ಅರಮನೆಯಲ್ಲಿ ಸಿರಿಧಾನ್ಯಗಳ ದರ್ಬಾರ್‌

7

ಅರಮನೆಯಲ್ಲಿ ಸಿರಿಧಾನ್ಯಗಳ ದರ್ಬಾರ್‌

Published:
Updated:
ಅರಮನೆಯಲ್ಲಿ ಸಿರಿಧಾನ್ಯಗಳ ದರ್ಬಾರ್‌

ಬೆಂಗಳೂರು: ನಗರದ ಅರಮನೆಯಲ್ಲಿ ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳದ್ದೇ ದರ್ಬಾರ್‌. ಇಲ್ಲಿಗೆ ಭೇಟಿ ನೀಡಿದವರ ಬಾಯ್ತುಂಬಾ ಇವುಗಳದ್ದೇ ಮಾತು. ಇವುಗಳದ್ದೇ ಚರ್ಚೆ.

ಅರಮನೆಯ ಶೃಂಗಾರಕ್ಕೂ, ಗಣ್ಯರಿಗೆ ಸ್ವಾಗತ ಕೋರುವ ಹೂಗುಚ್ಛಗಳಲ್ಲೂ ಅವುಗಳೇ ರಾರಾಜಿಸುತ್ತಿದ್ದವು. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಕಾಣುತ್ತಿದ್ದದ್ದು ‘ಸಿರಿ’ಧಾನ್ಯಗಳ ಸೊಬಗು.

ಕೃಷಿ ಇಲಾಖೆ ವತಿಯಿಂದ ನಗರದ ಬೆಂಗಳೂರು ಅರಮನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಾವಯವ ಮತ್ತು ಸಿರಿಧಾನ್ಯ 2018– ಅಂತರರಾಷ್ಟ್ರೀಯ ವ್ಯಾಪಾರ ಮೇಳ’ ಸಿರಿಧಾನ್ಯಗಳ ವೈವಿಧ್ಯವನ್ನು ಜಗತ್ತಿನ ವಿವಿಧ ಭಾಗಗಳಿಂದ ಬಂದಿದ್ದವರಿಗೆ ಪರಿಚಯಿಸಿತು.

ಮೇಳದಲ್ಲಿ 350 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 250ಕ್ಕೂ ಹೆಚ್ಚಿನ ಪ್ರದರ್ಶಕರು ಮಳಿಗೆಗಳನ್ನು ತೆರೆದಿದ್ದಾರೆ. ಬಹುತೇಕ ಮಳಿಗೆಗಳಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿಸಿದ ಉತ್ಪನ್ನಗಳಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮೇಘಾಲಯ, ಉತ್ತರಾಖಂಡ, ಹರಿಯಾಣ ಮತ್ತು ಛತ್ತೀಸ್‌ಗಡದ ಮಳಿಗೆಗಳೂ ಇವೆ.

150ಕ್ಕೂ ಹೆಚ್ಚಿನ ಕಂಪನಿಗಳು ಖರೀದಿದಾರ ಸಂಸ್ಥೆಗಳಾಗಿ ಭಾಗವಹಿಸಿವೆ. ಬ್ರಿಟಾನಿಯಾ, ಎಂಟಿಆರ್‌ ಫುಡ್ಸ್‌, ಮದರ್ ಇಂಡಿಯಾ ಆಗ್ರೊ ಫುಡ್ಸ್‌, ನೇಚರ್‌ ಬಯೊ ಫುಡ್ಸ್‌, ಬಿಗ್‌ ಬಾಸ್ಕೆಟ್‌, ಟೇಫ್‌, ಐಟಿಸಿ ಫುಡ್ಸ್‌, ಪ್ರೋನೇಚರ್‌, ಸ್ಟಾರ್‌ ಹಾಗೂ ರಿಲಯನ್ಸ್‌ ರಿಟೇಲ್‌ನಂತಹ ಕಂಪನಿಗಳು ಪಾಲ್ಗೊಂಡಿವೆ.

ಸಾವಯವ ಕೃಷಿಕರು ಹಾಗೂ ಸಿರಿಧಾನ್ಯಗಳನ್ನು ಬೆಳೆಯುವ ರೈತರ ಒಕ್ಕೂಟಗಳು ಮಳಿಗೆಗಳನ್ನು ತೆರೆದಿದ್ದವು. ಈ ಧಾನ್ಯಗಳು ಹಾಗೂ ಅವುಗಳಿಂದ ತಯಾರಿಸಿದ್ದ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇವುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಇವುಗಳ ಬಗ್ಗೆ ರೈತರು ಕೂಡ ಮಾಹಿತಿ ಪಡೆದರು.

(ಮಳಿಗೆಯೊಂದರಲ್ಲಿ ಸಾವಯವ ಬೆಲ್ಲ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು)

ಖಾನಾವಳಿ ಖಾದ್ಯ ವೈವಿಧ್ಯ:

ಅರಮನೆ ಆವರಣದಲ್ಲಿ ಖಾನಾವಳಿ ಸ್ಥಾಪಿಸಿದ್ದು, ವಿವಿಧ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ್ದ ಖಾದ್ಯಗಳು ಆಹಾರಪ್ರಿಯರ ಜಿಹ್ವಾ ಚಾಪಲ್ಯ ತಣಿಸಿದವು. ರಾಗಿ, ಜೋಳ, ಸಜ್ಜೆ, ನವಣೆ, ಹಾರಕ, ಊದಲು, ಬರಗು, ಸಾವಕ್ಕಿಯಿಂದ ತಯಾರಿಸಿದ್ದ ಖಾದ್ಯಗಳಿಗೆ ಬೇಡಿಕೆ ಇತ್ತು.

‘2005ರಿಂದ ಸಾವಯವ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ, ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಿದ್ದೇವೆ. ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಬೆಲೆಗಿಂತ ಶೇ 10ರಷ್ಟು ಹೆಚ್ಚಿನ ದರಕ್ಕೆ ರೈತರಿಂದ ಖರೀದಿಸುತ್ತೇವೆ. ಖರ್ಚು ಕಳೆದು, ಬಂದ ಲಾಭಾಂಶವನ್ನು ರೈತರಿಗೆ ನೀಡುತ್ತೇವೆ’ ಎಂದು ಕಬ್ಬಿಗರ ಸತ್ವ ಆಹಾರ ಸಂಸ್ಥೆಯ ನಿರ್ದೇಶಕ ಕೊಟ್ರೇಶಿ ತಿಳಿಸಿದರು.

‘30 ಎಕರೆ ಪ್ರದೇಶದಲ್ಲಿ ಸಿರಿಧಾನ್ಯಗಳು, ಕಬ್ಬು ಹಾಗೂ ಬಾಳೆ ಬೆಳೆಯುತ್ತಿದ್ದೇವೆ. ಮೂರು ವರ್ಷಗಳಿಂದ ಈ ಕೃಷಿಯಲ್ಲಿ ತೊಡಗಿದ್ದೇವೆ. ಯಾವುದೇ ರಾಸಾಯನಿಕಗಳನ್ನು ಬಳಸದೆ, ಸಾವಯವ ಗೊಬ್ಬರ ಬಳಸಿ ಬೆಳೆಯುತ್ತಿದ್ದೇವೆ. ಬಯಲು ಸೀಮೆ ಬೆಳೆಗಾರರ ಒಕ್ಕೂಟದ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ. ಇದರಿಂದ ಹೆಚ್ಚಿನ ಲಾಭಾಂಶ ಬರುತ್ತಿದೆ’ ಎಂದು ಮಂಡ್ಯ ಜಿಲ್ಲೆಯ ಗೂಳೂರುದೊಡ್ಡಿಯ ರೈತ ಸಿ.ಪಿ.ಕೃಷ್ಣ ಹೇಳಿದರು.

ಈ ಮೇಳವು ಇದೇ 21ರವರೆಗೆ ನಡೆಯಲಿದೆ. ಪ್ರವೇಶ ಉಚಿತ.

2018 ಅನ್ನು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸುವ ಪ್ರಸ್ತಾವಕ್ಕೆ ಕೇಂದ್ರ ಕೃಷಿ ಸಚಿವರು ಅನುಮೋದನೆ ನೀಡಿದ್ದಾರೆ.

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ರೈತರ ಪ್ರತಿಭಟನೆ

ವಿಮಾ ಕಂಪನಿಗಳು ಬೆಳೆ ನಷ್ಟಕ್ಕೆ ಪರಿಹಾರವನ್ನು ಪಾವತಿಸದೇ ಇರುವುದನ್ನು ಖಂಡಿಸಿ ಧಾರವಾಡ, ಗದಗ ಹಾಗೂ ಬಳ್ಳಾರಿಯ ರೈತರು ಧರಣಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಪ್ರತಿಭಟನೆ ನಡೆಸಲು ಆರಂಭಿಸಿದರು. ಮುಖ್ಯಮಂತ್ರಿ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದರು.

6–7 ವರ್ಷಗಳಿಂದ ಬೆಳೆ ವಿಮೆಯ ಕಂತು ಪಾವತಿಸುತ್ತಿದ್ದೇವೆ. ಆದರೆ, ಬೆಳೆ ನಷ್ಟಕ್ಕೆ ವಿಮಾ ಕಂಪನಿಗಳು ಪರಿಹಾರ ನೀಡುತ್ತಿಲ್ಲ. ಬರಗಾಲಪೀಡಿತ ತಾಲ್ಲೂಕುಗಳಲ್ಲೂ ನೀಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ರೈತರ ಸಮಸ್ಯೆ ಬಗೆಹರಿಸುವಂತೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸೂಚಿಸಿದ ಮುಖ್ಯಮಂತ್ರಿ ವೇದಿಕೆಯತ್ತ ಸಾಗಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೂ ರೈತರ ಸಮಸ್ಯೆ ಆಲಿಸಿದರು. ಆದರೆ ಯಾವುದೇ ಖಚಿತ ಭರವಸೆ ನೀಡಲಿಲ್ಲ.

ಮಧ್ಯಾಹ್ನ 3ರ ಸುಮಾರಿಗೆ ಸ್ಥಳಕ್ಕೆ ಬಂದ ಕೃಷಿ ಇಲಾಖೆಯ ಆಯುಕ್ತ ಐ.ಸತೀಶ್‌, ಧರಣಿ ಕೈಬಿಡುವಂತೆ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ರೈತರು ಪಟ್ಟು ಸಡಿಲಿಸಲಿಲ್ಲ.

ಬೇಡಿಕೆಗೆ ಜನಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ರೈತರು ಸಂಜೆವರೆಗೂ ಧರಣಿ ಮುಂದುವರಿಸಿದರು.

‘ಬೆಳೆ ವಿಮೆಗಾಗಿ ₹1,200 ಪ್ರೀಮಿಯಂ ಪಾವತಿಸಿದ್ದೇನೆ. ಬರದಿಂದಾಗಿ ಬೆಳೆ ನಾಶವಾಗಿದ್ದರೂ ವಿಮೆ ನೀಡಿಲ್ಲ. ಮೂವರು ರೈತರು ಕಾಲುವೆಯ ನೀರನ್ನು ಬಳಸಿ ಕೃಷಿ ಮಾಡಿದ್ದು, ಅದನ್ನು ಗಮನಿಸಿ ಇಡೀ ಪ್ರದೇಶವು ಬರಪೀಡಿತವಲ್ಲ ಎಂದು ಘೋಷಿಸಲಾಗಿದೆ. ಆದರೆ, ಬಹುತೇಕ ರೈತರ ಬೆಳೆಗಳು ಒಣಗಿವೆ’ ಎಂದು ಭದ್ರಾವತಿ ತಾಲ್ಲೂಕಿನ ಬಾರಂದೂರಿನ ರೈತ ಮಹಿಳೆ ಆಲಮ್ಮ ದೂರಿದರು.

ಬ್ಯಾಂಕ್‌ನಿಂದ ಕೃಷಿ ಸಾಲ ಪಡೆಯುವಾಗ ಬೆಳೆ ವಿಮೆಯ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ಆದರೆ, ಬೆಳೆ ನಷ್ಟವಾದರೆ ವಿಮೆ ಮಾತ್ರ ನೀಡುವುದಿಲ್ಲ. ರಾಜ್ಯದಲ್ಲಿ ಸುಮಾರು ₹1,200 ಕೋಟಿ ಮೊತ್ತದ ಬೆಳೆ ವಿಮೆ ನೀಡಬೇಕಿದೆ. ಹಣ ಪಾವತಿಸದ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲೆಯ ಹಿರೇಗುಂಜಾಳದ ರೈತ ಶೇಖರಪ್ಪ ಒತ್ತಾಯಿಸಿದರು.

ರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆಗೆ ಒತ್ತಾಯ

ಕೇಂದ್ರ ಸರ್ಕಾರವು 2018 ಅನ್ನು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಬೇಕು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಈ ಘೋಷಣೆಯಿಂದ ಎಲ್ಲ ರಾಜ್ಯಗಳಲ್ಲೂ ಈ ಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ ದೊರೆಯಲಿದೆ. ಪಡಿತರ ವ್ಯವಸ್ಥೆಯಡಿ ಹಾಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸಬೇಕು. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಾವಯವ ಉತ್ಪನ್ನಗಳ ಮಾರಾಟಕ್ಕಾಗಿ 14 ಸಾವಯವ ರೈತರ ಒಕ್ಕೂಟಗಳನ್ನು ರಚಿಸಿದ್ದು, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿವೆ. ಕೆಲವು ವಾರ್ಷಿಕ ₹4 ಕೋಟಿ ವಹಿವಾಟು ನಡೆಸುತ್ತಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೀರಾವರಿ ಪ್ರಮಾಣ ಕೇವಲ ಶೇ 30ರಷ್ಟು ಇದೆ. 2000ರಿಂದ 2017ರ ಅವಧಿಯಲ್ಲಿ ಮೂರು ವರ್ಷಗಳು ಬಿಟ್ಟರೆ ಉಳಿದ ವರ್ಷಗಳಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಿರಿಧಾನ್ಯಗಳು ಮಾತ್ರ ರೈತರ ಕೈ ಹಿಡಿಯುತ್ತವೆ ಎಂದರು.

‘ಸಿರಿಧಾನ್ಯ ಸಂಶೋಧನೆ ನಡೆಸಲಿ’

ಕೃಷಿ ವಿಶ್ವವಿದ್ಯಾಲಯಗಳು ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕು. ಹೆಚ್ಚು ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಿರಿಧಾನ್ಯಗಳನ್ನು ಕಡಿಮೆ ನೀರಿನಲ್ಲೂ ಬೆಳೆಯಬಹುದು. ಆರೋಗ್ಯ ಹಾಗೂ ಪರಿಸರದ ದೃಷ್ಟಿಯಿಂದ ಇವು ಹೆಚ್ಚು ಪ್ರಸ್ತುತ. ಇಂತಹ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

‘ಜನರಿಗೆ ಬದುಕುವ ಆಸೆ ಹೆಚ್ಚಾಗಿದೆ. ಹೀಗಾಗಿ, ರಾಸಾಯನಿಕಮುಕ್ತ ಆಹಾರ ಪದಾರ್ಥಗಳ ಮೇಲೆ ಒಲವು ಹೆಚ್ಚಿದೆ. ನಾನು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹೀಗಾಗಿ, ನಮ್ಮ ಮನೆಯಲ್ಲೂ ಬೆಳಿಗ್ಗೆ ನವಣೆ ರೊಟ್ಟಿ ಮಾಡಿದ್ದರು. ಇಲ್ಲಿನ ಖಾನಾವಳಿಯಲ್ಲಿ ಸಿರಿಧಾನ್ಯದಿಂದ ಮಾಡಿದ್ದ ಮಸಾಲೆ ದೋಸೆ ಹಾಗೂ ಈರುಳ್ಳಿ ದೋಸೆಯ ರುಚಿ ನೋಡಿದೆ. ವಿದ್ಯಾರ್ಥಿ ಭವನದ ದೋಸೆಗಿಂತ ಕಡಿಮೆ ಇದು ಇರಲಿಲ್ಲ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಿ–ಅಂಶ

₹400 ಕೋಟಿ -ರಾಜ್ಯದಲ್ಲಿ ಸಾವಯವ ಕಾರ್ಯಕ್ರಮಗಳಿಗೆ 4 ವರ್ಷಗಳಲ್ಲಿ ಖರ್ಚು ಮಾಡಿದ ಹಣ

₹34 ಕೋಟಿ -ಸಿರಿಧಾನ್ಯ ಬೆಳೆಯುವ ರೈತರಿಗೆ ಈ ವರ್ಷ ಬಿಡುಗಡೆ ಮಾಡಿದ ಪ್ರೋತ್ಸಾಹ ಧನ

1 ಲಕ್ಷ ಹೆಕ್ಟೇರ್‌ -ರಾಜ್ಯದಲ್ಲಿ ಸಾವಯವ ಕೃಷಿ ಪ್ರದೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry