ಯಡಿಯೂರು: ಹಸಿಕಸದಿಂದ ವಿದ್ಯುತ್‌

7
ಉದ್ಯಾನ, ಪಾದಚಾರಿ ಮಾರ್ಗದ ದೀಪಗಳಿಗೆ ವಿದ್ಯುತ್‌ ಪೂರೈಕೆ

ಯಡಿಯೂರು: ಹಸಿಕಸದಿಂದ ವಿದ್ಯುತ್‌

Published:
Updated:
ಯಡಿಯೂರು: ಹಸಿಕಸದಿಂದ ವಿದ್ಯುತ್‌

ಬೆಂಗಳೂರು: ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ಸೌತ್‌ ಎಂಡ್‌ ವೃತ್ತದ ಬಳಿ ನಿರ್ಮಿಸಿರುವ ಜೈವಿಕ ಅನಿಲ ಘಟಕದಲ್ಲಿ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.

ಈ ಘಟಕವು 5 ಟನ್‌ ಕಸದ ಸಾಮರ್ಥ್ಯ ಹೊಂದಿದೆ. ಹಸಿ ಕಸವನ್ನು ಮೀಥೇನ್‌ ಅನಿಲವನ್ನಾಗಿ ಪರಿವರ್ತಿಸಿ, ಅದರಿಂದ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಬಳಿಕ, ದ್ರವರೂಪದ ಗೊಬ್ಬರ ಹೊರಬರಲಿದ್ದು, ಅದನ್ನು ಸಂಪ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ಉದ್ಯಾನಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ತಿಳಿಸಿದರು.

ಘಟಕದಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ ಅನ್ನು ಅಂಬರ ಚುಂಬನ ಗಡಿಯಾರ ಗೋಪುರ, ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ, ರಣಧೀರ ಕಂಠೀರವ ಉದ್ಯಾನ, ಚೈತನ್ಯ ಉದ್ಯಾನ, ಚಂದವಳ್ಳಿಯ ತೋಟ, ಧನ್ವಂತರಿ ವನ ಹಾಗೂ ಸಂಜೀವಿನಿ ವನಗಳಲ್ಲಿ ಅಳವಡಿಸಿರುವ ದೀಪಗಳು, ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಆಲಂಕಾರಿಕಾ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ. ಜತೆಗೆ, 6 ಕೊಳವೆಬಾವಿಗಳ ಪಂಪ್‌ಸೆಟ್‌ಗಳಿಗೂ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಬೆಸ್ಕಾಂಗೆ ಪ್ರತಿ ತಿಂಗಳು ಪಾವತಿಸುತ್ತಿದ್ದ ಸುಮಾರು ₹4 ಲಕ್ಷ ಉಳಿತಾಯವಾಗಲಿದೆ ಎಂದರು.

ಯಡಿಯೂರು ವಾರ್ಡ್‌ನಲ್ಲಿ ನಿತ್ಯ ಉತ್ಪತ್ತಿಯಾಗುವ 4.5 ಟನ್‌ ಹಸಿಕಸವನ್ನು ಈ ಹಿಂದೆ ಕನ್ನಹಳ್ಳಿ ಕಸ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿತ್ತು. ಇದಕ್ಕಾಗಿ ₹2.5 ಲಕ್ಷ ಸಾಗಣೆ ವೆಚ್ಚವಾಗುತ್ತಿತ್ತು. ಈಗ ಹಸಿಕಸವನ್ನು ಜೈವಿಕ ಅನಿಲ ಘಟಕದಲ್ಲಿ ನಿರ್ವಹಣೆ ಮಾಡುವುದರಿಂದ ಸಾಗಣೆ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಿದರು.

ಘಟಕವನ್ನು ಉದ್ಘಾಟಿಸಿದ ಕೇಂದ್ರ ಸಚಿವ ಅನಂತಕುಮಾರ್‌, ‘ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶಿಷ್ಟ ಪ್ರಯತ್ನವಿದು. ಈ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಶೇ 30ರಷ್ಟು ಸಬ್ಸಿಡಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ’ ಎಂದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ಹಸಿಕಸದಿಂದ ವಿದ್ಯುತ್‌ ಉತ್ಪಾದಿಸುವ ಜೈವಿಕ ಅನಿಲ ಘಟಕವನ್ನು ನಗರದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾಗಿದೆ. ನನ್ನ ವಾರ್ಡ್‌ನಲ್ಲೂ ಇಂತಹ ಘಟಕ ಸ್ಥಾಪಿಸಲಾಗುವುದು. ನಗರದ ಕೇಂದ್ರ ಭಾಗದ ವಾರ್ಡ್‌ಗಳಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಿದರೆ, ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದರು.

ಅಂಕಿ–ಅಂಶ

₹90 ಲಕ್ಷ– ಜೈವಿಕ ಅನಿಲ ಘಟಕದ ವೆಚ್ಚ

250 ಕಿಲೋವಾಟ್‌– ಘಟಕದಲ್ಲಿ ನಿತ್ಯ ಉತ್ಪಾದಿಸುವ ವಿದ್ಯುತ್‌

4.5 ಟನ್‌– ಯಡಿಯೂರು ವಾರ್ಡ್‌ನಲ್ಲಿ ನಿತ್ಯ ಸಂಗ್ರಹಗೊಳ್ಳುವ ಹಸಿಕಸ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry