ಯೂನಿಯನ್ ಪಾರ್ಕ್‍ನಲ್ಲಿ ಇಂದಿರಾ ಕ್ಯಾಂಟಿನ್‍ಗೆ ಆಕ್ಷೇಪ

7

ಯೂನಿಯನ್ ಪಾರ್ಕ್‍ನಲ್ಲಿ ಇಂದಿರಾ ಕ್ಯಾಂಟಿನ್‍ಗೆ ಆಕ್ಷೇಪ

Published:
Updated:
ಯೂನಿಯನ್ ಪಾರ್ಕ್‍ನಲ್ಲಿ ಇಂದಿರಾ ಕ್ಯಾಂಟಿನ್‍ಗೆ ಆಕ್ಷೇಪ

ಚಿತ್ರದುರ್ಗ: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ನಗರದಲ್ಲಿ ನಗರಸಭೆಯವರು ಗುರುತಿಸಿರುವ ಜಾಗದ ಬಗ್ಗೆ ಆಕ್ಷೇಪಣೆಗಳು ಆರಂಭವಾಗಿವೆ. ಒಟ್ಟು ಎರಡು ಕ್ಯಾಂಟೀನ್‌ಗಾಗಿ ನಗರದಲ್ಲಿ ಜಾಗ ಗುರುತಿಸಲಾಗಿತ್ತು. ಒಂದು ಯೂನಿಯನ್ ಪಾರ್ಕ್‌ನಲ್ಲಿ ಮತ್ತೊಂದು ಪ್ರವಾಸಿ ಮಂದಿರದ ಆವರಣದಲ್ಲಿ. ಈಗ ಪಾರ್ಕ್‌ನಲ್ಲಿ ಕ್ಯಾಂಟಿನ್ ನಿರ್ಮಿಸುತ್ತಿರುವುದಕ್ಕೆ ನಗರಸಭೆ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿರುವ ಉದ್ಯಾನಗಳಲ್ಲಿ ಅತಿ ಪುರಾತನವಾಗಿರುವುದು ಯೂನಿಯನ್ ಪಾರ್ಕ್. ಈಗಾಗಲೇ ಈ ಪಾರ್ಕ್‌ ಅಭಿವೃದ್ಧಿಪಡಿಸಲು ಮೊದಲ ಹಂತದಲ್ಲಿ ₹ 73 ಲಕ್ಷಕ್ಕೆ ಟೆಂಡರ್ ಕರೆಯಲಾಗಿದೆ. ಫೆ.6ರಂದು ಟೆಂಡರ್ ತೆರೆಯುವ ಕಾರ್ಯ ನಡೆಯಲಿದೆ. ಇಂಥ ವೇಳೆ, ಪಾರ್ಕ್‌ ಮಧ್ಯಭಾಗದಲ್ಲಿ ಕ್ಯಾಂಟಿನ್‌ ನಿರ್ಮಾಣಕ್ಕೆ ಸಿದ್ಧತೆ ಮಾಡುತ್ತಿರುವುದು ಸರಿಯಲ್ಲ’ ಎಂದು ಶ್ಯಾಮಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾರ್ಕ್‌ ಒಳಗೆ ಇಂದಿರಾ ಕ್ಯಾಂಟೀನ್ ನಿರ್ಮಿಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಾಗೂ ಪೌರಾಯುಕ್ತ ಸಿ. ಚಂದ್ರಪ್ಪ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.  ಜಿಲ್ಲಾಡಳಿತ, ನಗರಸಭೆ ಮನವಿಗೆ ಸ್ಪಂದಿಸದೇ, ಕ್ಯಾಂಟಿನ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸದಿದ್ದರೆ, ವಾರ್ಡ್‌ ನಾಗರಿಕರೊಂದಿಗೆ ಪಾರ್ಕ್‌ ಸ್ಥಳಲ್ಲೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಏಳು ಕ್ಯಾಂಟಿನ್‌ಗೆ ಅನುಮತಿ : ಜಿಲ್ಲೆಯಲ್ಲಿ ₹ 8 ಲಕ್ಷ ಚಿಲ್ಲರೆ ವೆಚ್ಚದಲ್ಲಿ ಒಟ್ಟು ಏಳು ಕಡೆ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಸರ್ಕಾರ ಅನುಮತಿ ನೀಡಿತ್ತು. ನಗರದಲ್ಲಿ ಎರಡು, ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದರಂತೆ ಕ್ಯಾಂಟಿನ್ ಆರಂಭಿಸಲು ಜಾಗ ಗುರುತಿಸಲು ಸೂಚಿಸಿತ್ತು. ಹಿರಿಯೂರಿನಲ್ಲಿ ಗುರುಭವನದ ಪಕ್ಕದಲ್ಲಿ ಕ್ಯಾಂಟಿನ್ ಆರಂಭಿಸಲು ಜಾಗ ಗುರುತಿಸಲಾಗಿತ್ತು. ಆದರೆ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಆ ಕೆಲಸ ಹಾಗೇ ಬಾಕಿ ಉಳಿದಿದೆ.

ಉಳಿದಂತೆ ಚಳ್ಳಕೆರೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಸಮೀಪದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಜಾಗ ಗುರುತಿಸಲಾಗಿದೆ. ಹೊಸದುರ್ಗ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿ, ಮೊಳಕಾಲ್ಮುರಿನ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಕ್ಯಾಂಟಿನ್‌ಗಾಗಿ ಜಾಗ ಗುರುತಿಸಲಾಗಿದೆ.

ಆದರೆ, ಜಿಲ್ಲೆಯ ಯಾವ ತಾಲ್ಲೂಕಿನಲ್ಲೂ ಕ್ಯಾಂಟಿನ್ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಯೂನಿಯನ್‍ ಪಾರ್ಕ್‍ನಲ್ಲಿ ಎರಡು ದಿನಗಳಿಂದ ಮಣ್ಣು ಹೊಡೆಸುವ ಕಾರ್ಯ ಆರಂಭವಾಗಿದ್ದು, ಅದಕ್ಕೆ ಆಕ್ಷೇಪಗಳು ಆರಂಭವಾಗಿವೆ.

ನಗರಸಭೆಯ ದಾಖಲೆಗಳಲ್ಲಿ ಯೂನಿಯನ್ ಪಾರ್ಕ್‌ ಎಂದು ಉಲ್ಲೇಖವಾಗಿಲ್ಲ. ಪಾರ್ಕ್‌ ಜಾಗವಲ್ಲದ್ದರಿಂದ, ಅಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಯಾವುದೇ ಕಾನೂನಾತ್ಮಕ ಸಮಸ್ಯೆ ಇಲ್ಲ.

– ಎಚ್. ಎನ್.ಮಂಜುನಾಥ್ ಗೊಪ್ಪೆ, ಅಧ್ಯಕ್ಷ, ನಗರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry