ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರೀಕರಣದಿಂದ ಗ್ರಾಮೀಣ ಭಾರತ ಕಣ್ಮರೆ: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ನರೇಂದ್ರ ರೈ ದೇರ್ಲ ವಿಷಾದ

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಜಗಳೂರು (ದಾವಣಗೆರೆ ಜಿಲ್ಲೆ): ನಗರೀಕರಣದ ವ್ಯಾಮೋಹದಿಂದಾಗಿ ಕೃಷಿ ಆಧಾರಿತ ಗ್ರಾಮೀಣ ಭಾರತ ಕಣ್ಮರೆಯಾಗುತ್ತಿದೆ ಎಂದು ಲೇಖಕ ಡಾ. ನರೇಂದ್ರ ರೈ ದೇರ್ಲ ವಿಷಾದಿಸಿದರು.

ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನವಾದ ಶುಕ್ರವಾರ ‘ಅನ್ನದಾತರ ಅಳಲು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ದೊಡ್ಡ ದೊಡ್ಡ ಹುದ್ದೆಗಳನ್ನು ಹಿಡಿದು ನಗರಗಳಲ್ಲಿ ವಾಸ ಮಾಡುವುದೇ ಅತ್ಯುತ್ತಮ ಜೀವನ ಎಂದು ಭ್ರಮಿಸಿರುವ ಜನರ ಸಂಖ್ಯೆಯೇ ಹೆಚ್ಚಾಗಿದೆ. ಸ್ವಚ್ಛ, ಸುಂದರ ಪರಿಸರದಲ್ಲಿ ಕೃಷಿ ಮಾಡುತ್ತಾ ಸರಳ ಜೀವನ ನಡೆಸುವ ರೈತರು ಹೆಮ್ಮೆ ಪಡಬೇಕಿತ್ತು. ಆದರೆ, ರೈತರು ಕೀಳರಿಮೆಯಿಂದ ನರಳುತ್ತಿದ್ದಾರೆ. ಈ ಕೀಳರಿಮೆಯೇ ರೈತರ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ. ಬರಗಾಲ, ಬಿಸಿಲು ಉಳಿದ ಎಲ್ಲಾ ವರ್ಗದವರಿಗಿಂತ ರೈತರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

‘ಆಧುನಿಕ ಸಮಾಜದಲ್ಲಿ ಕೃಷಿಯ ಬಗ್ಗೆ ನಕಾರಾತ್ಮಕ ಧೋರಣೆ ವ್ಯಕ್ತವಾಗುತ್ತಿದೆ. ಪ್ರಾಚೀನ ಗ್ರಾಮೀಣ ಜೀವನಶೈಲಿಯಿಂದ ನಗರೀಕರಣಕ್ಕೆ ಮಾರುಹೋದ ಜನರು ನಗರಗಳಲ್ಲಿ ವಿಷಯುಕ್ತ ಪರಿಸರದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂದು ನಾವು ಸೇವಿಸುವ ಆಹಾರ ವಿಷಯುಕ್ತವಾಗುತ್ತಿದೆ. ನಮ್ಮ ಹಿರಿಯರು ಆರೋಗ್ಯವಂತ ಮತ್ತು ಮಾಲಿನ್ಯ ಮುಕ್ತ ಪರಿಸರದಲ್ಲಿ ಬೆಳೆದುಬಂದ ಕಾರಣ ಇಂದಿಗೂ ಅವರು ಆರೋಗ್ಯವಗಿದ್ದಾರೆ. ವಿಷಯುಕ್ತ ಆಹಾರ ಮತ್ತು ಪರಿಸರದ ಪರಿಣಾಮ ಯುವ ಪೀಳಿಗೆಯೇ ಸಾವಿನತ್ತ ಸಾಗುತ್ತಿದೆ’ ಎಂದು ನರೇಂದ್ರ ರೈ ದೇರ್ಲ ಆತಂಕ ಪಟ್ಟರು.

‘ವಿದ್ಯಾವಂತರು ಹೆಚ್ಚಾಗಿರುವ ಸಮಾಜದಲ್ಲಿ ಇಂದು ಮನುಷ್ಯ ಮನುಷ್ಯರ ಮಧ್ಯೆ ಗೋಡೆಗಳ ನಿರ್ಮಾಣವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ರಾಜ್ಯದಲ್ಲೇ ಪ್ರತಿಭಾನ್ವಿತರ ಸಾಧನೆಗಳಿಂದಾಗಿ ದೇಶದಲ್ಲಿ ಹೆಚ್ಚು ಸುದ್ದಿಯಾಗುತ್ತಿತ್ತು. ಆದರೆ, ಈಚೆಗೆ ಕೋಮು ಗಲಭೆ, ಹಿಂಸೆಯ ಕಾರಣದಿಂದ ಸುದ್ದಿಯಲ್ಲಿದೆ. ವಿದ್ಯೆ ಮನುಷ್ಯರ ಬದುಕನ್ನು ಹಸನಾಗಿಸಬೇಕು. ಇಲ್ಲಿ ಇದು ಆಗುತ್ತಿಲ್ಲ’ ಎಂದು ಹೇಳಿದರು.

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಬಿ.ಎಲ್‌.ಶಂಕರ್‌ ಅವರೂ ಹಾಜರಿದ್ದರು.

ಮುಖ್ಯಾಂಶಗಳು

* ಆಧುನಿಕ ಸಮಾಜದಲ್ಲಿ ಕೃಷಿಯ ಬಗ್ಗೆ ನಕಾರಾತ್ಮಕ ಧೋರಣೆ

* ನಾವು ಸೇವಿಸುವ ಆಹಾರ ವಿಷಯುಕ್ತವಾಗುತ್ತಿದೆ

* ಮನುಷ್ಯ ಮನುಷ್ಯರ ಮಧ್ಯೆ ಗೋಡೆಗಳ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT