ಚಳಿಗಾಲಕ್ಕೂ ಜಂಪ್‌ಸೂಟ್‌’

7

ಚಳಿಗಾಲಕ್ಕೂ ಜಂಪ್‌ಸೂಟ್‌’

Published:
Updated:
ಚಳಿಗಾಲಕ್ಕೂ ಜಂಪ್‌ಸೂಟ್‌’

ಜಂಪ್‌ಸೂಟ್‌’ ಎಂದೊಡನೆ ಅದು ಬೇಸಿಗೆಯ ತೊಡುಗೆ ಎಂದು ಪಕ್ಕಕ್ಕೆ ಸರಿಸುವುದೇನೂ ಬೇಡ. ಅದೇ ದಿರಿಸಿಗೆ ಬೇರೆ ವಸ್ತ್ರಗಳನ್ನು ಜೋಡಿಸಿ ಚಳಿಗಾಲದ ತೊಡುಗೆಯನ್ನಾಗಿ ಮಾರ್ಪಡಿಸಿಕೊಳ್ಳುವುದು ಸುಲಭ.

ಕಾಲೇಜು, ಕಚೇರಿ, ಪಿಕ್‌ನಿಕ್‌, ಪಾರ್ಟಿ... ಹೀಗೆ ದಿನದ ಸಾಮಾನ್ಯ ನೋಟದಿಂದ ಹಿಡಿದು ವಿಶೇಷ ಸಂದರ್ಭಗಳಲ್ಲೂ ಹೊಂದಿಕೊಳ್ಳುವ ಗುಣ ಜಂಪ್‌ಸೂಟ್‌ಗೆ ಇದೆ. ಆದರೆ ಅದನ್ನು ಯಾವಾಗ, ಹೇಗೆ ತೊಡಬೇಕು, ಆಯಾ ಸಂದರ್ಭಕ್ಕೆ ತಕ್ಕಂತೆ ಅದರೊಂದಿಗೆ ಏನೇನು ಹೊಂದಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ.

ಸರಿಯಿರಲಿ ಅಳತೆ: ಜಂಪ್‌ಸೂಟ್‌ ಆಯ್ದುಕೊಳ್ಳುವಾಗ ಮೊಟ್ಟ ಮೊದಲು ಗಮನಿಸಬೇಕಾದ ಸಂಗತಿ ಎಂದರೆ ಸೂಕ್ತ ಅಳತೆ. ಹೌದು, ಸರಿಯಾದ ಅಳತೆ ಜಂಪ್‌ಸೂಟ್‌ನ ಮೊದಲ ಮತ್ತು ಮಹತ್ವದ ವಿಚಾರ. ಅಳತೆ ಸರಿ ಇಲ್ಲದಿದ್ದರೆ ನಿಮ್ಮ ಫ್ಯಾಷನ್‌ ಪ್ರಜ್ಞೆ ಬುಡಮೇಲಾಗಬಹುದು.

ನಿಮ್ಮ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವ ಜಂಪ್‌ಸೂಟ್‌ ಆಯ್ದುಕೊಳ್ಳಿ. ತುಂಬಾ ಬಿಗಿಯಾದ ಅಥವಾ ತುಂಬಾ ಸಡಿಲವಾದ ದಿರಿಸು ಬೇಡ. ಹಾಗೆಯೇ ಅದರ ಉದ್ದವೂ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ಆದರೆ ನಿಮ್ಮ ಆಸಕ್ತಿಗೆ ಅನುಗುಣವಾಗಿ ಆ್ಯಂಕಲ್‌ ಲೆಂಗ್ತ್‌ ಆಯ್ಕೆಗೂ ಹೋಗಬಹುದು.

ಸೊಂಟದ ವಿಷಯ: ಹೆಣ್ಣುಮಕ್ಕಳ ಆಕರ್ಷಣೆ ಅಡಗಿರುವುದೇ ನಡುವಿನಲ್ಲಿ. ಜಂಪ್‌ಸೂಟ್‌ ಧರಿಸುವಾಗ ನಿಮ್ಮ ಸೊಂಟದ ಅಂದ ಮರೆಮಾಚದಂತೆ ನೋಡಿಕೊಳ್ಳುವುದೂ ಮುಖ್ಯ. ಹೆಚ್ಚಿನ ಜಂಪ್‌ಸೂಟ್‌ಗಳಿಗೆ ಬೆಲ್ಟ್ ಇದ್ದೇ ಇರುತ್ತದೆ. ಇಲ್ಲದೆ ಇದ್ದರೆ ನಿಮ್ಮ ದಿರಿಸಿಗೆ ಹೊಂದುವ ಬೆಲ್ಟ್ ಅಥವಾ ಲೇಸ್‌ ಒಂದನ್ನು ನೀವೇ ಆಯ್ದುಕೊಂಡು ಜೋಡಿಸಿಕೊಳ್ಳಬಹುದು. ಜಂಪ್‌ಸೂಟ್‌ ತುಸು ಗಾಢ ಬಣ್ಣದ್ದಾಗಿದ್ದರೆ ವಿಶಾಲವಾದ ಲೆದರ್‌ ಬೆಲ್ಟ್ ಅಥವಾ ಚೈನ್‌ ಬೆಲ್ಟ್‌ ಬೋಲ್ಡ್‌ ಲುಕ್‌ ನೀಡುತ್ತದೆ.

ಓವರ್‌ ಕೋಟ್‌: ಜಂಪ್‌ಸೂಟ್‌ಗಳು ಸಾಮಾನ್ಯವಾಗಿ ಸ್ಲೀವ್‌ಲೆಸ್‌ ಇರುತ್ತವೆ. ಈ ಚಳಿಯಿಂದ ರಕ್ಷಿಸಿಕೊಳ್ಳಲು ಅದರ ಮೇಲೆ ಕೇಪ್‌, ಬ್ಲೇಜರ್, ಓವರ್‌ಕೋಟ್‌, ಜಾಕೆಟ್‌, ಕ್ಯಾಪ್‌, ಮಫ್ಲರ್‌ಗಳನ್ನು ಜೋಡಿಸಿದರೆ ಆ ನೋಟವೇ ಬೇರೆ. ಆದರೆ ಮೇಲುಡುಪುಗಳು ನಿಮ್ಮ ಜಂಪ್‌ಸೂಟ್‌ನ ಬಣ್ಣ ಹಾಗೂ ನಿಮ್ಮ ಆಕಾರಕ್ಕೆ ಒಪ್ಪುವಂತಿರಬೇಕು. ಕ್ಯಾಶುಯಲ್ ಲುಕ್‌ಗಾಗಿ ಜಂಪ್‌ಸೂಟ್‌ ಮೇಲೆ ಡೆನಿಮ್ ಜಾಕೆಟ್ ಸರಿ. ವೃತ್ತಿಪರ ನೋಟಕ್ಕಾಗಿ ಅದರ ಮೇಲೆ ಬ್ಲೇಜರ್ ತೊಡಿ. ಗಾಢ ಬಣ್ಣದ ಜಂಪ್‌ಸೂಟ್‌ಗೆ ಸೊಂಟದ ಮೇಲೆ ಬರುವ ಲೆದರ್‌ ಜಾಕೆಟ್‌ ಒಪ್ಪುತ್ತದೆ. ತುಪ್ಪಳದ ಸ್ಕಾರ್ಫ್ ಹಾಗೂ ಫ್ಲಾಪಿ ಹ್ಯಾಟ್ ಕೂಡ ಚಳಿಗೆ ಹೇಳಿ ಮಾಡಿಸಿದ ಆಯ್ಕೆ.

ಕಾಲಿಗೆ ಹೈ ಹೀಲ್ಡ್‌ ಅಥವಾ ಆ್ಯಂಕಲ್‌ ಲೆಂತ್‌ ಬೂಟುಗಳನ್ನು ಜೋಡಿಸಿಕೊಳ್ಳಬಹುದು. ಒಂದು ವೇಳೆ ನೀವು ಚಳಿಗೆಂದೇ ವಿಶೇಷವಾಗಿ ಜಂಪ್‌ಸೂಟ್‌ ಕೊಳ್ಳಬೇಕೆಂದಿದ್ದರೆ ಫ್ಯಾಬ್ರಿಕ್‌ ಮೇಲೆ ಗಮನವಿರಲಿ. ಬೇಸಿಗೆಯ ಜಂಪ್‌ಸೂಟ್‌ಗೂ ಚಳಿಗಾಲದ ಜಂಪ್‌ಸೂಟ್‌ಗೂ ಸಣ್ಣ ವ್ಯತ್ಯಾಸ ಇರುತ್ತದೆ. ಬೇಸಿಗೆಯಲ್ಲಿ ಬಹುತೇಕ ಹಗುರವಾದ ಕಾಟನ್‌ ಫ್ಯಾಬ್ರಿಕ್‌ನ ತೋಳಿಲ್ಲದ ದಿರಿಸಿಗೇ ಆದ್ಯತೆ. ಆದರೆ ಚಳಿಗಾಲಕ್ಕೆ ಬಂದಾಗ ತುಸು ದಪ್ಪವಾದ, ಗಾಢ ಬಣ್ಣದ, ಸಾಮಾನ್ಯವಾಗಿ ತೋಳಿರುವ ವಸ್ತ್ರಗಳೇ ಇರುತ್ತವೆ. ಉಲನ್‌, ಜರ್ಸಿ, ಟ್ವಿಲ್ ಫ್ಯಾಬ್ರಿಕ್ ಜಂಪ್‌ಸೂಟ್‌ಗಳು ಚಳಿಗಾಲಕ್ಕೆ ಉತ್ತಮ.

ಬಣ್ಣಗಳನ್ನು ಹೊಂದಿಸಿ: ಬಹುತೇಕ ಎಲ್ಲಾ ಜಪ್‌ಸೂಟ್‌ಗಳೂ ಒಂದೇ ಬಣ್ಣದಲ್ಲಿ ಬರುತ್ತವೆ. ಈ ಏಕತಾನತೆಯನ್ನು ಮುರಿಯಲು ಗಾಢ ಬಣ್ಣದ ಬ್ಲೇಜರ್‌ ಅಥವಾ ಕೋಟ್‌ಗಳನ್ನು ಧರಿಸಬಹುದು. ಜಂಪ್‌ಸೂಟ್‌ನ ವೈಶಿಷ್ಟ್ಯ ಅಡಗಿರುವುದು ಅದನ್ನು ತೊಡುವ ಶೈಲಿಯಲ್ಲಿ. ಎಲ್ಲರಿಗೂ ಎಲ್ಲ ಥರದ ಜಂಪ್‌ಸೂಟ್‌ಗಳು ಹೊಂದುವುದಿಲ್ಲ. ನಿಮ್ಮ ಎತ್ತರ, ಮೈಮಾಟ ಹಾಗೂ ಆಸಕ್ತಿಗೆ ಅನುಗುಣವಾಗಿ ಸರಿಯಾದುದನ್ನು ಆಯ್ದುಕೊಳ್ಳಿ.

ಬೇಸಿಗೆಯ ನಿಮ್ಮ ಜಂಪ್‌ಸೂಟ್‌ ಅನ್ನೂ ಚಳಿಯ ಉಡುಗೆಯಾಗಿ ಮಾರ್ಪಡಿಸಬಹುದು. ಅದಕ್ಕೆ ಮೇಲೆ ಓವರ್‌ ಕೋಟ್‌ ಹಾಕುವುದೊಂದೇ ಅಲ್ಲ, ಒಳಗೆ ಉದ್ದ ತೋಳಿನ ಶರ್ಟ್‌ ಅಥವಾ ಟೀ–ಶರ್ಟ್‌ ಜೋಡಿಸಿಕೊಳ್ಳಬಹುದು. ಹಾಗೆಯೇ ಕಾಲಿಗೆ ಒಳಗೊಂದು ಲೆಗ್ಗಿಂಗ್‌ ಧರಿಸುವ ಮೂಲಕ ಚಳಿಯನ್ನು ತಡೆಯಬಹುದು.–ಪ್ರಿಯಾಂಕಾ ಚೋಪ್ರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry