ಮಡಿಕೇರಿಗೆ ಬಂತು ‘ಇಂದಿರಾ ಕ್ಯಾಂಟೀನ್’

7
ನೂತನ ಖಾಸಗಿ ಬಸ್‌ ನಿಲ್ದಾಣ ಆವರಣದಲ್ಲಿ ನಿರ್ಮಾಣ

ಮಡಿಕೇರಿಗೆ ಬಂತು ‘ಇಂದಿರಾ ಕ್ಯಾಂಟೀನ್’

Published:
Updated:
ಮಡಿಕೇರಿಗೆ ಬಂತು ‘ಇಂದಿರಾ ಕ್ಯಾಂಟೀನ್’

ಮಡಿಕೇರಿ: ಅಂತೂ ಇಂತೂ ಮಂಜಿನ ನಗರಿ ಮಡಿಕೇರಿಗೆ ಇಂದಿರಾ ಕ್ಯಾಂಟೀನ್ ಭಾಗ್ಯ ಸಿಕ್ಕಿದೆ.

ಇಷ್ಟು ದಿವಸ ಜಾಗದ ಸಮಸ್ಯೆಯಿಂದ ಕ್ಯಾಂಟೀನ್‌ ನಿರ್ಮಾಣ ಕಾಮಾಗಾರಿ ವಿಳಂಬವಾಗಿತ್ತು. ಇದೀಗ ರೇಸ್‌ ಕೋರ್ಸ್‌ ರಸ್ತೆಯಲ್ಲಿ ನಿರ್ಮಾಣ ಆಗುತ್ತಿರುವ ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲೇ ಕ್ಯಾಂಟೀನ್‌ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಹಾಪ್‌ಕಾಮ್ಸ್‌ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ಈ ಹಿಂದೆ ಮನವಿ ಸಲ್ಲಿಸಿದ್ದರು. ಆದರೆ, ಹಾಪ್‌ಕಾಮ್ಸ್‌ ಆಡಳಿತ ಮಂಡಳಿ ಸದಸ್ಯರು ಜಾಗ ನೀಡಲು ಸಾಧ್ಯವಿಲ್ಲ. ಬಲವಂತದಿಂದ ಜಾಗ ಪಡೆದರೆ, ಕೋರ್ಟ್‌ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದರು. ಇದೀಗ ಪರ್ಯಾಯ ಸ್ಥಳದಲ್ಲಿ ಕ್ಯಾಂಟೀನ್‌ ನಿರ್ಮಾಣ ಆಗುತ್ತಿದೆ.

ಪ್ರಿಕಾಸ್ಟ್ ಕನ್‌ಸ್ಟ್ರಕ್ಷನ್ ತಂತ್ರಜ್ಞಾನ ಬಳಸಿ ಬೇರೆಡೆ ಅಗತ್ಯ ನಿರ್ಮಾಣ ಸಾಮಗ್ರಿ ಸಿದ್ಧಪಡಿಸಿ ತಂದು ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ನಾಲ್ಕು ದಿನಗಳಲ್ಲೇ ಕಾಮಗಾರಿಯು ಶೇ 50ರಷ್ಟು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಶುಚಿ– ರುಚಿಯಾದ ಊಟ– ತಿಂಡಿ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

ಗೋಡೆಗಳೂ ಆಕರ್ಷಣೀಯವಾಗಿ ಕಾಣಿಸಲಿವೆ. ವೈಜ್ಞಾನಿಕ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಒಳಾಂಗಣ ಮತ್ತು ಹೊರಾಂಗಣಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಆರಂಭಿಸಲಾಗುವುದು. ಫೆಬ್ರುವರಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕ್ಯಾಂಟೀನ್‌ ಹೇಗೆ ಇರಲಿದೆ?: ಪ್ರತಿ ಕ್ಯಾಂಟೀನ್‌ ನಿರ್ಮಾಣಕ್ಕೆ ₹ 32 ಲಕ್ಷ ವೆಚ್ಚವಾಗಲಿದೆ. ಕ್ಯಾಂಟೀನ್‌ನಲ್ಲಿ ಎರಡು ಶೌಚಾಲಯ, ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇರಲಿದ್ದು, ಒಂದು ಅಡುಗೆ ಮನೆ ಇರಲಿದೆ. ಕ್ಯಾಂಟೀನ್‌ ನಿರ್ವಹಣೆ ಹಾಗೂ ಅಡುಗೆ ತಯಾರಿಕೆಯನ್ನು ಸ್ವಯಂ ಸೇವಾ ಸಂಘಗಳಿಗೆ ನೀಡಲಾಗುವುದು. ಅದಕ್ಕೆ ಟೆಂಡರ್‌ ಸಹ ಆಹ್ವಾನಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಬೆಳಿಗ್ಗೆ ಏನೇನು?: ಇಡ್ಲಿ, ಸಾಂಬಾರ್‌, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರಾ ಉಪ್ಪಿಟ್ಟು, ಚಿತ್ರಾನ್ನ, ಖಾರಾ ಪೊಂಗಲ್ (ಪ್ರತಿ ದಿನ ಇವುಗಳಲ್ಲಿ ಯಾವುದಾದರೂ ಒಂದು).

ಮಧ್ಯಾಹ್ನದ ಊಟಕ್ಕೆ: ಅನ್ನ, ಸಾಂಬಾರು, ಉಪ್ಪಿನಕಾಯಿ ಹಾಗೂ ಹಪ್ಪಳ.

ರಾತ್ರಿಯ ಊಟ: ಅನ್ನ ಸಾಂಬಾರು, ಉಪ್ಪಿನ ಕಾಯಿ, ಹಪ್ಪಳ.

ಭಾನುವಾರದ ವಿಶೇಷ: ಬಿಸಿಬೇಳೆ ಬಾತ್, ತರಕಾರಿ ಅನ್ನ, ಪುಳಿಯೋಗರೆ, ಜೀರಿಗೆ ಅನ್ನ (ಇವುಗಳಲ್ಲಿ ಯಾವು ದಾದರೂ ಒಂದು).

‘ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಿಗ್ಗೆಯ ತಿಂಡಿಗೆ ₹ 5, ಊಟಕ್ಕೆ ₹ 10 ನಿಗದಿ ಮಾಡಲಾಗಿದೆ. ನಗರದ ಶ್ರಮಿಕರಿಗೆ ಈ ಕ್ಯಾಂಟೀನ್‌ನಿಂದ ಅನುಕೂಲವಾಗಲಿದ್ದು, ಇದು ಸೂಕ್ತ ಸ್ಥಳವೂ ಆಗಿದೆ’ ಎಂದು ಕಾಂಗ್ರೆಸ್‌ ನಗರದ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್‌ ರಜಾಕ್‌ ತಿಳಿಸಿದ್ದಾರೆ.

**

ಬೆಳಿಗ್ಗೆಯ ತಿಂಡಿಗೆ ₨ 5

ಮಧ್ಯಾಹ್ನದ ಊಟಕ್ಕೆ ₨ 10

₨ 32 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌ ನಿರ್ಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry