4

ರಾಜಧಾನಿಗೆ ಉಗ್ರರು; ರಾಜ್ಯದಲ್ಲಿ ಕಟ್ಟೆಚ್ಚರ

Published:
Updated:
ರಾಜಧಾನಿಗೆ ಉಗ್ರರು; ರಾಜ್ಯದಲ್ಲಿ ಕಟ್ಟೆಚ್ಚರ

ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಕಾಶ್ಮೀರದ ನಾಲ್ವರು ಉಗ್ರರು ಬೆಂಗಳೂರಿಗೆ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ್ದರಿಂದ ಪೊಲೀಸರು ರಾಜ್ಯದಾದ್ಯಂತ ಶುಕ್ರವಾರ ಕಟ್ಟೆಚ್ಚರ ವಹಿಸಿದ್ದರು.

‘ಫೇಸ್‌ಬುಕ್, ಟ್ವಿಟರ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಗುರುವಾರ ಬೆಳಿಗ್ಗೆಯಿಂದ ಈ ಸುದ್ದಿ ಹರಿದಾಡುತ್ತಿತ್ತು. ಹೀಗಾಗಿ, ಜನದಟ್ಟಣೆ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಎಲ್ಲ ವಲಯಗಳ ಐಜಿಪಿಗಳಿಗೆ ಹಾಗೂ ಕಮಿಷನರ್‌ಗಳಿಗೆ ಸೂಚಿಸಲಾಗಿತ್ತು’ ಎಂದು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಮುಖ ಸರ್ಕಾರಿ ಕಚೇರಿಗಳು, ಮಾಲ್‌ಗಳು, ಮಾರುಕಟ್ಟೆಗಳು, ದೇವಸ್ಥಾನಗಳು, ಬಸ್ ಹಾಗೂ ರೈಲು ನಿಲ್ದಾಣಗಳ ಬಳಿ ಗುರುವಾರ

ಸಂಜೆಯೇ ಭದ್ರತಾ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿ ಠಾಣೆಗಳ ಪೊಲೀಸರು ತಮ್ಮ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ ಕಟ್ಟಡಗಳು, ಹೋಟೆಲ್‌ ಹಾಗೂ ವಸತಿ ಗೃಹಗಳಿಗೆ ತೆರಳಿ ಅಲ್ಲಿರುವವರ ಪೂರ್ವಾಪರ ಪರಿಶೀಲಿಸಿದ್ದರು.’

‘ಶುಕ್ರವಾರ ಬೆಳಿಗ್ಗೆ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದ ಎಲ್ಲ ಕಡೆಗಳಲ್ಲೂ ಅಧಿಕಾರಿಗಳು‌ ನಿಗಾ ಇಟ್ಟಿದ್ದರು. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದ ಬಳಿ ಗರುಡ ಪಡೆಯ ಕಣ್ಗಾವಲು ಇತ್ತು. ಕೈಗೊಂಡ ಭದ್ರತಾ ಕ್ರಮಗಳ ಬಗ್ಗೆ ಎಲ್ಲ ಜಿಲ್ಲೆಗಳ ಪೊಲೀಸರು ಸಂಜೆ ಐಎಸ್‌ಡಿ ಕಚೇರಿಗೆ ವರದಿ ಕಳುಹಿಸಿದ್ದು, ಯಾವುದೇ ಶಂಕಿತರು ಪತ್ತೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.

ಮಲ್ಲೇಶ್ವರವೇ ಗುರಿ: ‘ಉಗ್ರರು ಮಲ್ಲೇಶ್ವರದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಾರೆ ಎಂಬ ಸುದ್ದಿ ಇತ್ತು. ಹೀಗಾಗಿ, ಆ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ಹಾಕಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry