ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದ್ದ ಮರಗಳೆದ್ದು ಕತೆ ಹೇಳುತ್ತಿವೆ...

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಎರಡು ಮೂರು ತಿಂಗಳ ಹಿಂದೆ ಸುರಿದ ಮಳೆ ಬೆಂಗಳೂರನ್ನು, ಬೆಂಗಳೂರಿಗರನ್ನು ಸಾಕಷ್ಟು ಹೈರಾಣ ಮಾಡಿತ್ತು. ಮರಗಳು ನೆಲಕ್ಕುರುಳಿದ್ದವು. ಲಾಲ್‌ಬಾಗ್‌ನಲ್ಲಿಯೂ 200ರಿಂದ 280 ವರ್ಷ ಹಳೆಯದಾದ ಕೆಲವು ಮರಗಳು ಧರಾಶಾಹಿಯಾಗಿದ್ದವು. ಹಾಗೆ ಬಿದ್ದ ಮರಗಳನ್ನು ಕಲೆಗೆ ಬಳಸಿಕೊಳ್ಳುವ ಅಪರೂಪದ ಚಿಂತನೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ತೋಟಗಾರಿಕಾ ಇಲಾಖೆಗೆ ಬಂದಿತ್ತು. ಈ ಚಿಂತನೆಗಳು ಈಗ ಮೂರ್ತರೂಪ ಪಡೆಯುತ್ತಿವೆ.

ನಿಜ, ಲಾಲ್‌ಬಾಗ್‌ನಲ್ಲಿ ನಡೆದಿರುವ ‘ರಾಷ್ಟ್ರೀಯ ಸಮಕಾಲೀನ ಮರದ ಕೆತ್ತನೆ ಕಲಾ ಶಿಬಿರದಲ್ಲಿ ಒಂದೊಂದು ಮರದ ಬೊಡ್ಡೆಗಳೂ ಕಲಾತ್ಮಕ ಕತೆಯನ್ನು ಹೇಳಲು ಸಜ್ಜಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 60 ಮಂದಿ ಶಿಲ್ಪಕಲಾವಿದರು ಒಂದೆಡೆ ಸೇರಿ ತಮ್ಮ ಕಲ್ಪನೆಗೆ ಕಲೆಯ ರೂಪ ನೀಡುತ್ತಿದ್ದಾರೆ. ಜನವರಿ 17ರಿಂದ ಪ್ರಾರಂಭವಾಗಿರುವ ಶಿಬಿರ ಇದೇ 27ಕ್ಕೆ ಮುಕ್ತಾಯಗೊಳ್ಳಲಿದೆ. ಈ ಕಾಷ್ಠಶಿಲ್ಪಗಳು ಅಂದು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೆ, ಉದ್ದೇಶಿತ ‘ಮುಕ್ತ ವಸ್ತು ಪ್ರದರ್ಶನಾಲಯ’ದಲ್ಲಿ ಇವು ಶಾಶ್ವತ ಸ್ಥಾನ ಪಡೆಯಲಿವೆ.

‘ಜಗತ್ತಿನಾದ್ಯಂತ ಪರಿಸರದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೂ ನಮ್ಮಲ್ಲಿ ಸಣ್ಣ ಅಸಡ್ಡೆ ಇದ್ದೇ ಇದೆ. ನಮ್ಮ ಸುತ್ತಮುತ್ತಲಿನ ಪಕ್ಷಿ, ಸಸ್ಯ, ಮರ, ಪ್ರಾಣಿಗಳು ಯಾವುದರ ಬಗ್ಗೆಯೂ ನಮಗೆ ಆಸಕ್ತಿ ಇಲ್ಲ. ಪರಿಸರದ ಉಳಿವಿಗಾಗಿ ಜನರಲ್ಲಿ ಕಲೆಯ ಮೂಲಕ ಜಾಗೃತಿ ಮೂಡಿಸುವುದು ಈ ಶಿಬಿರ ಉದ್ದೇಶ. ’ ಎನ್ನುತ್ತಾರೆ ಶಿಬಿರದ ನಿರ್ದೇಶಕ ಶಿವಪ್ರಸಾದ್‌.

‘ಶಿಬಿರಕ್ಕಾಗಿಯೇ ಯಾವ ಮರವನ್ನೂ ಇಲ್ಲಿ ಕಡಿಯಲಾಗಿಲ್ಲ. 2–3 ತಿಂಗಳ ಹಿಂದೆ ಸುರಿದ ಮಳೆಗಾಳಿಗೆ ಬಿದ್ದ ನೀಲಗಿರಿ, ಮಾವು ಮುಂತಾದ ಮರಗಳನ್ನೇ ಬಳಸಲಾಗುತ್ತಿದೆ. ಮೊದಲು ಕಬ್ಬನ್‌ ಪಾರ್ಕ್‌ನಲ್ಲಿ ಮಾಡಿದ ಪ್ರಯೋಗ ಯಶಸ್ವಿಯಾಗಿರುವ ಕಾರಣ ಇಲ್ಲಿಯೂ ಮುಂದುವರೆಸುವ ಯೋಜನೆ ರೂಪಿಸಲಾಗಿದೆ’ ಎಂದು ಅವರು ವಿವರಿಸುತ್ತಾರೆ.

ರೇಷ್ಮೆ ಕೃಷಿಯ ಅಭಿವೃದ್ಧಿ, ಒಂದು ಕಾಲದಲ್ಲಿ ನಮ್ಮ ದೇಶದಿಂದ ಅತಿ ಹೆಚ್ಚು ರಫ್ತಾಗುತ್ತಿದ್ದ ಮಸಾಲೆ ಪದಾರ್ಥಗಳ ಬಗ್ಗೆ ಜನರ ಗಮನ ಸೆಳೆಯುವಂತಹ ಕಲಾಕೃತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಶಿಬಿರದಲ್ಲಿ ಬಳಸಲಾಗಿರುವ ಮರಗಳ 2–3 ಶತಮಾನಗಳ ಇತಿಹಾಸವನ್ನೂ ಈ ಕಲಾಕೃತಿಗಳು ಹೇಳುತ್ತವೆ. ಅಂದರೆ ಪಕ್ಷಿ ಸಂಕುಲಕ್ಕೆ, ಜನರಿಗೆ, ಕೀಟ, ಪ್ರಾಣಿಗಳಿಗೆ ಆಸರೆ ನೀಡಿದ ಇತಿಹಾಸವನ್ನು ಈ ಮರಗಳೇ ಹೇಳುತ್ತವೆ. ಆ ಪರಿಕಲ್ಪನೆಯಲ್ಲಿಯೇ ಕಲಾಕೃತಿಗಳನ್ನು ರೂಪಿಸಲಾಗುತ್ತಿದೆ.

ಒಂದು ದೊಡ್ಡ ಹಕ್ಕಿ ಗೂಡಿನಂತಹ ಕಲಾಕೃತಿ. ಅದರಲ್ಲೇ ಹಲವಾರು ಪ್ರಾಣಿ ಮತ್ತು ಪಕ್ಷಿಗಳನ್ನು ಕೆತ್ತುವುದು. ಇನ್ನೊಂದು ದಿಮ್ಮಿಯ ಮುಂಭಾಗದಲ್ಲಿ ಮ್ಯಾಮತ್‌ನ್ನೂ (ಆನೆ), ಹಿಂಭಾಗದಲ್ಲಿ ಆಕ್ಟೋಪಸ್‌ನ್ನೂ ಮೂಡಿಸುವುದು. ಕಲಾಕೃತಿ ಒಂದೇ, ಕತೆ ವಿಭಿನ್ನ. ಮೊಸಳೆ, ಆನೆ, ವಿವಿಧ ಪಕ್ಷಿಗಳು, ಗಿಡ, ಬಳ್ಳಿ, ಊಸರವಳ್ಳಿ, ಅಧ್ಯಾತ್ಮದಲ್ಲಿ ಪ್ರಸ್ತಾಪವಾಗುವ ಏಳು ಚಕ್ರಗಳು, ನೀರಿನಲ್ಲಿ ಈಜುತ್ತಿರುವ ಎರಡು ಎಮ್ಮೆಗಳು, ನವಿಲು, ಪಕ್ಷಿಗಳ ಜೀವನಚಕ್ರವನ್ನು ಸಾರುವ ಕೆತ್ತನೆ, ಕಮಲದೊಂದಿಗೆ ಇರುವ ಬುದ್ಧ... ಹೀಗೆ ಕಲೆ ಮತ್ತು ಕತೆ ಒಟ್ಟೊಟ್ಟಾಗಿ ಸಾಗುತ್ತವೆ.

‘ಕಲಾಕೃತಿಗಳು ಅಂತಿಮ ರೂಪ ಪಡೆದ ಮೇಲೆ ರಾಸಾಯನಿಕವಾಗಿ ಕೆಲವು ಸಂಸ್ಕರಣೆ ಮಾಡಲಾಗುತ್ತದೆ. ಮುಕ್ತ ವಾತಾವರಣದಲ್ಲಿ ಮಳೆ, ಗಾಳಿಗೆ ಸದಾ ತೆರೆದುಕೊಂಡೇ ಇರುವ ಕಾರಣ ಕಲಾಕೃತಿಗಳಿಗೆ ಈ ಸಂಸ್ಕರಣೆ ಅತ್ಯಗತ್ಯ. ಕನಿಷ್ಠ 4–5 ವರ್ಷ ಹೀಗೆ ಮಾಡುತ್ತಾ ಬಂದರೆ ಕಲಾಕೃತಿಗಳು ದೀರ್ಘಕಾಲ ಬಾಳ್ವಿಕೆ ಬರುತ್ತವೆ’ ಎಂದು ಮಾಹಿತಿ ನೀಡುತ್ತಾರೆ ಶಿವಪ್ರಸಾದ್‌.

ಶಿಬಿರದಲ್ಲಿ ಮುಂಬೈ, ಅಹಮದಾಬಾದ್‌, ಬರೋಡಾ, ಭುವನೇಶ್ವರ, ಉತ್ತರಾಖಂಡದ ಕಲಾವಿದರಲ್ಲದೆ, ನಮ್ಮ ರಾಜ್ಯದ ಹೆಚ್ಚಿನ ಸಂಖ್ಯೆಯ ಕಲಾವಿದರು ಭಾಗವಹಿಸಿದ್ದಾರೆ. ನಾಲ್ವರು ಮುಖ್ಯ ಕಲಾವಿದೆಯರೂ ಇದ್ದಾರೆ.  

‘ದೇಶದ ನಾನಾ ಭಾಗಗಳಿಂದ ಕಲಾವಿದರು ಬಂದಿದ್ದಾರೆ. ಅವರ ಕೆಲಸದ ರೀತಿನೀತಿ, ಅವರ ಆಲೋಚನೆಗಳ ವಿನಿಮಯವೂ ಶಿಬಿರದಲ್ಲಿ ನಡೆಯುತ್ತದೆ. ಇದು ನಮ್ಮ ಬೆಳವಣಿಗೆಯಲ್ಲಿ ಸಹಕಾರಿಯಾಗಲಿದೆ. ಈ ತರಹದ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು’ ಎಂಬುದು ಶಿಬಿರಾರ್ಥಿ ಅಮೂಲ್ಯ ಅವರ ಅಭಿಪ್ರಾಯ.

‘ತುಂಬ ಚೆನ್ನಾಗಿ ಕಲಾಕೃತಿಗಳನ್ನು ಮಾಡುತ್ತಿದ್ದಾರೆ. ಇದೊಂದು ಒಳ್ಳೆಯ ಪ್ರಯೋಗ ಕೂಡ. ಬಿದ್ದ ಮರಗಳನ್ನು ಉತ್ತಮ ಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಮಾದರಿ’ ಎನ್ನುತ್ತಾರೆ ಲಾಲ್‌ಬಾಗ್‌ ವೀಕ್ಷಣೆಗಾಗಿ ಬಂದ ಹರಿಣಿ ಮತ್ತು ಗೋಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT