ಬಳ್ಳಾರಿ ಪ್ರವೇಶ: ರೆಡ್ಡಿಗೆ ಸಿಗದ ಅವಕಾಶ

7

ಬಳ್ಳಾರಿ ಪ್ರವೇಶ: ರೆಡ್ಡಿಗೆ ಸಿಗದ ಅವಕಾಶ

Published:
Updated:
ಬಳ್ಳಾರಿ ಪ್ರವೇಶ: ರೆಡ್ಡಿಗೆ ಸಿಗದ ಅವಕಾಶ

ನವದೆಹಲಿ: ಜಾಮೀನು ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಸಡಿಲಗೊಳಿಸುವಂತೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011ರ ಸೆಪ್ಟೆಂಬರ್‌ 5ರಂದು ಬಳ್ಳಾರಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ರೆಡ್ಡಿ ಅವರಿಗೆ 2015ರಲ್ಲಿ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್‌, ರಾಜ್ಯದ ಬಳ್ಳಾರಿ, ಆಂಧ್ರದ ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು.

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ಪೀಠವು, ಮುಂದಿನ ಮೂರು ತಿಂಗಳವರೆಗೆ ಈ ರೀತಿಯ ಮನವಿ ಸಲ್ಲಿಸದಂತೆ ತಾಕೀತು ಮಾಡಿ ಅರ್ಜಿಯನ್ನು ತಿರಸ್ಕರಿಸಿತು.

ಪುತ್ರಿಯ ಮದುವೆ, ದಸರಾ ಹಾಗೂ ದೀಪಾವಳಿ ಹಬ್ಬಗಳ ಆಚರಣೆಗಾಗಿ ಬಳ್ಳಾರಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿ ಅವರಿಗೆ ಅವಕಾಶ ನೀಡಿದ್ದ ಪೀಠವು, ಸಂಬಂಧಿಕರ ಪುತ್ರನ ಮದುವೆ ಸಮಾರಂಭಕ್ಕಾಗಿ ಬಳ್ಳಾರಿ ಭೇಟಿಗೆ ಪ್ರವೇಶ ಕೋರಿ ಕಳೆದ ನವೆಂಬರ್‌ 16ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ‘ಮದುವೆ ಸಮಾರಂಭಗಳಿಗಾಗಿ ಅನುಮತಿ ನೀಡಿದಲ್ಲಿ ಅದಕ್ಕೆ ಕೊನೆ ಎಂಬುದೇ ಇಲ್ಲದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತ್ತು.

6 ವರ್ಷಗಳಿಂದ ಜನಾರ್ದನರೆಡ್ಡಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳೆಲ್ಲ ಇರುವ ಬಳ್ಳಾರಿಯಲ್ಲೇ ನೆಲೆಸಲು ಅವಕಾಶ ನೀಡಬೇಕು. ಇವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ವಿಚಾರಣೆ ಪೂರ್ಣಗೊಳ್ಳದ ಕಾರಣ ರೆಡ್ಡಿ ಬಳ್ಳಾರಿಯಿಂದ ದೂರ ಉಳಿಯಬೇಕಾಗಿದೆ ಎಂದು ಅವರ ಪರ ವಕೀಲ ಮುಕುಲ್‌ ರೋಹಟ್ಗಿ ಕೋರಿದರು.

ಸಿಬಿಐ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣಿಂದರ್‌ ಸಿಂಗ್‌ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೆ, ಜಾಮೀನಿಗಾಗಿ ನ್ಯಾಯಾಧೀಶರನ್ನೇ ಲಂಚದ ಬಲೆಗೆ ಕೆಡವಿರುವ ರೆಡ್ಡಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry