‘ಹೈನುಗಾರಿಕೆಯಿಲ್ಲದೆ ಕೃಷಿ ಇಲ್ಲ’

7

‘ಹೈನುಗಾರಿಕೆಯಿಲ್ಲದೆ ಕೃಷಿ ಇಲ್ಲ’

Published:
Updated:

ಕುಮಟಾ : ‘ಮಿಶ್ರತಳಿ ಹೈನುಗಾರಿಕೆ ನಡೆಸುವುದರಿಂದ ಲಾಭ ಮತ್ತು ಕೃಷಿ ಅಭಿವೃದ್ಧಿ ಸಾಧ್ಯ’ ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು. ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ತಾಲ್ಲೂಕಿನ ಬಾಡದಲ್ಲಿ ಈಚೆಗೆ ನಡೆದ ಜಾನುವಾರು ಪ್ರದರ್ಶನ ಉದ್ಘಾಟಿಸಿದ ಅವರು, ‘ಹೈನುಗಾರಿಕೆಯು ಕೃಷಿಗೆ ಪೂರಕವಾಗಿದ್ದು, ಒಂದಿಲ್ಲದೆ ಇನ್ನೊಂದು ಇಲ್ಲ.

ಹೈನುಗಾರಿಕೆಯಿಂದ ಕುಟುಂಬದ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಆರ್ಥಿಕತೆಯೂ ಬೆಳೆಯುತ್ತದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ಅತ್ಯುತ್ತಮ ಉದ್ದಿಮೆಯಾಗಿದೆ. ಇದನ್ನು ಪ್ರೋತ್ಸಾಹಿಸಲು ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ’ ಎಂದರು.

ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ನಾಯ್ಕ, ‘ಬಾಡ ಸುತ್ತಲಿನ ಊರುಗಳಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಶೇಂಗಾ ಕೃಷಿ ಮಾಡುತ್ತಿದ್ದರು. ಆಗ ಅದರ ಹೊಟ್ಟು ದನಗಳಿಗೆ ಅತ್ಯುತ್ತಮ ಆಹಾರವಾಗಿತ್ತು. ಈಗ ಶೇಂಗಾ ಕೃಷಿ ಕಡಿಮೆಯಾಗಿದ್ದು, ಹಣ ಕೊಟ್ಟು ಮೇವು ಖರೀದಿ ಮಾಡಬೇಕಾದ ಸ್ಥಿತಿ ಬಂದಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ಪಟಗಾರ, ‘ಜಾನುವಾರು ಪ್ರದರ್ಶನದಲ್ಲಿ ಉತ್ತಮ ಜಾನುವಾರುಗಳಿಗೆ ಸರ್ಕಾರ ಬಹಮಾನ ನೀಡುವುದರಿಂದ ಹೈನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದರು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವಿಶ್ವನಾಥ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯ್ತಿ ಉಪಾಧ್ಯಕ್ಷ ರವಿಕಾಂತ ನಾಯ್ಕ, ಹೊಲನಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಪಟಗಾರ, ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ನಾಯ್ಕ ಉಪಸ್ಥಿತರಿದ್ದರು. ಎಸ್.ಪಿ. ಭಟ್ಟ ಸ್ವಾಗತಿಸಿದರು. ಮಂಜುನಾಥ ನಾಯ್ಕ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry