ಬೆಳಗಾವಿ: ಪದ್ಮಾವತ್‌ ಪ್ರದರ್ಶನ ವೇಳೆ ಪೆಟ್ರೋಲ್‌ ಬಾಂಬ್‌ ಸ್ಫೋಟ

7

ಬೆಳಗಾವಿ: ಪದ್ಮಾವತ್‌ ಪ್ರದರ್ಶನ ವೇಳೆ ಪೆಟ್ರೋಲ್‌ ಬಾಂಬ್‌ ಸ್ಫೋಟ

Published:
Updated:
ಬೆಳಗಾವಿ: ಪದ್ಮಾವತ್‌ ಪ್ರದರ್ಶನ ವೇಳೆ ಪೆಟ್ರೋಲ್‌ ಬಾಂಬ್‌ ಸ್ಫೋಟ

ಬೆಳಗಾವಿ: ‘ಪದ್ಮಾವತ್‌’ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆ ಇಲ್ಲಿನ ಪ್ರಕಾಶ್‌ ಥಿಯೇಟರ್‌ ಆವರಣದಲ್ಲಿ ಗುರುವಾರ ರಾತ್ರಿ ಪೆಟ್ರೋಲ್‌ ಬಾಂಬ್‌ ಸ್ಫೋಟದಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದ್ವಿಚಕ್ರವಾಹನದಲ್ಲಿ ಬಂದ ನಾಲ್ಕೈದು ಮಂದಿ ಕಿಡಿಗೇಡಿಗಳು ಪೆಟ್ರೋಲ್‌ಬಾಂಬ್‌ ಎಸೆದು, ಪಟಾಕಿ ಸಿಡಿಸಿ ಪರಾರಿಯಾಗಿದ್ದಾರೆ. ಶಬ್ದ ಕೇಳಿದ ಬೆಚ್ಚಿದ ಚಿತ್ರಮಂದಿರದೊಳಗಿದ್ದ ಪ್ರೇಕ್ಷಕರು ಹೊರಗೆ ಓಡಿಬಂದರು. ಇದರಿಂದ ನೂಕುನುಗ್ಗಲು ಉಂಟಾಗಿತ್ತು. ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಕ್ಕಪಕ್ಕದ ಅಂಗಡಿಗಳವರು ಕೂಡ ಭಯಭೀತರಾಗಿದ್ದರು.

‘ಪದ್ಮಾವತ್‌ ಚಲನಚಿತ್ರದ ಪ್ರದರ್ಶನ ವಿರೋಧಿಸಿ ಈ ಕೃತ್ಯ ನಡೆಸಿರಬಹುದು. ದ್ವಿಚಕ್ರವಾಹನದಲ್ಲಿ ಬಂದ ಕಿಡಿಗೇಡಿಗಳು ಬಾಟಲಿಯೊಂದಿಗೆ ಹೆಚ್ಚು ಶಬ್ದ ಬರುವ ಪಟಾಕಿ ಹಚ್ಚಿ ಎಸೆದು ಹೋಗಿದ್ದಾರೆ. ಇದರಿಂದ ಸ್ಫೋಟದ ರೀತಿಯ ಶಬ್ದ ಕೇಳಿಬಂದಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಭಯದಿಂದ ಹೊರಗೆ ಬಂದಿದ್ದ ಪ್ರೇಕ್ಷಕರಿಗೆ ವಿಷಯ ಮನವರಿಕೆ ಮಾಡಿಕೊಡಲಾಯಿತು. ನಂತರ ಪ್ರದರ್ಶನ ಮುಂದುವರಿಯಿತು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಖಡೇಬಜಾರ್‌ ಇನ್‌ಸ್ಪೆಕ್ಟರ್‌ ಐ.ಎಚ್‌. ಸಾತೇನಹಳ್ಳಿ ತಿಳಿಸಿದರು.

‘ಕಿಡಿಗೇಡಿಗಳು ಸೀಮೆಎಣ್ಣೆ ತುಂಬಿದ ಬಾಟಲಿ ಎಸೆದು ಹೋಗಿದ್ದಾರೆ. ಸ್ಫೋಟದಿಂದ ಯಾವುದೇ ಹಾನಿಯಾಗಿಲ್ಲ. ಚಿತ್ರದ ಪ್ರದರ್ಶನ  ಮುಂದುವರಿಯಿತು. ಸಾರ್ವಜನಿಕರು ಅತಂಕಗೊಳ್ಳುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry