28 ರಿಂದ ಪಲ್ಸ್ ಪೋಲಿಯೊ ಅಭಿಯಾನ

7

28 ರಿಂದ ಪಲ್ಸ್ ಪೋಲಿಯೊ ಅಭಿಯಾನ

Published:
Updated:
28 ರಿಂದ ಪಲ್ಸ್ ಪೋಲಿಯೊ ಅಭಿಯಾನ

ಕಲಬುರ್ಗಿ: ‘ಜಿಲ್ಲೆಯಾದ್ಯಂತ ಜ.28 ರಿಂದ ಮೊದಲ ಸುತ್ತಿನ ಪಲ್ಸ್‌ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ 2.87 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 28ರಂದು ಪೋಲಿಯೊ ಲಸಿಕೆ ಹಾಕಲು 1,485 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜ.29, 30 ಮತ್ತು 31ರಂದು 1,485 ತಂಡಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿವೆ. 130 ಲಸಿಕಾ ತಂಡಗಳು, 28 ಸಂಚಾರಿ ತಂಡಗಳು ಸೇರಿ 1,643 ತಂಡಗಳು ಕಾರ್ಯ ನಿರ್ವಹಿಸಲಿವೆ. 329 ಮೇಲ್ವಿಚಾರಕರು ಹಾಗೂ 2,970 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

ಸರ್ವೆಲೆನ್ಸ್‌ ಅಧಿಕಾರಿ ಡಾ. ಅನಿಲ್‌ಕುಮಾರ್ ತಾಳಿಕೋಟಿ ಮಾತನಾಡಿ, ‘ಜಿಲ್ಲೆಯ ಕೊಳಚೆ ಪ್ರದೇಶ ಹಾಗೂ ವಲಸೆ ಹೋಗುವ, ಕಟ್ಟಡ ಕಾರ್ಮಿಕರು, ಕಬ್ಬು ಕಟಾವು ಕಾರ್ಮಿಕರು, ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು ವಿಶೇಷ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ್ ಕೆ.ಪಾಟೀಲ, ಜಿಲ್ಲಾ ಲಸಿಕಾಧಿಕಾರಿ ಡಾ. ಎ.ಎಸ್.ರುದ್ರವಾಡಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ನಾಗಲೇಕರ್, ಡಾ. ಶರಣಬಸಪ್ಪ ಗಣಜಲಖೇಡ ಇದ್ದರು.

27, 28ರಂದು ಜಾನಪದ ಜಾತ್ರೆ

ಕಲಬುರ್ಗಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಜಿಲ್ಲೆಯ ಚಿತ್ತಾಪುರದ ಅಮರಾವತಿ ಮೈದಾನದಲ್ಲಿ ಜ.27 ಹಾಗೂ 28ರಂದು ‘ಜಾನಪದ ಜಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆ ವಹಿಸುವರು.

ಜಾನಪದ ಜಾತ್ರೆ ಅಂಗವಾಗಿ ಚಿತ್ತಾಪುರದ ಭುವನೇಶ್ವರಿ ವೃತ್ತದಿಂದ ಅಮರಾವತಿ ಮೈದಾನವರೆಗೆ ಕಲಾ ತಂಡಗಳ ಮೆರವಣಿಗೆ ಏರ್ಪಡಿಸಲಾಗಿದೆ. ಈ ಮೆರವಣಿಗೆಯಲ್ಲಿ ಜಗ್ಗಲಿಗೆ, ತಮಟೆ ವಾದನ, ವೀರಗಾಸೆ, ಸೋಮನ ಕುಣಿತ, ಹಗಲುವೇಷ, ಪೂಜಾ ಕುಣಿತ, ಲಂಬಾಣಿ ನೃತ್ಯ, ಚೌಡಕಿ ಪದ, ಹಲಗೆ ಮೇಳ, ಕರಡಿ ಮಜಲು, ಡೊಳ್ಳು ಕುಣಿತ, ಸಂಬಳ ವಾದನ, ಚಿಟ್ಟ ಹಲಗೆ, ಡೊಳ್ಳು ಕುಣಿತ, ಶಹನಾಯಿ, ಜೋಗುಳ ಹಾಡುಗಳು, ನಂದಿ ಕಂಬ, ಗೊಂಬೆ ಕುಣಿತ, ಪಟ ಕುಣಿತ, ಗೊರವರ ಕುಣಿತ, ನಗಾರಿ, ಜಾನಪದ ನೃತ್ಯ, ಕಂಸಾಳೆ, ನೀಲಗಾರರು, ಮಹಿಳಾ ಕರಗ, ಡೊಳ್ಳಿನ ಕರಗ, ಕೋಲಾಟ, ದಮಾಮಿ ನೃತ್ಯ, ಕೊರಗ ಗಜಮೇಳ, ಹೋಳಿ ನೃತ್ಯ, ಕೀಲುಕುದರೆ ಕಲಾ ತಂಡಗಳು ಭಾಗವಹಿಸಲಿವೆ.

30ರಂದು ಜಿಲ್ಲಾ ಮಟ್ಟದ ಯುವಜನ ಮೇಳ

ಕಲಬುರ್ಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಂಜಾರ ಯುವಕ ಸಂಘದ ಆಶ್ರಯದಲ್ಲಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜ.30ರಂದು ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಯುವಕರಿಗಾಗಿ ಭಾವಗೀತೆ, ಗೀಗಿಪದ, ಕೋಲಾಟ, ವೀರಗಾಸೆ, ರಂಗಗೀತೆ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಏಕ ಪಾತ್ರಾಭಿನಯ, ಚರ್ಮವಾದ್ಯ, ಜಾನಪದ ಗೀತೆ, ಭಜನೆ ಗೀತೆ, ಜನಪದ ನೃತ್ಯ ಸ್ಪರ್ಧೆಗಳನ್ನು ಹಾಗೂ ಯುವತಿಯರಿಗಾಗಿ ಭಾವಗೀತೆ, ಗೀಗಿಪದ, ಲಾವಣಿ, ಕೋಲಾಟ, ಜಾನಪದ ಗೀತೆ, ಜಾನಪದ ನೃತ್ಯ, ಭಜನೆ, ಏಕ ಪಾತ್ರಾಭಿನಯ, ಸೋಬಾನೆ ಪದ, ರಾಗಿ/ಜೋಳ ಬೀಸುವ ಪದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

15 ರಿಂದ 35 ವರ್ಷದೊಳಗಿನ ಎಲ್ಲಾ ಯುವಕ, ಯುವತಿ ಮಂಡಳಿಯವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ತರಬೇಕು. ಯುವಜನ ಮೇಳದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಜ.30ರಂದು ಬೆಳಿಗ್ಗೆ 10 ಗಂಟೆಗೆ ಚಿತ್ತಾಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು.

ಮಾಹಿತಿಗೆ ಪಿ.ಆರ್.ಪಾಂಡು, ಮೊ. 96324 13176 ಅಥವಾ ಕಚೇರಿ ದೂ.ಸಂ: 08472-268637 ಸಂಪರ್ಕಿಸಬಹುದು.

ವಿವಿಧ ಹುದ್ದೆ: ಅರ್ಜಿ ಆಹ್ವಾನ

ಕಲಬುರ್ಗಿ: ಭಾರತೀಯ ಅನಿಲ ನಿಗಮದ ಕರ್ನಾಟಕ ಶಾಖೆಯಲ್ಲಿ ಖಾಲಿಯಿರುವ 21 ಜೂನಿಯರ್ ಆಪರೇಟರ್‌ ಗ್ರೇಡ್‌-1 ಮತ್ತು 7 ಜೂನಿಯರ್ ಆಪರೇಟರ್ (ಏವಿಯೇಶನ್) ಗ್ರೇಡ್-1 ಹಾಗೂ ಜೂನಿಯರ್ ಚಾರ್ಜ್‌ಮನ್‌ ಗ್ರೇಡ್-III ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು 18 ರಿಂದ 26 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್‌ನ ವೆಬ್‌ಸೈಟ್‌ http://www.iocl.com/peoplecareers/job.aspx ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂ.ಸಂ: 08472-274846 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry