ಸಂವಿಧಾನ ನಂಬದವರಿಗೆ ಜನತಂತ್ರದಲ್ಲಿ ಜಾಗವಿಲ್ಲ

7

ಸಂವಿಧಾನ ನಂಬದವರಿಗೆ ಜನತಂತ್ರದಲ್ಲಿ ಜಾಗವಿಲ್ಲ

Published:
Updated:
ಸಂವಿಧಾನ ನಂಬದವರಿಗೆ ಜನತಂತ್ರದಲ್ಲಿ ಜಾಗವಿಲ್ಲ

ಬೆಂಗಳೂರು: ‘ಸಂವಿಧಾನದಲ್ಲಿ ನಂಬಿಕೆ ಇಲ್ಲದವರಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಈ ಬಗ್ಗೆ ಭಿನ್ನಾಭಿಪ್ರಾಯ ಇರುವವರು ಸಂಸದೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಣರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಆಕಾಶವಾಣಿಯಲ್ಲಿ ಮಾತನಾಡಿದ ಅವರು, ‘ಈ ರೀತಿಯ ವರ್ತನೆ ಸಂವಿಧಾನಕ್ಕೆ ಮಾಡುವ ಅಪಚಾರ‘ ಎಂದು ಅಭಿಪ್ರಾಯಪಟ್ಟರು. ಆದರೆ, ಅವರು ಎಲ್ಲಿಯೂ ಅನಂತ ಕುಮಾರ ಹೆಗಡೆ ಹೆಸರು ಪ್ರಸ್ತಾಪಿಸಲಿಲ್ಲ.

‘ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಬದಲಾವಣೆಯ ಕೂಗು ಈಚೆಗೆ ಕೇಳಿ ಬರುತ್ತಿದೆ. ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು. ನಾನೂ ಅದಕ್ಕೆ ದನಿಗೂಡಿಸುತ್ತೇನೆ. ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲೊಂದು. ಸಂವಿಧಾನವೇ ನನ್ನ ಧರ್ಮ ಅದರ ಆಶಯ ಸಾಕಾರಗೊಳಿಸುವುದೇ ನನ್ನ ರಾಜ ಧರ್ಮ’ ಎಂದರು.

ರಾಜಕೀಯ ಹಾಗೂ ಆರ್ಥಿಕ ಸಾರ್ವಭೌಮತ್ವ ಸಾಧಿಸುವ ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕು. ಜಾತಿ ವ್ಯವಸ್ಥೆ, ಮೇಲು- ಕೀಳು ತಾರತಮ್ಯದಿಂದಾಗಿ ಛಿದ್ರವಾಗಿರುವ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆ ಸ್ಥಾಪಿಸಬೇಕಾಗಿದೆ ಎಂದರು.

‘ಕಟ್ಟಕಡೆಯ ಜನರಿಗೂ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗ ಭಾಗ್ಯವನ್ನು ನಮ್ಮ ಸರ್ಕಾರ ನೀಡಿದೆ. ಎಲ್ಲರೂ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣ ಕಲ್ಪಿಸಿದೆ. ಕೃಷಿ ಸಂಪತ್ತು ಹೆಚ್ಚಿದೆ. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ದೊರೆಯುತ್ತಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮನಾಗಿ ಹಂಚಿಕೆಯಾಗುವಂತೆ ನೀತಿ ರೂಪಿಸಲಾಗಿದೆ. ಸಮೃದ್ಧ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ನವ ಕರ್ನಾಟಕ ನಿರ್ಮಾಣವಾಗುತ್ತಿದ್ದು, ಇದನ್ನು ಕರ್ನಾಟಕ ಅಭಿವೃದ್ಧಿ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ’ ಎಂದರು.

‘ಧಾರ್ಮಿಕ ರಾಷ್ಟ್ರೀಯತೆ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿ ಪ್ರತಿಪಾದಿಸುವ ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕ. ವೈಚಾರಿಕ ಮತ್ತು ಸಾಮಾಜಿಕ ಸಹಿಷ್ಣುತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಇತ್ತೀಚೆಗೆ ಅಸಹಿಷ್ಣುತೆ ಎನ್ನುವುದು ರಾಷ್ಟ್ರೀಯ ಚರ್ಚೆಗೆ ವಸ್ತುವಾಗಿದೆ. ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತುವವರ ದಮನವೂ ನಡೆಯುತ್ತಿದೆ. ಅವರನ್ನು ನಿಂದಿಸಿ, ಹಂಗಿಸಿ ನೈತಿಕವಾಗಿ ಕುಸಿದು ಹೋಗುವಂತೆ ಮಾಡುವ ಪ್ರಯತ್ನವೂ ಮುಂದುವರೆಯುತ್ತಿರುವುದು ಒಳ್ಳೆಯ ನಡೆ ಅಲ್ಲ’ ಎಂದೂ ಸಿದ್ದರಾಮಯ್ಯ ಹೇಳಿದರು.

‘ಮೋದಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವಷ್ಟು ಸಣ್ಣತನ ನಮ್ಮದಲ್ಲ’

‘ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಷ್ಟು ಸಣ್ಣತನ ನಮ್ಮದಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ರಾಜಕೀಯವಾಗಿ ವಿರೋಧಿಗಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ಆದರೆ, ಸುಳ್ಳುಗಳಿಗೆ ಗೌರವ ನೀಡುವುದಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಜರಾತ್‌ನವರು. ನಾನು ಕನ್ನಡ ನಾಡಿನ ಮಣ್ಣಿನ ಮಗ. ಶಾ ಕರ್ನಾಟಕಕ್ಕೆ ಬಂದು ನನ್ನನ್ನು ನಿಂದಿಸಿದರೆ ರಾಜ್ಯದ ಜನ ಸುಮ್ಮನೆ ಇರುವರೇ? ಅವರು ನಿಂದಿಸಿದಷ್ಟೂ ನನಗೆ ಒಳ್ಳೆಯದು. ಅವರು ಸತ್ಯ ಹೇಳಿದರೆ ಪರವಾಗಿಲ್ಲ, ಬರೇ ಸುಳ್ಳು ಹೇಳುತ್ತಾರೆ’ ಎಂದು ಟೀಕಿಸಿದರು.

‘ಪದ್ಮಾವತ್ ಚಿತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗಲಾಟೆಗಳಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಅಲ್ಲಿ ಸರ್ಕಾರ ಮೂಕಪ್ರೇಕ್ಷಕ‌ವಾಗಿದೆ’ ಎಂದರು.

ಮತ್ತೆ ಜನಾಶೀರ್ವಾದ

‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಹೀಗಾಗಿ, ಜನ ಮತ್ತೊಮ್ಮೆ ಆಶೀರ್ವಾದ ಮಾಡುವ ವಿಶ್ವಾಸವಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ನಾವು ನುಡಿದಂತೆ ನಡೆದಿದ್ದೇವೆ. ಈ ಕಾರಣಕ್ಕೆ ಸಮೀಕ್ಷೆಗಳಲ್ಲಿ ಜನ ತೃಪ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಅವರೂ ಅಭಿಪ್ರಾಯಪಟ್ಟರು.

ಹೋಟೆಲ್‌ ನೆನಪು ಮೆಲುಕು

ಶುಕ್ರವಾರ ಬೆಳಿಗ್ಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಜನಾರ್ದನ ಹೋಟೆಲ್‌ಗೆ ತೆರಳಿ ಮುಖ್ಯಮಂತ್ರಿ ಉಪಾಹಾರ ಸೇವಿಸಿದರು.

‘ಹಲವು ವರ್ಷಗಳಿಂದ ಈ ಹೋಟೆಲ್‌ಗೆ ಬರುತ್ತಿದ್ದೇನೆ’ ಎಂದು ಹೇಳಿ ಮುಖ್ಯಮಂತ್ರಿ‌ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹೋಟೆಲ್‌ನ ಹಿರಿಯ ಸಿಬ್ಬಂದಿಯೂ ಮುಖ್ಯಮಂತ್ರಿ ಜೊತೆಗಿನ ಹಳೆ ನೆನಪುಗಳನ್ನು ಕೆದಕಿದರು.

ಅದೇ ವೇಳೆ ಹೋಟೆಲ್‌ಗೆ ಬಂದಿದ್ದ ಜನ ಮುಖ್ಯಮಂತ್ರಿ ಜೊತೆ ಸೆಲ್ಫಿ ತೆಗೆದುಕೊಂಡರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಜೊತೆಗಿದ್ದರು.

‘ಶಾ ಮಿದುಳಿಲ್ಲದ ವ್ಯಕ್ತಿ’

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಿದುಳಿಲ್ಲ’ ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

‘ಒಂದು ಜೈಲು ಹಕ್ಕಿ ಮತ್ತೊಂದು ಜೈಲು ಹಕ್ಕಿಗೆ ಸಹಾಯ ಮಾಡುತ್ತಿದೆ ಎಂದು ನೀವು ಟ್ವೀಟ್‌ ಮಾಡಿದ್ದೀರಿ. ಈ ಬಗ್ಗೆ ಪ್ರತಿಕ್ರಿಯಿಸಿ’ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

‘ಸಿದ್ದರಾಮಯ್ಯ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದ್ದಾರೆ. ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ಮಾತ್ರ ವಾಪಸ್‌ ಪಡೆದಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಶೋಭಾ ಅವರಿಗೆ ತುಷ್ಠೀಕರಣ ಅಂದರೆ ಗೊತ್ತೇನ್ರಿ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry