ಗೆಲುವಿನ ಕನಸಿಗೆ ಮೊದಲ ಪೆಟ್ಟು

7
ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯ

ಗೆಲುವಿನ ಕನಸಿಗೆ ಮೊದಲ ಪೆಟ್ಟು

Published:
Updated:
ಗೆಲುವಿನ ಕನಸಿಗೆ ಮೊದಲ ಪೆಟ್ಟು

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ವೈಟ್‌ ವಾಷ್‌ ತಪ್ಪಿಸಿಕೊಳ್ಳುವ ಆಸೆಯೊಂದಿಗೆ ಕಣಕ್ಕೆ ಇಳಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವೇ ಆಘಾತಕ್ಕೆ ಒಳಗಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಕೇವಲ 187 ರನ್‌ಗಳಿಗೆ ಪತನ ಕಂಡಿದೆ.

ಮೊದಲ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಆರು ರನ್‌ ಗಳಿಸಿದೆ. ಡೀನ್ ಎಲ್ಗರ್ ಮತ್ತು ನೈಟ್ ವಾಚ್‌ಮನ್‌ ಕಗಿಸೊ ರಬಾಡ ಕ್ರೀಸ್‌ನಲ್ಲಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಎದುರಾಳಿ ವೇಗಿಗಳ ದಾಳಿಗೆ ನಲುಗಿದ ವಿರಾಟ್ ಕೊಹ್ಲಿ ಬಳಗ ಸೋತಿತ್ತು. ಇಲ್ಲಿನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಇಲ್ಲಿಯ ವರೆಗೆ ಸೋಲು ಕಾಣದ ಭಾರತ ತಂಡ ಮೂರನೇ ಪಂದ್ಯದಲ್ಲಿ ಭರವಸೆಯೊಂದಿಗೆ ಬುಧವಾರ ಕಣಕ್ಕೆ ಇಳಿದಿತ್ತು. ಬೆಳಿಗ್ಗೆ ವಿರಾಟ್ ಕೊಹ್ಲಿ ಟಾಸ್‌ ಗೆದ್ದಾಗ ತಂಡದ ಆಸೆ ಗರಿಗೆದರಿತು. ಆದರೆ ಹಸಿರು ಹೊದ್ದಿದ್ದ ಪಿಚ್‌ನಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ನಾಲ್ಕನೇ ಓವರ್‌ನಲ್ಲೇ ಆಘಾತ ಕಂಡಿತು.

ಭರವಸೆಯ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್ ಬೌಲ್ಡ್ ಆಗಿ ಮರಳಿದಾಗ ತಂಡದ ಮೊತ್ತ ಕೇವಲ ಏಳು ರನ್ ಆಗಿತ್ತು. ಫಿಲಾಂಡರ್‌ ಅವರ ಒಳನುಗ್ಗಿದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಶ್ರಮಿಸಿದ ರಾಹುಲ್ ಎಡವಿದರು. ಚೆಂಡು ಬ್ಯಾಟಿನ ಒಳ ಅಂಚಿಗೆ ಸವರಿ ಹಿಂದಕ್ಕೆ ಚಿಮ್ಮಿತು. ವಿಕೆಟ್ ಕೀಪರ್‌ ಕ್ವಿಂಟನ್ ಡಿಕಾಕ್ ಎಡಕ್ಕೆ ಜಿಗಿದು ಅದನ್ನು ಸುಂದರವಾಗಿ ಹಿಡಿತಕ್ಕೆ ಪಡೆದುಕೊಂಡರು.

13 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್‌ ಕೂಡ ಔಟಾದರು. ರಬಾಡ ಎಸೆತವನ್ನು ತಪ್ಪಾಗಿ ಗ್ರಹಿಸಿದ ವಿಜಯ್‌ ಕವರ್‌ ಡ್ರೈವ್ ಮಾಡಲು ಶ್ರಮಿಸಿದರು. ಚೆಂಡು ಬ್ಯಾಟಿನ ಹೊರ ಅಂಚಿಗೆ ಮುತ್ತಿಕ್ಕಿ ವಿಕೆಟ್ ಕೀಪರ್ ಕೈ ಸೇರಿತು.

ಕೊಹ್ಲಿ–ಪೂಜಾರ ರಕ್ಷಣೆ

ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಬಲ ತುಂಬಿದರು. ಮೂರನೇ ವಿಕೆಟ್‌ಗೆ 84 ರನ್‌ ಸೇರಿಸಿ ಭರವಸೆ ಮೂಡಿಸಿದರು. ಕೊಹ್ಲಿ (54; 106 ಎ, 9 ಬೌಂ) ಅರ್ಧಶತಕ ಗಳಿಸಿ ಮಿಂಚಿದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ಲುಂಗಿ ಗಿಡಿ ಈ ಜೊತೆಯಾಟವನ್ನು ಮುರಿದು ಆತಿಥೇಯರಿಗೆ ಮೇಲುಗೈ ಗಳಿಸಿಕೊಟ್ಟರು.

ಸರಣಿಯಲ್ಲಿ ಇದೇ ಮೊದಲ ಬಾರಿ ಅವಕಾಶ ಪಡೆದುಕೊಂಡು ಅಜಿಂಕ್ಯ ರಹಾನೆ ಒಂದು ಕೇವಲ ಒಂಬತ್ತು ರನ್‌ ಗಳಿಸಿ ಔಟಾದರು. 179

ಎಸೆತಗಳಲ್ಲಿ 50 ರನ್‌ ಗಳಿಸಿದ ಚೇತೇಶ್ವರ ಪೂಜಾರ ಕೂಡ ರಹಾನೆ ಬೆನ್ನಲ್ಲೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

ಪಾರ್ಥಿವ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಬೇಗನೇ ಔಟಾದಾಗ ಭಾರಿ ಒತ್ತಡಕ್ಕೆ ಸಿಲುಕಿತು. ಬಾಲಂಗೋಚಿಗಳ ನೆರವಿನಿಂದ ಭುವನೇಶ್ವರ್ ಕುಮಾರ್‌ (30; 49 ಎ. 4 ಬೌಂ) ದಿಟ್ಟ ಹೋರಾಟ ನಡೆಸಿದ ಕಾರಣ ತಂಡ 200ರ ಸನಿಹ ತಲುಪಿತು.

ಭುವನೇಶ್ವರ್‌ ದಾಳಿ

ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ಗೆ ಭುವನೇಶ್ವರ್ ಕುಮಾರ್‌ ಆರಂಭದಲ್ಲೇ ಪೆಟ್ಟು ನೀಡಿದರು. ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಏಡನ್ ಮರ್ಕರಮ್ ವಿಕೆಟ್ ಕಬಳಿಸಿ ತಂಡದಲ್ಲಿ ಸಂಭ್ರಮ ಉಕ್ಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry