‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

7

‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

Published:
Updated:
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

ಬಾಗಲಕೋಟೆ: ‘ಬಸವಾದಿ ಶರಣರ ಆಶಯ, ಅಂಬೇಡ್ಕರ್ ಚಿಂತನೆಗಳಿಂದ ಪ್ರೇರಿತವಾದ ವೈಚಾರಿಕತೆಯನ್ನು ಕಾಂಗ್ರೆಸ್ ಪಕ್ಷ ಮೈಗೂಡಿಸಿಕೊಂಡಿದೆ. ಹಾಗಾಗಿ ಎಲ್ಲರನ್ನು ಒಳಗೊಂಡು ದೇಶವನ್ನು ಮುನ್ನಡೆಸಲಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಬಾರಿಯ ಚುನಾವಣೆ ಮಹತ್ವದ್ದಾಗಿದೆ. ಹಾಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕ್ರಿಯಾಶೀಲರಾದ, ಬದ್ಧತೆ, ನಿಷ್ಠೆ ಹೊಂದಿದ ಪ್ರಾಮಾಣಿಕರನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಒಂದಾಗಿ ಹೆಜ್ಜೆ ಇಟ್ಟಲ್ಲಿ ಚುನಾವಣೆ ಗೆಲ್ಲಲು ಇಂದಿನ ಕಾರ್ಯಕ್ರಮ ದಿಕ್ಸೂಚಿಯಾಗಲಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪತಾಕೆ ಹಾರಿಸೋಣ’ ಎಂದರು.

ಕಾಂಗ್ರೆಸ್ ಪಕ್ಷ ಜಾತ್ಯತೀತವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಾವು ಜಾತಿ–ಧರ್ಮದ ನಡುವೆ ಗಲಭೆ ಸೃಷ್ಟಿಸುವುದಿಲ್ಲ.ಮನುಷ್ಯರ ನಡುವಿನ ಗೋಡೆ ಕೆಡವಿ ಎಲ್ಲರೂ ಒಂದೇ ಎಂಬ ಭಾವ ಬಿತ್ತುತ್ತೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 6.5 ಲಕ್ಷ ಕಾಂಗ್ರೆಸ್ಸಿಗರು ಜೀವ ಕೊಟ್ಟಿದ್ದಾರೆ. ಇದನ್ನೆಲ್ಲಾ ಮನಗಂಡು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಮುನ್ನಡೆಯಿರಿ ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಸವಲತ್ತು ನಿರೀಕ್ಷೆ ಬೇಡ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಹಿಂದೆ ಯುವ ಕಾಂಗ್ರೆಸ್‌ನಲ್ಲಿದ್ದಾಗ ತಾವು ಜಾವಾ ಮೋಟಾರ್‌ಬೈಕ್‌ನಲ್ಲಿ ಓಡಾಡಿ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದನ್ನು ನೆನಪಿಸಿಕೊಂಡರು.

‘ನೀವು ಪದಾಧಿಕಾರಿಗಳು ಪಕ್ಷದಿಂದ ಅನಗತ್ಯ ಸವಲತ್ತುಗಳ ನಿರೀಕ್ಷೆಯಲ್ಲಿ ಕಾಲಹರಣ ಮಾಡಬೇಡಿ. ದೇವರಾಜ ಅರಸು ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದ ಸಾಧನೆಗಳ ಮಾಹಿತಿ ಪುಸ್ತಕ ಪ್ರತಿ ಮನೆಯಲ್ಲೂ ಇರುವಂತೆ ನೋಡಿಕೊಳ್ಳಿ. ಹಿಂದಿನ ಚುನಾವಣೆಗಿಂತ ಈ ಬಾರಿ ಪ್ರತಿ ಬೂತ್‌ನಲ್ಲಿ 15ರಿಂದ 20 ಮತ ಹೆಚ್ಚು ಬರುವಂತೆ ಪ್ರಯತ್ನಿಸಿ. ಆಗ ಪಕ್ಷ ಖಂಡಿತವಾಗಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಎಂ.ಬಿ.ಸೌದಾಗರ್, ಮಹಿಳಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ರಕ್ಷಿತಾ ಈಟಿ ಪದಗ್ರಹಣ ಮಾಡಿದರು. ಜಿಲ್ಲಾ ಘಟಕದ ಉಳಿದ ಪದಾಧಿಕಾರಿಗಳಿಗೂ ಇದೇ ಸಂದರ್ಭದಲ್ಲಿ ನೇಮಕಾತಿ ಪತ್ರ ಹಾಗೂ ಪಕ್ಷದ ಧ್ವಜಗಳನ್ನು ನೀಡಲಾಯಿತು. ಎಂ.ಬಿ.ಸೌದಾಗರ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಎಚ್.ವೈ.ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಜೆ.ಟಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಡಿ.ಆರ್.ಪಾಟೀಲ, ಪ್ರಧಾನ ಕಾರ್ಯದರ್ಶಿ ಪಾರಸ್‌ಮಲ್ ಜೈನ್, ಕಾರ್ಯದರ್ಶಿಗಳಾದ ಕಮಲಾ ಮರಿಸ್ವಾಮಿ, ದಯಾನಂದ ಪಾಟೀಲ, ಬಸವಪ್ರಭು ಸರನಾಡಗೌಡರ, ಎಂ.ಎಲ್.ಶಾಂತಗೇರಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಾ.ದೇವರಾಜ ಪಾಟೀಲ, ಉಪಾಧ್ಯಕ್ಷರಾದ ಮುತ್ತಣ್ಣ ಬೆನ್ನೂರ, ನಾಗರಾಜ ಹದ್ಲಿ, ಪೀರಪ್ಪ ಮ್ಯಾಗೇರಿ, ವಕ್ತಾರರಾದ ಆನಂದ ಜಿಗಜಿನ್ನಿ, ರಾಜು ಮನ್ನಿಕೇರಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹಾಂತೇಶ ಉದಪುಡಿ, ಗಂಗೂಬಾಯಿ ಮೇಟಿ, ಶಶಿಕಲಾ ಆರ್.ಯಡಹಳ್ಳಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದ ಪುಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ ಹಾಜರಿದ್ದರು.

ಸಭೆಯಿಂದ ಸಚಿವರಿಬ್ಬರು ದೂರ..

ಪದಗ್ರಹಣ ಸಮಾರಂಭದಿಂದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಚಿವೆ ಉಮಾಶ್ರೀ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಸಿದ್ದು ನ್ಯಾಮಗೌಡ ದೂರ ಉಳಿದರು. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ನಾಲ್ವರು ಗೈರಾಗಿದ್ದು, ಕಾರ್ಯಕರ್ತರ ಗುಸುಗುಸುಗೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯಾನಂದ ಅಂಬಿಗರ ಚೌಡಯ್ಯ ಜಯಂತಿ ಇದ್ದ ಕಾರಣ ಭಾಗಿಯಾಗಿಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. ತಪ್ಪು ಕಲ್ಪನೆ ಬೇಡ ಎಂದರು.

ಪದಗ್ರಹಣ ಸಮಾರಂಭದಲ್ಲಿ ಕೆಲಹೊತ್ತು ಕಾಣಿಸಿಕೊಂಡ ನಟಿ ಅಪೇಕ್ಷಾ ಪುರೋಹಿತ ಸಭಾಂಗಣದಲ್ಲಿ ಮಿಂಚು ಹರಿಸಿದರು.

ಬಾಗಲಕೋಟೆ ಕ್ಷೇತ್ರದಿಂದ ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ಪಿ.ಎಚ್.ಪೂಜಾರ ಜೊತೆಗೆ ನಾನು ಕೂಡ ಪಕ್ಷದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕಾಗಿ ದುಡಿದಿದ್ದೇನೆ.

ಸಂಘಟಿಸಿದ್ದೇನೆ. ಐದು ವರ್ಷಗಳ ಹಿಂದೆ ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೇ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಹಾಗಾಗಿ ಹೈಕಮಾಂಡ್ ಎದುರು ಟಿಕೆಟ್‌ಗೆ ಮನವಿ ಸಲ್ಲಿಸಲಿದ್ದೇನೆ ಎಂದು ಹೇಳಿದ ತಪಶೆಟ್ಟಿ, ಮೂವರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಪರಸ್ಪರರ ಗೆಲುವಿಗೆ ಸಹಕರಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೊ ಅವರು ಸ್ಪರ್ಧಿಸಲಿದ್ದೇವೆ. ಎಲ್ಲವೂ ಅವರಿಗೆ ಬಿಟ್ಟದ್ದು’ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ಬಾದಾಮಿ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಹೈಕಮಾಂಡ್ ಎಲ್ಲಿಂದ ಸ್ಪರ್ಧಿಸಲು ಸೂಚಿಸಿದರೂ ಅದನ್ನು ಪಾಲಿಸುವೆ. ನಾನಾಗಿಯೇ ಟಿಕೆಟ್ ಕೇಳುವುದಿಲ್ಲ ಎಂದರು.

‘ಬಾದಾಮಿ ಕ್ಷೇತ್ರದಿಂದ ನಾನೇ ಅಭ್ಯರ್ಥಿ. ಅಲ್ಲಿ ಮುಖ್ಯಮಂತ್ರಿ ಸ್ಪರ್ಧಿಸಲಿದ್ದಾರೆ ಎಂದು ನೀವೇ (ಮಾಧ್ಯಮದವರು) ಸೃಷ್ಟಿಸಿದ್ದೀರಿ. ಯಾರೂ ಬರುವುದಿಲ್ಲ. ನಾನೇ ನಿಲ್ಲಲಿದ್ದೇನೆ. ನನಗೆ ಟಿಕೆಟ್ ತಪ್ಪಿಸಿದರೆ ತಾಲ್ಲೂಕಿನ ಜನರೇ ಪಕ್ಷವನ್ನು ಸೋಲಿಸಲಿದ್ದಾರೆ’ ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry