ಮೈಸೂರು ವಿ.ವಿ.ಗೆ ಜಯ: ಮಂಗಳೂರು ವಿ.ವಿ.ಗೆ ಆಘಾತ

7
ದಕ್ಷಿಣ ವಲಯ ಕೊಕ್ಕೊ

ಮೈಸೂರು ವಿ.ವಿ.ಗೆ ಜಯ: ಮಂಗಳೂರು ವಿ.ವಿ.ಗೆ ಆಘಾತ

Published:
Updated:
ಮೈಸೂರು ವಿ.ವಿ.ಗೆ ಜಯ: ಮಂಗಳೂರು ವಿ.ವಿ.ಗೆ ಆಘಾತ

ಮೈಸೂರು: ಮಧು ಮತ್ತು ಕಿರಣ್ ಅವರ ಚುರುಕಿನ ಆಟದ ಬಲದಿಂದ ಆತಿಥೇಯ ಮೈಸೂರು ವಿಶ್ವವಿದ್ಯಾನಿಲಯ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿಯಲ್ಲಿ ಜಯಿಸಿದರು.

ವಿ.ವಿ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ನಡೆದ ಸೆಮಿಫೈನಲ್ ಲೀಗ್‌ನ ಮೊದಲ ಪಂದ್ಯದಲ್ಲಿ ಮೈಸೂರಿನ ತಂಡ 19–12 ರಲ್ಲಿ ಕಳೆದ ಬಾರಿಯ ಚಾಂಪಿಯನ್ ಮಂಗಳೂರು ವಿ.ವಿ. ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತು.

ಎದುರಾಳಿ ತಂಡದ ಎಂಟು ಆಟಗಾರರನ್ನು ಔಟ್ ಮಾಡಿದ ಮಧು ಅವರು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕಿರಣ್‌ ಅವರು ಮೂರು ನಿಮಿಷ ಆಡಿದ್ದಲ್ಲದೆ, ಮೂವರನ್ನು ಔಟ್ ಮಾಡಿ ಮಿಂಚಿದರು. ಮಂಗಳೂರು ತಂಡದ ಕೃಷ್ಣಪ್ರಸಾದ್ ಮತ್ತು ಸುಪ್ರೀತ್ ಅವರು ಗಮನ ಸೆಳೆದರು.

ದಿನದ ಎರಡನೇ ಲೀಗ್‌ ಪಂದ್ಯದಲ್ಲಿ ಕೇರಳದ ಕಲ್ಲಿಕೋಟೆ ವಿ.ವಿ ತಂಡ 13–12 ರಲ್ಲಿ ದಾವಣಗೆರೆ ವಿ.ವಿ ತಂಡವನ್ನು ಮಣಿಸಿತು. ದಾವಣಗೆರೆ ತಂಡ ಕ್ವಾರ್ಟರ್ ಫೈನಲ್‌ನಲ್ಲಿ 15–10 ರಲ್ಲಿ ಕುವೆಂಪು ವಿ.ವಿ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ಲೀಗ್ ಹಂತ ಪ್ರವೇಶಿಸಿತ್ತು. ಕಳೆದ ಬಾರಿ ‘ರನ್ನರ್ ಅಪ್’ ಆಗಿದ್ದ ಕುವೆಂಪು ವಿ.ವಿ ಲೀಗ್ ಹಂತ ಪ್ರವೇಶಿಸಲು ವಿಫಲವಾಯಿತು.

ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮೈಸೂರು ವಿ.ವಿ 15–11 ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ ವಿರುದ್ಧವೂ, ಮಂಗಳೂರು ವಿ.ವಿ 13–8 ರಲ್ಲಿ ತುಮಕೂರು ವಿ.ವಿ ಎದುರೂ, ಕಲ್ಲಿಕೋಟೆ ವಿ.ವಿ 22–11 ರಲ್ಲಿ ಬೆಂಗಳೂರು ವಿ.ವಿ ಎದುರೂ ಜಯ ಪಡೆದಿದ್ದವು. ನಿರ್ಣಾಯಕ ಲೀಗ್ ಪಂದ್ಯಗಳು ಶನಿವಾರ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry