‘ಕೇಪ್‌ ಆಫ್‌ ಹಾರ್ನ್‌’ ಭೂಶಿರ ದಾಟಿದ ತಾರಿಣಿ ನೌಕೆ

7

‘ಕೇಪ್‌ ಆಫ್‌ ಹಾರ್ನ್‌’ ಭೂಶಿರ ದಾಟಿದ ತಾರಿಣಿ ನೌಕೆ

Published:
Updated:

ನವದೆಹಲಿ: ವಿಶ್ವ ಪರ್ಯಟನೆ ಕೈಗೊಂಡಿರುವ ಭಾರತೀಯ ಮಹಿಳಾ ನೌಕಾಪಡೆಯು ದಕ್ಷಿಣ ಅಮೆರಿಕದಲ್ಲಿರುವ ಜಗತ್ತಿನ ಅತ್ಯಂತ ದುರ್ಗಮ ಪ್ರದೇಶ ‘ಕೇಪ್‌ ಆಫ್‌ ಹಾರ್ನ್‌’ ಭೂಶಿರವನ್ನು ಶುಕ್ರವಾರ ದಾಟಿದೆ.

ಪೆಸಿಫಿಕ್‌ ಹಾಗೂ ಅಟ್ಲಾಂಟಿಕ್‌ ಸಾಗರಗಳು ಸೇರುವ ಡ್ರೇಕ್‌ ಮಾರ್ಗದಲ್ಲಿ ಸಮುದ್ರವು ಪ್ರಕ್ಷುಬ್ಧ ಸ್ಥಿತಿಯಲ್ಲಿರುತ್ತದೆ. ಐಎನ್‌ಎಸ್‌ವಿ ತಾರಿಣಿ ನೌಕೆಯು ಈ ಮಾರ್ಗವನ್ನು ಯಶಸ್ವಿಯಾಗಿ ದಾಟಿದೆ.

‘ಶುಕ್ರವಾರ ಬೆಳಿಗ್ಗೆ ಕೇಪ್‌ ಹಾರ್ನ್‌ ಪ್ರದೇಶವನ್ನು ತಲು‍ಪಿದ ನೌಕೆಯು, ಡ್ರೇಕ್‌ ಮಾರ್ಗ ದಾಟುವಾಗ ಭಾರತದ ತ್ರಿವಳಿ ಧ್ವಜವನ್ನು ತಮ್ಮ ನೌಕೆಯ ಮೇಲೆ ಹಾರಿಸಿತು. ಅತೀ ಎತ್ತರದಲ್ಲಿರುವ ಈ ಭೂಶಿರ ತಲುಪುವುದು ಮೌಂಟ್‌ ಎವರೆಸ್ಟ್‌ ಶಿಖರ ಏರುವುದಕ್ಕೆ ಸಮ’ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಾವಿಕ ಸಾಗರ ಪರಿಕ್ರಮ ಯೋಜನೆ’ ಅಡಿಯಲ್ಲಿ ವಿಶ್ವಪರ್ಯ ಟನೆ ಮಾಡುತ್ತಿರುವ ಮಹಿಳಾ ನೌಕಾಪಡೆಯು, ಭೂ ಪ್ರದಕ್ಷಿಣೆ ಪೂರ್ಣಗೊಳಿಸಲು ಒಟ್ಟು ಇಂತಹ ಮೂರು ಎತ್ತರದ ಭೂಶಿರಗಳನ್ನು ದಾಟಬೇಕು. ಕೇಪ್‌ ಹಾರ್ನ್‌ ಸೇರಿದಂತೆ ಎರಡು ಭೂಶಿರಗಳನ್ನು ದಾಟುವಲ್ಲಿ ನೌಕಾಪಡೆಯು ಈಗಾಗಲೇ ಯಶಸ್ವಿಯಾಗಿದೆ.

ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್, ಲೆಫ್ಟಿನೆಂಟ್‌ಗಳಾದ ಪಿ.ಸ್ವಾತಿ, ವಿಜಯಾ ದೇವಿ, ಪಾಯಲ್ ಗುಪ್ತಾ ಮತ್ತು ಬಿ.ಐಶ್ವರ್ಯಾ ಅವರಿರುವ, ಲೆಫ್ಟಿನೆಂಟ್‌ ಕಮಾಂಡರ್ ವರ್ತಿಕಾ ಜೋಶಿ ಅವರ ನೇತೃತ್ವದ ತಂಡವು ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರವನ್ನು ಮಾರ್ಚ್‌ ತಿಂಗಳಲ್ಲಿ ದಾಟಲಿದೆ.

ಸಾಧನೆ ಮಾಡಿರುವ ಈ ತಂಡಕ್ಕೆ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ‘ಇದೊಂದು ಅದ್ಭುತ ಸುದ್ದಿ. ಐಎನ್‌ಎಸ್‌ವಿ ತಾರಿಣಿ ನೌಕೆಯ ಈ ಸಾಧನೆ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.  ನೌಕೆಯ ಮೂಲಕ ವಿಶ್ವ ಪರ್ಯಟನೆ ಮಾಡುವ ಈ ಯೋಜನೆಯು ಕಳೆದ ವರ್ಷ ಸೆಪ್ಟೆಂಬರ್‌ 10ರಂದು ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry