ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭಾರಿ ಸ್ಫೋಟಕ!

4
‘ಮಾಲ್‌ಖಾನಾ’ದಲ್ಲಿ ಸಂಗ್ರಹ: ತಕ್ಷಣವೇ ವಿಲೇವಾರಿ ಮಾಡಲು ರಿಜಿಸ್ಟ್ರಾರ್‌ ನಿರ್ದೇಶನ

ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭಾರಿ ಸ್ಫೋಟಕ!

Published:
Updated:
ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭಾರಿ ಸ್ಫೋಟಕ!

ಬೆಂಗಳೂರು: ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನ ‘ಮಾಲ್‌ಖಾನಾ’ದಲ್ಲಿರುವ (ಕೋರ್ಟ್‌ ಪ್ರಾಪರ್ಟಿ ರೂಮ್‌) ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಮೂರು ವರ್ಷಗಳಿಂದ ವಿಲೇವಾರಿ ಮಾಡದೆ ಸಂಗ್ರಹಿಸಿ ಇಟ್ಟಿರುವುದು ನ್ಯಾಯಾಂಗ ಅಧಿಕಾರಿಗಳಿಗೆ ಆತಂಕ ಹುಟ್ಟಿಸಿದೆ.

ಈ ಸ್ಪೋಟಕಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ರಿಜಿಸ್ಟ್ರಾರ್‌ ಕೆ.ಎಂ.ರಾಧಾಕೃಷ್ಣ ಬುಧವಾರ ತಮ್ಮ ಸಿಬ್ಬಂದಿಗೆ ಮೌಖಿಕ ನಿರ್ದೇಶನ ನೀಡಿದ್ದಾರೆ.

ಸಿಟಿ ಸಿವಿಲ್‌ ಕೋರ್ಟ್‌ನ ನೆಲಮಾಳಿಗೆಯ ‘ಮಾಲ್‌ಖಾನಾ’ದಲ್ಲಿ 10 ಕೆ.ಜಿ.ಗೂ ಹೆಚ್ಚು ಅಮೋನಿಯಂ ನೈಟ್ರೇಟ್‌, ಡಿಟೊನೇಟರ್ಸ್‌, ಜಿಲೆಟಿನ್‌ ಕಡ್ಡಿಗಳು, ಟೈಮರ್‌ಗಳು, ಡಿಜಿಟಲ್‌ ಸರ್ಕೀಟ್‌ಗಳು, ಲ್ಯಾಪ್‌ಟಾಪ್‌ಗಳು, ಜೆಲ್ ಮತ್ತು ಇಂಧನ ಸಂಗ್ರಹಿಸಿಡಲಾಗಿದೆ.

ಈ ಸಂಗತಿ ಮೂರು ದಿನಗಳ ಹಿಂದೆ ಬಾಂಬ್‌ ನಿಷ್ಕ್ರಿಯ ದಳದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಗಮನಕ್ಕೆ ಬಂದಿದೆ. ಅವರು ಇದನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅವರ ಗಮನಕ್ಕೆ ತಂದಿದ್ದಾರೆ. ನ್ಯಾಯಾಧೀಶರು ಕೂಡಲೇ ‘ಮಾಲ್‌ಖಾನಾ’ಗೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಏಕೆ ಇರಿಸಲಾಗಿದೆ ?: ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು 2015ರ ಜನವರಿಯಲ್ಲಿ ಸೈಯ್ಯದ್‌ ಇಸ್ಮಾಯಿಲ್‌ ಅಫಾಕ್‌ (34), ಸದ್ದಾಂ ಹುಸೇನ್ (35) ಮತ್ತು ಎಂಬಿಎ ವಿದ್ಯಾರ್ಥಿ ಅಬ್ದುಸ್‌ ಸುಬುರ್ (24) ಎಂಬುವರನ್ನು ಭಟ್ಕಳದಲ್ಲಿ ಬಂಧಿಸಿ, ಈ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳು ಇವನ್ನು ಬಾಂಬ್‌ ತಯಾರಿಸಲು ಪೂರೈಸುತ್ತಿದ್ದರು ಎಂದು ಆರೋಪಿಸಿದ್ದರು.

‘ಬಂಧಿತರು ಇಂಡಿಯನ್‌ ಮುಜಾಹಿದ್ದೀನ್ ಸಂಘಟನೆ ಸದಸ್ಯರು. ತಾಲಿಬಾನ್‌ ಹಾಗೂ ಐಎಸ್‌ಐಎಸ್‌ ಜೊತೆಗೂ ಸಂಪರ್ಕ ಹೊಂದಿದ್ದಾರೆ. ದೇಶದ ವಿವಿಧೆಡೆ ನಡೆದ ಸ್ಫೋಟ ಪ್ರಕರಣಗಳಲ್ಲೂ ಬೇಕಾದವರಾಗಿದ್ದಾರೆ. ಇವರ ಚಟುವಟಿಕೆಗಳಿಗೆ ಸುಲ್ತಾನ್‌ ಅಹಮದ್‌ ಅರಮಾರ್ ಎಂಬುವನು ಸೂತ್ರಧಾರನಾಗಿ ಕೆಲಸ ಮಾಡುತ್ತಿರುವ ಶಂಕೆಯಿದೆ’ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಸಿಟಿ ಕ್ರೈಂ ಬ್ರಾಂಚ್‌ (ಸಿಸಿಬಿ) ಹೆಗಲಿಗೆ ವಹಿಸಲಾಗಿದೆ. ಈ ಕುರಿತ ಪ್ರತಿಕ್ರಿಯೆಗೆ  ‘ಪ್ರಜಾವಾಣಿ’ ರಾಧಾಕೃಷ್ಣ ಅವರನ್ನು ಸಂಪರ್ಕಿಸಿದಾಗ, ‘ಮಾಲ್‌ಖಾನಾದಲ್ಲಿ ಸ್ಫೋಟಕ ಇರುವುದು ನಿಜ. ಆದರೆ, ಇವು ಅಪಾಯಕಾರಿ ಎಂಬ ಅಂಶ ಗಮನಕ್ಕೆ ಬಂದಿರಲಿಲ್ಲ. ಎನ್‌ಐಎ ಕೋರ್ಟ್‌ ನ್ಯಾಯಾಧೀಶರಿಗೆ  ಪ್ರಾಸಿಕ್ಯೂಟರ್ ಅರ್ಜಿ ಸಲ್ಲಿಸಿದ್ದಾರೆ. ಕೂಡಲೇ ಇವುಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಲಾಗಿದೆ’ ಎಂದರು.

ಇಡೀ ಕಟ್ಟಡವೇ ನಾಶವಾಗಬಲ್ಲದು...!

‘ಮಾಲ್‌ಖಾನದಲ್ಲಿರುವ ಸ್ಫೋಟಕಳಿಗೆ ಬೆಂಕಿ ತಗುಲಿ ಸ್ಫೋಟಿಸಿದರೆ ಸಿಟಿ ಸಿವಿಲ್ ಕೋರ್ಟ್‌ ಕಟ್ಟಡವೇ ಸಂಪೂರ್ಣ ನಾಶವಾಗಬಲ್ಲದು’ ಎಂಬುದು ತಜ್ಞರ ಅಭಿಪ್ರಾಯ.

ಅಮೆರಿಕದಲ್ಲಿ ಬಾಂಬ್‌ ನಿಷ್ಕ್ರಿಯ ತರಬೇತಿ ಪಡೆದಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಇದು ನಿರ್ಲಕ್ಷ್ಯದ ಪರಮಾವಧಿ. ಒಂದು ವೇಳೆ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry