ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

7

ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

Published:
Updated:
ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

ನವದೆಹಲಿ: ಬಿಟ್‌ ಕಾಯಿನ್‌ನಂತಹ ಡಿಜಿಟಲ್‌ ಕರೆನ್ಸಿಗಳ ವಹಿವಾಟಿನಲ್ಲಿ ಹಣ ತೊಡಗಿಸಿದವರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ಜಾರಿ ಮಾಡಿದೆ.

ಹದಿನೇಳು ತಿಂಗಳ ಅವಧಿಯಲ್ಲಿ ₹ 22 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಹಿವಾಟು ನಡೆದಿರುವುದು ರಾಷ್ಟ್ರವ್ಯಾಪಿ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ತಂತ್ರಜ್ಞಾನ ವ್ಯಾಮೋಹಿ ಯುವ ಹೂಡಿಕೆದಾರರು, ರಿಯಲ್‌ ಎಸ್ಟೇಟ್‌ ವಹಿವಾಟುದಾರರು ಮತ್ತು ಚಿನ್ನಾಭರಣ ವರ್ತಕರು ಬಿಟ್‌ಕಾಯಿನ್‌ ಸೇರಿದಂತೆ ಇತರ ಪರ್ಯಾಯ ಕರೆನ್ಸಿಗಳಲ್ಲಿ ಹಣ ತೊಡಗಿಸಿದ್ದಾರೆ  ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಡಿಜಿಟಲ್‌ ಕರೆನ್ಸಿಗಳಲ್ಲಿನ ಹೂಡಿಕೆ ಪ್ರಮಾಣ ಮತ್ತು ಹಣದ ಮೂಲದ ವಿವರ ನೀಡಲು ಸೂಚಿಸಲಾಗಿದೆ. ಈ ಹೂಡಿಕೆಯ ವಿವರಗಳನ್ನು ಐ.ಟಿ ರಿಟರ್ನ್ಸ್‌ನಲ್ಲಿ ಉಲ್ಲೇಖಿಸಿಲ್ಲ. ಈ ಹೂಡಿಕೆಯನ್ನು ಆದಾಯ ಲೆಕ್ಕಕ್ಕೆ ಪರಿಗಣಿಸದಿರುವುದು ಕಂಡು ಬಂದಿದೆ’ ಎಂದು ಇಲಾಖೆಯ ಕರ್ನಾಟಕ ವಲಯದ ತನಿಖಾ ಮಹಾ ನಿರ್ದೇಶಕ ಬಿ. ಆರ್‌. ಬಾಲಕೃಷ್ಣನ್‌ ಅವರು ಹೇಳಿದ್ದಾರೆ.

‘ಈ ವಹಿವಾಟಿನ ಕಾನೂನು ಮಾನ್ಯತೆ ಕುರಿತು ಸರ್ಕಾರದ ಅಂತಿಮ ನಿರ್ಧಾರ ಹೊರ ಬೀಳುವವರೆಗೆ ಇಲಾಖೆಯು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ. ಹೂಡಿಕೆ ಮಾಡಿದವರು ಬಂಡವಾಳ ಗಳಿಕೆ ಲಾಭದ ತೆರಿಗೆ ಪಾವತಿಸಲು ಕೇಳಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ದೇಶದ 6 ಮಹಾನಗರಗಳಲ್ಲಿನ  9 ಡಿಜಿಟಲ್‌ ಕರೆನ್ಸಿ ವಿನಿಮಯ ಕೇಂದ್ರಗಳಲ್ಲಿನ ವಹಿವಾಟಿನ ಬಗ್ಗೆ ಇತ್ತೀಚೆಗೆ ಇಲಾಖೆಯು ಮಾಹಿತಿ ಸಂಗ್ರಹಿಸಿತ್ತು.

ಪರ್ಯಾಯ ಕರೆನ್ಸಿಗಳ ವಹಿವಾಟಿಗೆ ಕಡಿವಾಣ ಹಾಕುವ ಬಗ್ಗೆ ವಿಶ್ವದಾದ್ಯಂತ ಭಾರಿ ಚರ್ಚೆ ನಡೆಯುತ್ತಿದೆ. ಮಾರ್ಚ್‌ನಲ್ಲಿ ಅರ್ಜೆಂಟೀನಾದಲ್ಲಿ ನಡೆಯಲಿರುವ ‘ಜಿ–20’ ಶೃಂಗಸಭೆಯಲ್ಲಿ ಈ ವಿಷಯವನ್ನು ಪ್ರಮುಖವಾಗಿ ಚರ್ಚಿಸಲು ನಿರ್ಧರಿಸಲಾಗಿದೆ.

ಆರಂಭಿಕ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುವ ಭರವಸೆ ನೀಡುವ ವಂಚನೆಯ ಹೂಡಿಕೆ ಯೋಜನೆಗಳಂತೆ ಡಿಜಿಟಲ್‌ ಕರೆನ್ಸಿಗಳಲ್ಲಿನ ಹೂಡಿಕೆಯ ಭಾರಿ ನಷ್ಟಕ್ಕೆ ಎಡೆಮಾಡಿಕೊಡಲಿದೆ ಎಂದು ಕೇಂದ್ರ ಸರ್ಕಾರವು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದೆ. ಆದರೆ, ವಹಿವಾಟಿನ ಮೇಲೆ ಇದುವರೆಗೂ ಯಾವುದೇ ನಿರ್ಬಂಧ ವಿಧಿಸಿಲ್ಲ. ಸಮಿತಿಯೊಂದು ಇಂತಹ ಕರೆನ್ಸಿಗಳ ಸಾಧಕ – ಬಾಧಕಗಳನ್ನು ಪರಿಶೀಲಿಸುತ್ತಿದೆ.

**

ನಮ್ಮ ಬಹುತೇಕ ಗ್ರಾಹಕರು, ಡಿಜಿಟಲ್‌ ಕರೆನ್ಸಿಯನ್ನು ಚಿನ್ನ ಎಂದೇ ಪರಿಗಣಿಸುತ್ತಾರೆ.

-ಸೌರಭ್ ಅಗರ್‌ವಾಲ್‌, ಝೆಬ್‌ಪೇ ಸಹ ಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry