ಆರ್‌.ಪಾಟೀಲ, ರವಿಶಂಕರರೆಡ್ಡಿ ಮುತ್ತಂಗಿ, ಸಿದ್ದಯ್ಯಸ್ವಾಮಿ, ರಜಾಕ್‌ ಪಟೇಲ್‌, ಸುಭಾಷ ಪಾಟೀಲ ಕಾಳಗಿ, ಶೇಖ್‌ ಭಕ್ತಿಯಾರ್‌ ಜಹಾಗೀರದಾರ, ಮಾಜೀದ್‌ ಪಟೇಲ್‌, ದೌಲಪ್ಪ ಸುಣಗಾರ ಮಗ್ದುಮ್‌ ಖುರೇಷಿ ಇದ್ದರು.

* * 

ಬಿಜೆಪಿಯವರು ಯಾರನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಪ್ರವೀಣ ಭಾಯಿ ತೊಗಾಡಿಯಾ ಹೇಳಿಕೆ ಓದಿ ಅರ್ಥೈಸಿಕೊಂಡರೆ ಸಾಕು. ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಎಚ್‌.ಡಿ.ಕುಮಾರಸ್ವಾಮಿ,

ಜೆಡಿಎಸ್‌ ರಾಜ್ಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry