ಗಾಳಿಪಟ ಹಾರಿಸಿ ಸಂಭ್ರಮಿಸಿದ ಬಾಲಕರು

7

ಗಾಳಿಪಟ ಹಾರಿಸಿ ಸಂಭ್ರಮಿಸಿದ ಬಾಲಕರು

Published:
Updated:
ಗಾಳಿಪಟ ಹಾರಿಸಿ ಸಂಭ್ರಮಿಸಿದ ಬಾಲಕರು

ಹೊಳಲ್ಕೆರೆ: ಆಕಾಶದೆತ್ತರಕ್ಕೆ ಬಾಲಂಗೋಚಿ ಹಾರಿಸುವುದೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳಿಗೆ ಗಾಳಿಪಟದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ದೊಡ್ಡ ನಗರಗಳಲ್ಲಿ, ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಗಾಳಿಪಟ ಉತ್ಸವ ಆಯೋಜಿಸಿ ಮಕ್ಕಳನ್ನು ರಂಜಿಸುತ್ತಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಗಾಳಿಪಟ ಉತ್ಸವ ನಡೆಸುವ ಮೂಲಕ ಶಿಕ್ಷಕರು ಮತ್ತು ಪೋಷಕರು ಇತರರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಗುಡ್ಟದ ಸಾಂತೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶನಿವಾರ ಗಾಳಿಪಟ ಉತ್ಸವ ಆಯೋಜಿಸಿದ್ದರು. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಭಿನ್ನ ವಿನ್ಯಾಸದ ಗಾಳಿಪಟ ತಂದಿದ್ದರು. ಎಲ್ಲಾ ಗಾಳಿಪಟಗಳನ್ನು ವಿದ್ಯಾರ್ಥಿಗಳೇ ತಯಾರಿಸಿಕೊಂಡು ಬಂದಿದ್ದು ಕೂಡ ವಿಶೇಷ. ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟವಾದ ಚಿತ್ರಗಳನ್ನು ಪಟದ ಮೇಲೆ ಅಂಟಿಸಿದ್ದರು. ಕರ್ನಾಟಕದ ನಕ್ಷೆ, ತಮ್ಮ ಇಷ್ಟದ ಕವಿಗಳು, ಚಿತ್ರನಟರು, ಸ್ಮೈಲಿ ಕಾರ್ಟೂನ್ ಗಳನ್ನು ಪಟಕ್ಕೆ ಹಚ್ಚಿದ್ದರು.

ಶನಿವಾರ ಬೆಳಗಿನ ಶಾಲೆ ಆಗಿದ್ದರಿಂದ ಮಕ್ಕಳು 8ಕ್ಕೇ ಶಾಲೆಯ ಆವರಣದಲ್ಲಿ ಸೇರಿದ್ದರು. ಎಲ್ಲರ ಕೈಯಲ್ಲೂ ಒಂದೊಂದು ಪಟ. ‘ಲೇ ನನ್ನ ಗಾಳಿಪಟ ನಿನ್ನ ಪಟಕ್ಕಿಂತ ದೊಡ್ಡದು ನೋಡೋ. ನಿನ್ನ ಪಟದ ಬಣ್ಣ ಚೆನ್ನಾಗಿಲ್ಲ. ಎಲ್ಲರಿಗಿಂತ ನನ್ನ ಪಟವೇ ಚೆನ್ನಾಗಿದೆ. ನನ್ನ ಪಟ ನೋಡೋ ಎಷ್ಟು ಎತ್ತರಕ್ಕೆ ಹಾರಿದೆ. ಅಯ್ಯೋ ನನ್ನದು ತೆಂಗಿನ ಮರಕ್ಕೆ ಸಿಕ್ಕಿ ಹಾಕಿಕೊಳ್ತು. ಹೌದಾ ನನ್ನ ಪಟವೂ ಕರೆಂಟ್ ತಂತಿಗೆ ಸಿಕ್ಕಿಕೊಳ್ತು. ಲೇ ನನ್ನ ಪಟ ನಿನ್ನ ಪಟದ ದಾರಕ್ಕೆ ಸಿಕ್ಕಿಕೊಳ್ತು. ಸರ್ ನನ್ನ ಪಟ ಯಾಕೋ ಹಾರ್ತಾನೇ ಇಲ್ಲ, ಸರಿಮಾಡಿಕೊಡಿ. ಅಯ್ಯೋ ನನ್ನ ಪಟದ ದಾರವೇ ಕಿತ್ತು ಹೋಯ್ತು ಮೇಡಂ….’ ಎಂಬ ಮಾತುಗಳು ಸಾಮಾನ್ಯವಾಗಿದ್ದವು.

ಪಟ ಹಾರಿಸಲು ಶಿಕ್ಷಕರು ಮಕ್ಕಳಿಗೆ ನೆರವಾಗುತ್ತಿದ್ದರು. ಪೋಷಕರೂ ತಮ್ಮ ಮಕ್ಕಳಿಗೆ ಗಾಳಿಪಟ ಹಾರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಕೆಲವು ಪೋಷಕರೂ ಮಕ್ಕಳೊಂದಿಗೆ ಪಟ ಹಾರಿಸಿ ಸಂಭ್ರಮಿಸಿದರು. ಕೆಲವರು ಗಾಳಿ ಹೆಚ್ಚು ಬೀಸುತ್ತದೆ ಎಂದು ಶಾಲೆಯ ಚಾವಣಿ ಹತ್ತಿ ಪಟ ಹಾರಿಸಿದರು. ಬಾನೆತ್ತರಕ್ಕೆ ಹಾರಿದ ಪಟ ನೋಡಿ ಮಕ್ಕಳು ಕುಣಿದು ಕುಪ್ಪಳಿಸಿದರು. ಮರ, ವಿದ್ಯುತ್ ತಂತಿಗೆ ಸಿಕ್ಕಿ ಹಾಕಿಕೊಂಡ ಪಟಗಳನ್ನು ಪೋಷಕರು ಏಣಿ, ಬಿದಿರಿನ ಗಣ ಬಳಸಿ ತೆಗೆದುಕೊಟ್ಟರು.

ಪಟ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ: ದೊಡ್ಡ ನಗರಗಳಲ್ಲಿ ಗಾಳಿಪಟ ಉತ್ಸವ ಆಚರಿಸಿದ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ನೋಡುತ್ತೇವೆ. ಗ್ರಾಮೀಣ ಪ್ರದೇಶದ ಮಕ್ಕಳು ಇಂತಹ ಸಂಭ್ರಮದಿಂದ ವಂಚಿತರಾಗುತ್ತಾರೆ. ನಾವೂ ಇಂತಹ ಉತ್ಸವ ಆಯೋಜಿಸಬೇಕು ಎಂದು ಉತ್ಸವ ನಡೆಸುತ್ತಿದ್ದೇವೆ. ಒಂದು ವಾರದ ಮುಂಚೆಯೇ ವಿದ್ಯಾರ್ಥಿಗಳಿಗೆ ಗಾಳಿಪಟ ತಯಾರಿಸುವ ಬಗ್ಗೆ ತಿಳಿಸಿದ್ದೆವು. ಅತ್ಯಂತ ಕಡಿಮೆ ಖರ್ಚಿನಲ್ಲಿ ಪಟ ತಯಾರಿಸುವ ಬಗ್ಗೆ ಹೇಳಿಕೊಟ್ಟಿದ್ದೆವು’ ಎಂದು ಶಿಕ್ಷಕ ಎನ್.ಬಸವರಾಜ್ ತಿಳಿಸಿದರು.

‘ಗಾಳಿಪಟ ಹಗುರವಾಗಿದ್ದರೆ ಚೆನ್ನಾಗಿ ಹಾರುತ್ತದೆ. ಆದಷ್ಟು ಕಡಿಮೆ ಭಾರದ ಪಟಗಳನ್ನು ತಯಾರಿಸಬೇಕು ಎಂದು ಹೇಳಿದ್ದೆವು. ತೆಂಗಿನ ಗರಿಯ ಕಡ್ಡಿ, ಕವರ್, ಪೇಪರ್, ಟೇಪ್ ಬಳಸಿ ಪಟ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ತೋರಿಸಿದ್ದೆವು. ಇದರಿಂದ ಮಕ್ಕಳೇ ಪೋಷಕರ ನೆರವಿನಿಂದ ಪಟ ತಯಾರಿಸಿದ್ದಾರೆ. ಬಣ್ಣದ ಪೇಪರ್, ಗಮ್, ದಾರಕ್ಕೆ ₹ 20 ಖರ್ಚಾಗಬಹುದು ಅಷ್ಟೆ’ ಎಂದು ಅವರು ತಿಳಿಸಿದರು. ಮುಖ್ಯಶಿಕ್ಷಕ ರಾಮಚಂದ್ರಪ್ಪ, ಶಿಕ್ಷಕಿಯರಾದ ಕನಕಪ್ರಭ, ಅಕ್ಷಯಾ, ಅನಸೂಯಾ ಇದ್ದರು.

* * 

ದೊಡ್ಡ ನಗರಗಳ ಪ್ರತಿಷ್ಠಿತ ಶಾಲೆಗಳಲ್ಲಿ ಗಾಳಿಪಟ ಉತ್ಸವ ಆಯೋಜಿಸುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅಂತಹ ಸಂಭ್ರಮ ಸಿಗಬೇಕು

ಎನ್.ಬಸವರಾಜ್ ಉತ್ಸವ ಆಯೋಜಿಸಿದ ಶಿಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry