ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ ಆರಂಭ

7

ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ ಆರಂಭ

Published:
Updated:
ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ ಆರಂಭ

ಮಂಡ್ಯ: ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಶುಕ್ರವಾರ ಆರಂಭವಾದ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೊದಲ ದಿನವೇ ಸಾವಿರಾರು ಜನರು ಭೇಟಿ ನೀಡಿ ಸಸ್ಯ ವೈವಿಧ್ಯ, ಹೂವು, ಹಣ್ಣುಗಳನ್ನು ಕಣ್ತುಂಬಿಕೊಂಡರು.

6 ದಿನಗಳ ಕಾಲ ನಡೆಯುವ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಚಾಲನೆ ನೀಡಿದರು. ಹೂಗಳಿಂದ ಅಲಂಕೃತಗೊಳ್ಳುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ ಮಾದರಿ ಜನರ ಮನಸೂರೆಗೊಂಡಿತು. ಹೂವುಗಳಿಂದ ಅರಳಿದ ದೇವಸ್ಥಾನ ನೋಡಿ ಮಹಿಳೆಯರು, ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದರು. ಮರಳಿನಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡರ ಕಲಾಕೃತಿ ನೋಡುಗರನ್ನು ಸೆಳೆಯುತ್ತಿದೆ. ಮರೀಗೌಡರ ಕುರಿತ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದರು. ರಾಮಾನುಜಾಚಾರ್ಯ ಪುತ್ಥಳಿ ಗಮನ ಸೆಳೆಯಿತು.

ತರಕಾರಿ ಕೆತ್ತನೆ: ತರಕಾರಿ ಕೆತ್ತನೆಯಲ್ಲಿ ಅರಳಿದ ಪ್ರಾಣಿ, ಪಕ್ಷಿ, ಸಂಗೀತ ವಾದ್ಯ, ದೇವರ ಕಲಾಕೃತಿಗಳು ಆಕರ್ಷಕವಾಗಿವೆ. ಜೀವಂತ ಪ್ರಾಣಿಗಳು ಎದ್ದು ಬರುವಂತೆ ವೀಕ್ಷಕರಿಗೆ ಭಾಸವಾಗುತ್ತಿದ್ದವು. ತರಕಾರಿ ಬೆಲೆ ಕಡಿಮೆ ಇರುವುದರಿಂದ ಮನೆಯಲ್ಲಿ ತರಕಾರಿ ಕಲಾಕೃತಿ ರಚಿಸುವ ಪ್ರಯತ್ನ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೂವಿನ ಅಲಂಕಾರ ಹಾಗೂ ಪಿರಮಿಡ್‌ ರಚನೆ ಜನರ ಮೆಚ್ಚುಗೆಗೆ ಪಾತ್ರವಾದವು. ಆವರಣದಲ್ಲಿರುವ ಮರಗಳನ್ನು ದೀಪಾಲಾಂಕಾರದಿಂದ ಸಿಂಗರಿಸಲಾಗಿತ್ತು. ಸಂಜೆಯಾಗುತ್ತಿದ್ದಂತೆ ಬೆಳಕಿನ ವೈಭವ ಎದ್ದು ಕಾಣುತ್ತಿತ್ತು.

ವಿವಿಧ ತಳಿ ಹಾಗೂ ಬಣ್ಣ ಬಣ್ಣದ ಚೆಂಡು ಹೂವು ಆವರಣದ ತುಂಬೆಲ್ಲ ಗಮನ ಸೆಳೆದವು. ಆಂಜನೇಯ ದೇವಸ್ಥಾನವು ನೋಡುಗರಲ್ಲಿ ಭಕ್ತಿಯ ಭಾವ ತುಂಬಿತು. ವಿವಿಧ ಸರ್ಕಾರಿ ಇಲಾಖೆಗಳು ತಮ್ಮ ಕೆಲಸಗಳ ಮಾಹಿತಿ ಸಾರುವ ಮಳಿಗೆ ತೆರೆದ್ದರು. ಅಧಿಕಾರಿಗಳು ಪ್ರದರ್ಶನಕ್ಕೆ ಬಂದ ಜನರಿಗೆ ಸಂಪೂರ್ಣ ಮಾಹಿಡಿ ನೀಡುತ್ತಿದ್ದರು. ರೇಷ್ಮೆ ಇಲಾಖೆಯ ಹುಳು ಸಾಕಾಣಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಸಿಬ್ಬಂದಿ ತೋರಿಸಿದರು. ರೇಷ್ಮೆ ಹುಳು ಬೆಳವಣಿಗೆಯ ಐದು ಹಂತಗಳು ಹಾಗೂ ಗೂಡು ಕಟ್ಟುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನ ಆಸಕ್ತ ಮಕ್ಕಳಿಗೆ ವಿವಿಧ ವೈಜ್ಞಾನಿಕ ಸಿದ್ಧಾಂತಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರುತ್ತಿರುವುದು ಮಕ್ಕಳಿಗೆ ಇಷ್ಟವಾಯಿತು.

ಮೀನಿಗಾರಿಕೆ ಇಲಾಖೆಯಿಂದ ಅಲಂಕಾರ ಮೀನುಗಳ ಪ್ರದರ್ಶನ ಹಾಗೂ ಮೀನುಗಾರಿಕೆಯ ಬಗೆಗಿನ ಮಾಹಿತಿ ನೀಡಲಾಯಿತು. ಹೊಂಡ ನಿರ್ಮಾಣ ಮಾಡಿ ಮೀನು ಕೃಷಿ ಮಾಡಲು ಅವಶ್ಯವಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷಿಕೆಗಳು ನಡೆದವು. ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಅನುಕೂಲವಾಗುವಂತಹ ಹಲವು ವಿಶೇಷಗಳು ಇದ್ದವು. ಇದು ಕೃಷಿ ಮೇಳದಂತೆಯೂ ಇರುವುದು ವಿಶೇಷವಾಗಿತ್ತು. ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳ ಮಹತ್ವ ಸಾರುವ ಮಳಿಗೆಗಳನ್ನೂ ಸ್ಥಾಪಿಸಲಾಗಿತ್ತು. ಮನೆಯಲ್ಲಿ ಕೈತೋಟ ಮಾಡುವವರಿಗೆ ಸಾವಯುವ ಗೊಬ್ಬರ ಉತ್ಪಾದನೆ ಮಾಡುವ ಬಗ್ಗೆಯೂ ಸಿಬ್ಬಂದಿ ಮಾಹಿತಿ ನೀಡಿದರು.

ತೆಂಗಿನ ತಳಿಯ ಮಾಹಿತಿ:ವಿವಿಧ ಬಗೆಯ ತೆಂಗಿನ ಕಾಯಿ ತಳಿಯ ಪ್ರದರ್ಶನದ ವಿಶೇಷವಾಗಿತ್ತು. ತಿಪಟೂರಿನ ಟಾಲ್ ತಳಿ ಉತ್ತಮ ಇಳುವರಿ ನೀಡುವುದಾಗಿ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ದೇಸಿ ತಳಿ ಸೇರಿದಂತೆ ಹೈಬ್ರಿಡ್ ತಳಿಗಳ ಬಗ್ಗೆಯೂ ವಿವರಣೆ ನೀಡಲಾಯಿತು.

ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ  ವಿವಿಧ ಜಾತಿಯ ತೆಂಗಿನ ಸಸಿ ದೊರೆಯುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿ ವಿವಿಧ ಸಂಘಟನೆಗಳು ಮಳಿತೆ ತೆರೆದಿವೆ. ಜ.31ರವರೆಗೆ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.

ನೀರಾ ರುಚಿ ನೋಡಿ!

ಸರ್ಕಾರ ತೆಂಗಿನಮರಗಳಿಂದ ನೀರಾ ಇಳಿಸಲು ಅನುಮತಿ ನೀಡಿರುವ ಕಾರಣ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನದಲ್ಲಿ ನೀರಾ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿ ಸಿಬ್ಬಂದಿ ಮಳಿಗೆ ತೆರೆದಿದ್ದು ನೀರಾ ಇಳಿಸುವ ಮಾಹಿತಿ ನೀಡಲಾಗುತ್ತಿದೆ. ನೀರಾ ರುಚಿ ನೋಡಲು ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry