7

‘ಅನವಶ್ಯಕ ದೂರು’: ಕ್ರಮಕ್ಕೆ ಆದೇಶ

Published:
Updated:
‘ಅನವಶ್ಯಕ ದೂರು’: ಕ್ರಮಕ್ಕೆ ಆದೇಶ

ಬೆಂಗಳೂರು: ‘ರಾಜಾಜಿ ನಗರದ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ವಿರುದ್ಧ ಅನವಶ್ಯಕ ದೂರುಗಳನ್ನು ದಾಖಲಿಸಲಾಗುತ್ತಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್‌ ಗಮನಹರಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಗೀತಾ ಮಿಶ್ರಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಪ್ರತಿವಾದಿಗಳಾದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್, ರಾಜಾಜಿ ನಗರ ಠಾಣಾಧಿಕಾರಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಆಕ್ಷೇಪಣೆ ಏನು?: ‘ನಾನು ಸಾಮಾಜಿಕ ಕಾರ್ಯಕರ್ತೆ, ರಾಜಾಜಿನಗರದ ಮೂರನೇ ಬ್ಲಾಕ್‌ನ 17ನೇ ಮೇನ್‌, 47ನೇ ಕ್ರಾಸ್‌ನಲ್ಲಿ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆ ಒತ್ತುವರಿ ಮಾಡಿದ್ದ ಅಂಗಡಿ ಮುಂಗಟ್ಟುಗಳ ತೆರವಿಗಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ.

ಅಂತೆಯೇ 3ನೇ ಬ್ಲಾಕ್‌ 17ನೇ ಮೇನ್‌ನಲ್ಲಿ ಸಂಚಾರಿ ಪೊಲೀಸರು ಹಾಕಿದ್ದ ನೋ ಪಾರ್ಕಿಂಗ್‌ ಬೋರ್ಡ್‌ ಅನ್ನು ಕೆಲವು ಅಂಗಡಿಯವರು ಕಳವು ಮಾಡಿದ್ದಾರೆ. ಇದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತಂತೆ ಪೊಲೀಸ್‌ ಕಮಿಷನರ್ ಅವರಿಗೆ ದೂರು ನೀಡಿದ್ದೆ.

ಈ ಕಾರಣಕ್ಕಾಗಿ ಸ್ಥಳೀಯರು ನನ್ನ ವಿರುದ್ಧ ರಾಜಾಜಿ ನಗರ ಠಾಣೆ ಪೊಲೀಸರಿಗೆ ಸುಳ್ಳು ದೂರುಗಳನ್ನು ನೀಡಿದ್ದಾರೆ. ಈ ಸಂಬಂಧ ಪೊಲೀಸರು ನನಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂಬುದು ಅರ್ಜಿದಾರರ ಆಕ್ಷೇಪ. ಅರ್ಜಿದಾರರ ಪರ ಜಿ.ಆರ್.ಮೋಹನ್‌ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry