ಸತ್ಯಮಂಗಲ ಕಾಡಿನಲ್ಲಿ ಆರೋಪಿಗಳ ವಿಚಾರಣೆ

7

ಸತ್ಯಮಂಗಲ ಕಾಡಿನಲ್ಲಿ ಆರೋಪಿಗಳ ವಿಚಾರಣೆ

Published:
Updated:
ಸತ್ಯಮಂಗಲ ಕಾಡಿನಲ್ಲಿ ಆರೋಪಿಗಳ ವಿಚಾರಣೆ

ಬೆಂಗಳೂರು: ಯಶವಂತಪುರ ಮಾರುಕಟ್ಟೆಯಲ್ಲಿ ಸೋಮವಾರ ಹುಲಿ ಚರ್ಮ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಮೂವರನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಣಾ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಿದ್ದಾರೆ.

ತಮಿಳುನಾಡಿನ ಡಿ.ಬಾಲಕೃಷ್ಣ, ರಂಗರಾಜು ಹಾಗೂ ಮಹೇಶ್ ಎಂಬುವರನ್ನು ಬಂಧಿಸಿ ಹುಲಿ ಚರ್ಮ ಜಪ್ತಿ ಮಾಡಲಾಗಿತ್ತು. ಸತ್ಯಮಂಗಲ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲೇ ನೆಲೆಸಿರುವ ಆರೋಪಿಗಳು, ಅಲ್ಲೇ ಹುಲಿಯನ್ನು ಕೊಂದು ಅದರ ಚರ್ಮವನ್ನು ನಗರಕ್ಕೆ ತಂದಿದ್ದರು.

‘ಅರಣ್ಯದ ಉತ್ಪನ್ನಗಳನ್ನು ಹೊರತುಪಡಿಸಿ ನಮಗೆ ಬೇರ‍್ಯಾವುದೇ ಆರ್ಥಿಕ ಮೂಲವಿಲ್ಲ. ಕಾಡು ಹಂದಿಗಳನ್ನು ಬೇಟೆಯಾಡಿ ಹಾಗೂ ಮರದ ದಿಮ್ಮಿಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತೇವೆ. ಎರಡು ತಿಂಗಳ ಹಿಂದೆ ಹಂದಿ ಹಿಡಿಯಲು ಒಡ್ಡಿದ್ದ ಉರುಳಿಗೆ ಹುಲಿ ಸಿಕ್ಕಿ ಹಾಕಿಕೊಂಡಿತು. ನಂತರ ಅದನ್ನು ಸಾಯಿಸಿ, ಚರ್ಮ ಸುಲಿದಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

‘ಆರೋಪಿಗಳು ಹೆಚ್ಚು ವನ್ಯಜೀವಿಗಳನ್ನು ಬೇಟೆಯಾಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಎಸ್‌ಐ ರಘುಪ್ರಸಾದ್ ನೇತೃತ್ವದ ತಂಡ ಮೂವರನ್ನೂ ಗುರುವಾರ ಸತ್ಯಮಂಗಲಕ್ಕೆ ಕರೆದೊಯ್ಯಲಿದೆ. ಈಗಾಗಲೇ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿ, ಪ್ರಕರಣ ಬಗ್ಗೆ ಮಾಹಿತಿ ನೀಡಲಾಗಿದೆ.

ಪ್ರಕರಣದ ತನಿಖೆಗೆ ನೆರವು ನೀಡುವಂತೆಯೂ ಕೋರಲಾಗಿದೆ’ ಎಂದು ತಿಳಿದು ಬಂದಿದೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry