ಎಲ್ಲಾ ಕಾಲಕ್ಕೂ ಸಲ್ಲುವ ಕಾಶ್ಮೀರಿ ಪೈರನ್‌

7

ಎಲ್ಲಾ ಕಾಲಕ್ಕೂ ಸಲ್ಲುವ ಕಾಶ್ಮೀರಿ ಪೈರನ್‌

Published:
Updated:
ಎಲ್ಲಾ ಕಾಲಕ್ಕೂ ಸಲ್ಲುವ ಕಾಶ್ಮೀರಿ ಪೈರನ್‌

ಸ್ವಲ್ಪ ಚಳಿಯಾದರೆ ಟೋಪಿ, ಸ್ವೆಟರು, ಜಾಕೆಟ್‌ ಹುಡುಕಲು ಶುರುಮಾಡುತ್ತೇವೆ. ಆದರೆ ಈಗ ಮೈನಡುಗಿಸುವ ಚಳಿ. ಯಾವ ಬಟ್ಟೆ ತೊಟ್ಟರೂ ಚಳಿ ತಡೆಯಲು ಆಗದು. ಚಳಿಗಾಲದಲ್ಲಿ ಬೆಚ್ಚನೆಯ ಉಡುಪಿಗೆ ಹೆಚ್ಚು ಪ್ರಾಶಸ್ತ್ಯ. ದೇಹವನ್ನು ಚಳಿಯಿಂದ ತಡೆಯಬಲ್ಲ ಕಾಶ್ಮೀರಿ ಪೈರನ್‌ ಜನರನ್ನು ಹೆಚ್ಚು ಆಕರ್ಷಿಸಿದೆ.

ಕಾಶ್ಮೀರದಲ್ಲಿ ಮೈಮೂಳೆ ನಡುಗಿಸುವಂಥ ಚಳಿ. ಹಾಗಾಗಿ ಅಲ್ಲಿಯ ಜನರು ಉದ್ದ ಪೈರನ್‌, ಅದಕ್ಕೆ ಜೀನ್ಸ್‌ ಪ್ಯಾಂಟ್‌ ತೊಡುವುದು ಮಾಮೂಲು. ಹತ್ತಿ ಅಥವಾ ಉಣ್ಣೆ ಬಟ್ಟೆಯಿಂದ ಮಾಡಿದಂಥ ಈ ಪೈರನ್‌ಗಳು ಮೈಯನ್ನು ಬೆಚ್ಚಗಿಡುತ್ತವೆ. ತೊಡಲೂ ಆರಾಮವಾಗಿರುತ್ತದೆ. ಹೀಗಾಗಿ ಈ ಬಟ್ಟೆಗಳಿಗೆ ‘ಕಾಶ್ಮೀರಿ ಪೈರನ್‌’ ಎಂದೇ ಹೆಸರು ಬಂದಿದೆ. ಈ ಶೈಲಿಯ ದಿರಿಸು ದೇಶದೆಲ್ಲೆಡೆ ಲಭ್ಯವಿದ್ದು, ಸಾಂಪ್ರದಾಯಿಕ ಬಟ್ಟೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತವೆ. ಮದುವೆ ಅಥವಾ ಇತರ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಪೈರನ್‌ ತೊಡುವವರೇ ಹೆಚ್ಚು.

ಈ ಚಳಿಗಾಲಕ್ಕೆ ಬಗೆಬಗೆ ವಿನ್ಯಾಸದಲ್ಲಿ ಪೈರನ್‌ ಸಿಗುತ್ತವೆ. ಈ ಬಟ್ಟೆಗಳು ಸಹ ಆಧುನಿಕ ರೂಪವನ್ನು ಪಡೆದುಕೊಂಡಿದ್ದು, ವಿವಿಧ ವಯಸ್ಸಿನವರಿಗೆ ತಕ್ಕಂತೆ ವಿನ್ಯಾಸದಲ್ಲಿ ಬದಲಾವಣೆ ಇದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೂ ಬೇರೆ ಬೇರೆ ರೂಪದಲ್ಲಿ ಪೈರನ್‌ಗಳು ಸಿಗುತ್ತವೆ. ಮಹಿಳೆಯರಿಗೆ ಕಾಲರ್‌ ಇರುವ, ಉದ್ದ ತೋಳಿನ, ಪ್ರಿಂಟೆಡ್‌ ಪೈರನ್‌ಗಳಾದರೆ, ಮಕ್ಕಳಿಗೆ ಹಾಗೂ ಪುರುಷರಿಗೆ ಚೆಕ್ಸ್‌ ಅಥವಾ ಖಾದಿಯಲ್ಲಿ ವೃತ್ತಾಕಾರದ ಕತ್ತಿನ ವಿನ್ಯಾಸ ಹಾಗೂ ಸಡಿಲ, ಉದ್ದ ತೋಳಿನ ವಿನ್ಯಾಸಗಳಿವೆ.

ಇವು ಚಳಿಗಾಲದಲ್ಲಷ್ಟೇ ಅಲ್ಲ, ಬೇಸಿಗೆಯಲ್ಲೂ ತೊಡಬಹುದು. ಸಾಮಾನ್ಯವಾಗಿ ಪೈರನ್‌ಗಳು ಸಡಿಲವಾಗಿರುತ್ತವೆ. ದೇಹಕ್ಕೆ ಅಂಟಿದಂತೆ ಇರಬಾರದು. ಸಡಿಲ ಉಡುಪು ದೇಹವನ್ನು ಚಳಿಯಿಂದ ತಡೆಯುತ್ತದೆ. ಬಿಸಿಲಿನಿಂದ ದೇಹವನ್ನು ರಕ್ಷಣೆ ಮಾಡುತ್ತದೆ. ಮನೆಯಲ್ಲಷ್ಟೇ ಅಲ್ಲ, ಕಚೇರಿಗೂ ಆರಾಮವಾಗಿ ಹಾಕಿಕೊಂಡು ಹೋಗಬಹುದು. ಹೆಚ್ಚು ಬಾಳಿಕೆಯೂ ಬರುತ್ತದೆ.

ಕಾಶ್ಮೀರದ ಮಹಿಳೆಯರು ಕಸೂತಿ ವಿನ್ಯಾಸವಿರುವ ಉದ್ದ ತೋಳಿನ ಪೈರನ್‌ ತೊಡಲು ಇಷ್ಟಪಟ್ಟರೆ, ಗಂಡಸರು ಸಾದಾ ಹಾಗೂ ಸರಳ ವಿನ್ಯಾಸದ ಪೈರನ್‌ ತೊಡುತ್ತಾರೆ. ಇದೇ ಮಾದರಿಯನ್ನು ವಸ್ತ್ರ ವಿನ್ಯಾಸಕರು ಅನುಕರಣೆ ಮಾಡಿ, ವಿನ್ಯಾಸದಲ್ಲಿ ಪ್ರಯೋಗಗಳನ್ನೂ ಮಾಡಿದ್ದಾರೆ.

ಮಹಿಳೆಯರು ಪೈರನ್‌ ಆಯ್ಕೆ ಮಾಡುವಾಗ ಚೆಕ್ಸ್‌ ವಿನ್ಯಾಸದವುಗಳು ಬೇಡ. ಇದು ಪುರುಷರ ಮೈಕಟ್ಟಿಗೆ ಹೊಂದಿಕೆಯಾಗುತ್ತದೆ. ಚೌಕಾಕಾರದ ಕಾಲರ್‌ ಇರುವ ಬಟ್ಟೆ ಗಂಡಸರಿಗೆ ಸೂಕ್ತ. ಇದರಲ್ಲೇ ಸ್ವಲ್ಪ ವಿಭಿನ್ನವಾಗಿ ಕಾಣಬೇಕು ಎಂದು ಬಯಸುವವರು ತೋಳನ್ನು ಫೋಲ್ಡ್‌ ಮಾಡಬೇಕು. ಮೊಣಕಾಲಿನ ತನಕದ ಪೈರನ್‌ ಜೊತೆಗೆ ಜೀನ್ಸ್‌ ತೊಡಬೇಕು.  ಮದುವೆ ಅಥವಾ ಕಾರ್ಯಕ್ರಮಗಳಿಗೆ ತೊಡುವವರು ಅದರ ಮೇಲೊಂದು ವೇಸ್ಟ್‌ಕೋಟ್‌ ಧರಿಸಿದರೆ ಆಧುನಿಕ ರೂಪ ಸಿಗುತ್ತದೆ. ಇವು ಎಲ್ಲಾ ಕಾಲಕ್ಕೆ ಹೊಂದಿಕೊಳ್ಳುವುದರಿಂದ ಎಂದಿಗೂ ಔಟ್‌ ಆಫ್‌ ಫ್ಯಾಷನ್‌ ಎನಿಸುವುದಿಲ್ಲ. ನೀವು ತೊಡುವ ರೀತಿಯನ್ನು ಬದಲಾಯಿಸಿಕೊಂಡರೆ ಭಿನ್ನ ನೋಟ ಸಿಗುತ್ತದೆ.

ಮಹಿಳೆಯರು ಪೈರನ್‌ ತೊಟ್ಟಾಗ ಮುಖ, ಕಣ್ಣಿನ ಅಲಂಕಾರ ಕಡಿಮೆ ಇರಲಿ. ಇದು ಸರಳ ಉಡುಗೆಯಾದ್ದರಿಂದ ತೀರಾ ಮೇಕಪ್‌ ಮಾಡಿಕೊಂಡಲ್ಲಿ ಮುಖ ಹಾಗೂ ಶರೀರಕ್ಕೆ ಹೊಂದಿಕೆಯಾಗದೇ ಹೋಗಬಹುದು. ಪೈರನ್‌ ತೊಟ್ಟಾಗ ಕೂದಲನ್ನು ಎತ್ತರಕ್ಕೆ ಬಾಚಿ, ಪೋನಿಟೈಲ್‌ ಹಾಕಿದರಾಯಿತು. ವಿನ್ಯಾಸ ಹೆಚ್ಚಿರುವುದರಿಂದ ಆಭರಣ ತೊಟ್ಟುಕೊಳ್ಳುವ ಗೋಜಿಗೆ ಹೋಗಬೇಡಿ.

ಕಿವಿಗೆ ಮುತ್ತು ಅಥವಾ ಹರಳುಗಳ ಸ್ಟಡ್‌ ಅಥವಾ ನೇತಾಡುವ ಕಿವಿಯೋಲೆ ತೊಟ್ಟರೆ ಸಾಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry