‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

7

‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

Published:
Updated:
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

ಸಂಡೂರು: ‘ಗಣಿಗಾರಿಕೆಯಿಂದ ಬಾಧಿತರಾಗಿರುವ ಮತ್ತು ಗಣಿಗಳು ಮುಚ್ಚಿದ್ದರಿಂದ ಕೆಲಸ ಕಳೆದುಕೊಂಡಿರುವವರಿಗೆ ಪರ್ಯಾಯ ಉದ್ಯೋಗ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಂತ್ರಸ್ತರ ಅಕ್ಷರಸ್ಥ ಮಕ್ಕಳಿಗೂ ಕೌಶಲ ತರಬೇತಿ ನೀಡಿ ಉದ್ದಿಮೆ ಸ್ಥಾಪನೆಗೆ ನೆರವು ನೀಡಲಾಗುವುದು. ಆಸಕ್ತರು ಜ.27ರಿಂದ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್ ತಿಳಿಸಿದರು.

ಪರ್ಯಾಯ ಉದ್ಯೋಗ ಕಲ್ಪಿಸುವ ಸಂಬಂಧ ಪಟ್ಟಣದ ಮರಾಠ ಸಮಾಜದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂವಾದ ನಡೆಸಿದ ಅವರು, ‘2011ರಲ್ಲಿ ಗಣಿಗಾರಿಕ ಸ್ಥಗಿತಗೊಂಡ ನಂತರ ತಾಲ್ಲೂಕಿನಲ್ಲಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಅಂಥವರು ಅರ್ಜಿ ಸಲ್ಲಿಸಿದರೆ ಸ್ವಯಂ ಉದ್ಯೋಗ, ಪರ್ಯಾಯ ಉದ್ಯೋಗ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಲಾಗುವುದು’ ಎಂದರು.

ಸಣ್ಣ ಕೈಗಾರಿಕೆ ಆರಂಭಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಈ. ತುಕಾರಾಂ, ‘ತಾಲ್ಲೂಕಿನಲ್ಲಿ 2.60 ಲಕ್ಷ ಜನಸಂಖ್ಯೆ ಇದ್ದು ಸಾಕ್ಷರತೆಯ ಪ್ರಮಾಣ ಕಡಿಮೆ ಇದೆ. ಫುಡ್‌ ಪಾರ್ಕ್, ಸಿದ್ಧ ಉಡುಪು ತಯಾರಿಕೆ ಘಟಕದಂಥ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸಬೇಕು. ಇ–ಟೆಂಡರ್‌ ಆಗುವ ‘ಸಿ’ ಗುಂಪಿನ ಗಣಿಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಇ–ಟೆಂಡರ್‌ ನಂತರ ಗಣಿಗಾರಿಕೆ ಆರಂಭವಾಗುವ ಪ್ರದೇಶದಲ್ಲಿ ಈ ಮೊದಲು ಗಣಿಗಳಲ್ಲಿ ಕೆಲಸ ಮಾಡಿದವರಿಗೆ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಕೌಶಾಲಾಭಿವೃದ್ಧಿ ತರಬೇತಿ ಮೂಲಕ ಸ್ವಯಂ ಉದ್ಯೋಗಕ್ಕೂ ಅವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಎರಡನೇ ಸಭೆ ಶೀಘ್ರ: ನೆರವು ನೀಡುವ ಸಲುವಾಗಿ ಬಾಧಿತರಿಂದಲೇ ಅಭಿಪ್ರಾಯ ಸಂಗ್ರಹಿಸಲು ಮೊದಲ ಸಭೆಯನ್ನು ಏರ್ಪಡಿಸಲಾಗಿದೆ. ಎರಡನೇ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ ಉಪಸ್ಥಿತರಿದ್ದರು.

ಕೆಲಸ ಹೋಯಿತು

‘ಬಿಎಂಎಂ ಗಣಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ನಡೆದ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ನಿರುದ್ಯೋಗಿಯಾಗಿದ್ದೇನೆ. ನನಗೆ ಉದ್ಯೋಗ ಕಲ್ಪಿಸಿಕೊಡಿ’ ಎಂದು ನರಸಾಪುರದ ದುರುಗಪ್ಪ ಅಲವತ್ತುಕೊಂಡರು.

‘ಡಿಎಂಎಸ್ ಗಣಿ ಕಂಪನಿ ಸ್ಥಗಿತಗೊಂಡಿದ್ದರಿಂದ, ಕೆಲಸ ಕಳೆದುಕೊಂಡು ಮನೆಯಲ್ಲಿದ್ದೇನೆ. ಚಪ್ಪಲಿ ಅಂಗಡಿ ತೆರೆಯಲು ಸಹಾಯ ಮಾಡಿ’ ಎಂದು ವಿಠಲನಗರದ ಫಕ್ರುದ್ದೀನ್ ಕೋರಿದರು.

‘ಜಿಲ್ಲಾ ಖನಿಜ ನಿಧಿಯಿಂದ ಸಣ್ಣ ಕೈಗಾರಿಕೆಗಳನ್ನು ತೆರೆದು, ಜನರಿಗೆ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಿ ಉದ್ಯೋಗ ಕಲ್ಪಿಸಬೇಕು’ ಎಂದು ತಾರಾನಗರದ ರಮೇಶ್ ಗಡಾದ್ ಒತ್ತಾಯಿಸಿದರು.

ಸಭೆಯ ಕುರಿತು ಪ್ರಚಾರ ಇಲ್ಲ...

’ಇಂಥ ಮಹತ್ವದ ಸಭೆ ನಡೆಸುವ ಬಗ್ಗೆ ಹೆಚ್ಚಿನ ಪ್ರಚಾರ, ಮಾಹಿತಿಯನ್ನೇ ನೀಡಿಲ್ಲ’ ಎಂದು ಪಟ್ಟಣದ ಸೋಮಶೇಖರ್‌ ಎಂಬುವವರು ಸಭೆಯ ಬಳಿಕ ಸುದ್ದಿಗಾರರ ಮುಂದೆ ಆಕ್ಷೇಪಿಸಿದರು. ‘ಚುನಾವಣೆ ಹತ್ತಿರ ಬಂದಾಗ ಇಂತಹ ಕ್ರಮ ಕೈಗೊಳ್ಳುವ ಬದಲು ಮೊದಲೇ ಹಮ್ಮಿಕೊಂಡಿದ್ದರೆ ಹೆಚ್ಚಿನ ಪ್ರಯೋಜನವಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry