ಜನಪ್ರತಿನಿಧಿಗಳ ‘ಲಾಭದಾಯಕ ಹುದ್ದೆ’ಯ ಸುತ್ತ ಮುತ್ತ...

7

ಜನಪ್ರತಿನಿಧಿಗಳ ‘ಲಾಭದಾಯಕ ಹುದ್ದೆ’ಯ ಸುತ್ತ ಮುತ್ತ...

Published:
Updated:
ಜನಪ್ರತಿನಿಧಿಗಳ ‘ಲಾಭದಾಯಕ ಹುದ್ದೆ’ಯ ಸುತ್ತ ಮುತ್ತ...

ಎನ್‌ಎಸಿ ಅಧ್ಯಕ್ಷತೆಗಾಗಿ ದಂಡ ತೆತ್ತಿದ್ದ ಸೋನಿಯಾ

ನವದೆಹಲಿ: ಹತ್ತಿರ ಹತ್ತಿರ 12 ವರ್ಷಗಳ ಹಿಂದೆ, ಲಾಭದಾಯಕ ಹುದ್ದೆ ಕಾನೂನಿನಿಂದಾಗಿ ಆಗಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತಲೆದಂಡವಾಗಿತ್ತು. ಆಗ ಅವರು ರಾಷ್ಟ್ರೀಯ ಸಲಹಾ ಮಂಡಳಿಯ (ಎನ್‌ಎಸಿ) ಅಧ್ಯಕ್ಷೆಯಾಗಿದ್ದರು.

ಸಂಸದೆಯಾಗಿರುವ ಸೋನಿಯಾ ಎನ್‌ಎಸಿಯ ಅಧ್ಯಕ್ಷೆಯೂ ಆಗಿರುವುದು ಲಾಭದಾಯಕ ಹುದ್ದೆ ಎಂದು ಅವರ ವಿರುದ್ಧ ಆರೋಪ ಇತ್ತು. ಮಂಡಳಿಯ ಅಧ್ಯಕ್ಷ ಹುದ್ದೆಗೆ ಕೇಂದ್ರ ಸಂಪುಟ ಸಚಿವ ಸ್ಥಾನ ಇತ್ತು.

ಎನ್‌ಎಸಿ ಅಧ್ಯಕ್ಷ ಹುದ್ದೆಗೆ ಲಾಭದಾಯಕ ಹುದ್ದೆ ಕಾಯ್ದೆಯಿಂದ ವಿನಾಯಿತಿ ಪಡೆದುಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ ಮರೆತು ಹೋಗಿತ್ತು. ಮನಮೋಹನ್‌ ಸಿಂಗ್‌ ನೇತೃತ್ವದ ಆಗಿನ ಸರ್ಕಾರಕ್ಕೆ ಸಲಹೆ ನೀಡಲು ಎನ್‌ಎಸಿ ರಚಿಸಲಾಗಿತ್ತು.

ಸಮಾಜವಾದಿ ಪಕ್ಷದಿಂದ ರಾಜ್ಯಸಭೆ ಸದಸ್ಯೆಯಾಗಿದ್ದ ಜಯಾ ಬಚ್ಚನ್‌, ಉತ್ತರ ಪ್ರದೆಶ ಚಲನಚಿತ್ರ ಅಭಿವೃದ್ಧಿ ನಿಗಮದ ಆಧ್ಯಕ್ಷೆಯೂ ಆಗಿದ್ದರು. ಇದು ಲಾಭದಾಯಕ ಹುದ್ದೆಯಾಗಿದ್ದು ಜಯಾ ರಾಜೀನಾಮೆ  ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷವೇ ಭಾರಿ ಒತ್ತಡ ಹೇರಿತ್ತು. ಕಾಂಗ್ರೆಸ್‌ನ ಅಧ್ಯಕ್ಷೆಯೇ ಇಂತಹುದೊಂದು ಲಾಭದಾಯಕ ಹುದ್ದೆಯಲ್ಲಿದ್ದಾರೆ ಎಂಬುದು ಆಗ ಎಲ್ಲರ ಗಮನಕ್ಕೆ ಬಂತು.

ಸಂವಿಧಾನದ 102 (1) (ಎ) ವಿಧಿಯ ಪ್ರಕಾರ, ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದಲ್ಲಿ ಸಂಸದರೊಬ್ಬರು ಲಾಭದಾಯಕ ಹುದ್ದೆ ಹೊಂದಿದ್ದರೆ ಅಂಥವರ ಸದಸ್ಯತ್ವ ರದ್ದಾಗುತ್ತದೆ. ಸಂಸತ್ತಿನಲ್ಲಿ ಕಾನೂನು ರೂಪಿಸುವ ಮೂಲಕ ಲಾಭದಾಯಕ ಹುದ್ದೆ ಕಾನೂನಿನಿಂದ ವಿನಾಯಿತಿ ಪಡೆದ ಹುದ್ದೆಗಳಿಗೆ ಈ ವಿಧಿ ಅನ್ವಯ ಆಗುವುದಿಲ್ಲ.

ಸೋನಿಯಾ ವಿರುದ್ಧ ಸಲ್ಲಿಕೆಯಾದ ದೂರನ್ನು ಚುನಾವಣಾ ಆಯೋಗವು ಪರಿಶೀಲನೆ ನಡೆಸುತ್ತಿರುವಾಗಲೇ 2006ರ ಮಾರ್ಚ್‌ 23ರಂದು ಸಂಸದ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು. ಮತ್ತೆ ಅವರು ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದೆಯಾದರು. ಈ ಮಧ್ಯೆ, ಲಾಭದಾಯಕ ಹುದ್ದೆ ಕಾನೂನಿಗೆ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರ, ಎನ್‌ಎಸಿ ಅಧ್ಯಕ್ಷ ಹುದ್ದೆ ಮತ್ತು ಇತರ ಹಲವು ಹುದ್ದೆಗಳಿಗೆ ವಿನಾಯಿತಿ ನೀಡಿತು.

ಲಾಭದಾಯಕ ಹುದ್ದೆಯ ಕಾರಣಕ್ಕೆ ಚುನಾವಣಾ ಆಯೋಗವು ಸದಸ್ಯತ್ವ ರದ್ದು ಮಾಡಿದ ಮೊದಲ ಸಂಸದೆ ಜಯಾ ಬಚ್ಚನ್‌. ರಾಜ್ಯಸಭಾ ಸದಸ್ಯರಾಗಿದ್ದ ಉದ್ಯಮಿ ಅನಿಲ್ ಅಂಬಾನಿ ಕೂಡ ಲಾಭದಾಯಕ ಹುದ್ದೆ ಕಾನೂನಿನ ಕಾರಣಕ್ಕೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ವಜಾ ಆದದ್ದೇ ಹೆಚ್ಚು

ನವದೆಹಲಿ: ಮೊದಲ ಬಾರಿಗೆ, 12 ವರ್ಷಗಳ ಹಿಂದೆ ಜಯಾ ಬಚ್ಚನ್‌ ಅವರನ್ನು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬಳಿಕ ಚುನಾವಣಾ ಆಯೋಗಕ್ಕೆ ಇಂತಹ ಹಲವಾರು ಅರ್ಜಿಗಳು ಬಂದಿವೆ. ಆದರೆ ಅವುಗಳಲ್ಲಿ ಬಹುಪಾಲು ತಿರಸ್ಕೃತವಾಗಿವೆ.

ಮಧ್ಯಪ್ರದೇಶದ ರಿತಿ ಪಾಠಕ್‌ ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದಾಗಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಹಾಗಾಗಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ದೂರು ನೀಡಲಾಗಿತ್ತು. ಈ ದೂರು 2017ರ ಅಕ್ಟೋಬರ್‌ನಲ್ಲಿ ತಿರಸ್ಕೃತವಾಯಿತು. ಇದು ಲಾಭದಾಯಕ ಹುದ್ದೆಯ ಅರ್ಜಿ ತಿರಸ್ಕೃತವಾದ ತೀರಾ ಇತ್ತೀಚಿನ ಪ್ರಸಂಗ.

ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ ಚಟರ್ಜಿ, ಉದ್ಯಮಿ ಅನಿಲ್‌ ಅಂಬಾನಿ, ಸಿಪಿಎಂ ಸಂಸದ ಮೊಹಮ್ಮದ್‌ ಸಲೀಂ ಮುಂತಾದವರಿಗೆ ಲಾಭದಾಯಕ ಹುದ್ದೆ ಕಾಯ್ದೆಯ ಬಿಸಿ ಮುಟ್ಟಿದೆ.

ಆಯೋಗವು ನಿರ್ಧಾರ ಕೈಗೊಳ್ಳುವ ಮೊದಲೇ ಸೋನಿಯಾ ಮತ್ತು ಅನಿಲ್ ಅಂಬಾನಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಪವಾರ್‌ ಮತ್ತು ಪಟ್ನಾಯಕ್‌ ವಿರುದ್ಧದ ದೂರುಗಳು ತಿರಸ್ಕೃತವಾದವು. ಪವಾರ್‌ ಅವರು ಭಾರತೀಯ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇದು ಲಾಭದಾಯಕ ಹುದ್ದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.

ಈಗ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿರುವ ಅಲ್ಫೋನ್ಸ್‌ ಕಣ್ಣಂತಾನಂ 2006ರಲ್ಲಿ ಕೇರಳದ ಶಾಸಕರಾಗಿದ್ದಾಗ ಅವರ ವಿರುದ್ಧವೂ ಲಾಭದಾಯಕ ಹುದ್ದೆ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿತ್ತು. ಭಾರತೀಯ ಆಡಳಿತ ಸೇವೆಗೆ (ಐ.ಎ.ಎಸ್‌) ಕ್ರಮಬದ್ಧವಾಗಿ ರಾಜೀನಾಮೆ ನೀಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿತ್ತು. ಆದರೆ ಈ ದೂರು ಕೂಡ ವಜಾ ಆಗಿತ್ತು.

ಹಿಂದೆ ದೆಹಲಿಯಲ್ಲಿ ಶೀಲಾ ದೀಕ್ಷಿತ್‌ ನೇತೃತ್ವದ ಸರ್ಕಾರ ಇದ್ದಾಗ ಕಾಂಗ್ರೆಸ್‌ನ 19 ಶಾಸಕರ ವಿರುದ್ಧ ಬಿಜೆಪಿಯ ವಿಜಯ್‌ ಜೋಲಿ ದೂರು ನೀಡಿದ್ದರು. ಆದರೆ ಈ ದೂರು ತಿರಸ್ಕೃತವಾಗಿತ್ತು. ಬಿಜೆಪಿಯ ಹಿರಿಯ ಮುಖಂಡ ವಿ.ಕೆ. ಮಲ್ಹೋತ್ರಾ ವಿರುದ್ಧದ ದೂರು ಕೂಡ ವಜಾ ಆಗಿತ್ತು.

ದೆಹಲಿ ಸರ್ಕಾರದ ಕಾಯ್ದೆ

‘ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳ ಹುದ್ದೆಗಳಲ್ಲಿ ಇರುವ ವ್ಯಕ್ತಿಯನ್ನು ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಬಹುದು’ ಎಂದು ‘ರಾಷ್ಟ್ರೀಯ ರಾಜಧಾನಿ ಪ್ರದೇಶ–ದೆಹಲಿ ಸರ್ಕಾರದ ಕಾಯ್ದೆ–1991’ರ ಸೆಕ್ಷನ್ 15 (1)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಇದೇ ಕಾಯ್ದೆಯ ಸೆಕ್ಷನ್ 15 (2) ದೆಹಲಿ ಸರ್ಕಾರದ ಸಚಿವರನ್ನು ಲಾಭದಾಯಕ ಹುದ್ದೆಯ ಕಾರಣಕ್ಕೆ ಅನರ್ಹಗೊಳಿಸುವುದರಿಂದ ವಿನಾಯಿತಿ ನೀಡುತ್ತದೆ. ಅನರ್ಹತೆಗೆ ಸಂಬಂಧಿಸಿದಂತೆ ವ್ಯಾಜ್ಯಗಳು ತಲೆದೋರಿದಲ್ಲಿ, ಅದನ್ನು ರಾಷ್ಟ್ರಪತಿ ಪರಿಶೀಲನೆಗೆ ಕಳುಹಿಸಬೇಕು ಎಂದು ಈ ಕಾಯ್ದೆಯ ಸೆಕ್ಷನ್ 15 (3) ಹೇಳುತ್ತದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿಯ ತೀರ್ಮಾನವೇ ಅಂತಿಮ.

ಆದರೆ ಅದಕ್ಕೂ ಮುನ್ನ ರಾಷ್ಟ್ರಪತಿ ಈ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯ ಕೇಳಬೇಕು. ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಬದ್ಧವಾಗಿರುತ್ತಾರೆ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.

‌ತದ್ದುಪಡಿ ತಿರಸ್ಕೃತ...

ಮಾರ್ಚ್ 13, 2015: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಪಕ್ಷದ 21 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದರು

ಜೂನ್ 19, 2015: ಈ ನೇಮಕದ ವಿರುದ್ಧ ವಕೀಲ ಪ್ರಶಾಂತ್ ಪಟೇಲ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು

ಜೂನ್ 24, 2015: ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ‘ಲಾಭದಾಯಕ ಹುದ್ದೆ’ ಪಟ್ಟಿಯಿಂದ ಹೊರಗಿಟ್ಟು, ಅದು ಪೂರ್ವಾನ್ವಯವಾಗುವಂತೆ ‘ದೆಹಲಿ ಸರ್ಕಾರದ ಕಾಯ್ದೆಗೆ’ ಎಎಪಿ ಸರ್ಕಾರ ತಿದ್ದುಪಡಿ ತಂದಿತು

ಜೂನ್ 13, 2016: ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆಯನ್ನು ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿರಸ್ಕರಿಸಿದರು

ಸೆಪ್ಟೆಂಬರ್ 8, 2016: ನೇಮಕವನ್ನು ದೆಹಲಿ ಹೈಕೋರ್ಟ್ ವಜಾ ಮಾಡಿತು

ವಿನಾಯಿತಿಗಾಗಿ ತಿದ್ದುಪಡಿ

ಜನಪ್ರತಿನಿಧಿಗಳು ಕೆಲವಾರು ಹುದ್ದೆಗಳನ್ನು ಹೊಂದಿದ್ದರೆ ಅವರನ್ನು ಅನರ್ಹಗೊಳಿಸದಂತೆ 1959ರ ಸಂಸತ್ (ಅನರ್ಹತೆ ತಡೆ) ಕಾಯ್ದೆ ತಡೆಯುತ್ತದೆ. ಕೇಂದ್ರ ಅಥವಾ ರಾಜ್ಯ ಸಂಪುಟದ ಸದಸ್ಯತ್ವ, ವಿವಿಧ ಸಮಿತಿಗಳ ಸದಸ್ಯತ್ವ ಅಥವಾ ಅಧ್ಯಕ್ಷತೆ, ನಿಗಮ–ಮಂಡಳಿಗಳ ಅಧ್ಯಕ್ಷತೆ–ಸದಸ್ಯತ್ವವನ್ನು ಲಾಭದಾಯಕ ಹುದ್ದೆ ಎಂದು ಪರಿಗಣಿಸುವುದರಿಂದ ಈ ಕಾಯ್ದೆ ವಿನಾಯಿತಿ ನೀಡುತ್ತದೆ.

ಕಾಯ್ದೆಗೆ ಹಲವು ಭಾರಿ ತಿದ್ದುಪಡಿ ತಂದು ಹಲವು ಹುದ್ದೆಗಳನ್ನು ಈ ವಿನಾಯಿತಿ ಪಟ್ಟಿಗೆ ಸೇರಿಸಲಾಗಿದೆ. 2013ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷರ ಹುದ್ದೆಗೆ ಅನರ್ಹತೆಯಿಂದ ರಕ್ಷಣೆ ನೀಡಿತ್ತು. ಇದು ವಿನಾಯಿತಿ ಪಟ್ಟಿಗೆ ಹೊಸ ಸೇರ್ಪಡೆ.

ಆರ್ಥಿಕ ಲಾಭ ಇರಬೇಕಿಲ್ಲ

ಯಾವುದಾದರೂ ಸಾಂಸ್ಥಿಕ ಹುದ್ದೆಯನ್ನು ಹೊಂದಿದ ಕಾರಣಕ್ಕೆ ಜನಪ್ರತಿನಿಧಿಗಳು ಗೌರವಧನ ಅಥವಾ ವೇತನ ಅಥವಾ ಭತ್ಯೆ ಪಡೆಯದಿದ್ದರೂ ಅಂತಹ ಹುದ್ದೆಗಳನ್ನು ಲಾಭದಾಯಕ ಹುದ್ದೆ ಎಂದು ಪರಿಗಣಿಸಲು ಅವಕಾಶವಿದೆ.

ಜನಪ್ರತಿನಿಧಿಗಳಿಗೆ ಇಂತಹ ಹುದ್ದೆ ನಿರ್ವಹಿಸುವುದಕ್ಕೆ ನೀಡುವ ಭತ್ಯೆಯು ಅವರು ಸಂಸದರು ಅಥವಾ ಶಾಸಕರಾಗಿ ಪಡೆಯುವ ಭತ್ಯೆಗಿಂತ ಅಧಿಕವಾಗಿರಬಾರದು ಎಂದೂ 1959ರ ಸಂಸತ್ (ಅನರ್ಹತೆ ತಡೆ) ಕಾಯ್ದೆಯಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry