7

ಸಮಾನ ಅವಕಾಶ ನೀಡಿರುವ ಸಂವಿಧಾನ

Published:
Updated:

ವಿರಾಜಪೇಟೆ: ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ನ್ಯಾಯಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಸರ್ವಸಮ್ಮತ ಸಂವಿಧಾನ ನಮ್ಮದಾಗಿದೆ’ ಎಂದು ತಹಶೀಲ್ದಾರ್‌ ಆರ್‌.ಗೋವಿಂದರಾಜ್‌ ಹೇಳಿದರು.

ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದಿಂದ ಇಲ್ಲಿನ ತಾಲ್ಲೂಕು ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಗತ್ತಿನ ಬಹುತೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಗಣರಾಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆಯಾದರೂ ಅವುಗಳಲ್ಲಿ ಏಕರೂಪತೆ ಇಲ್ಲ. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಭಿನ್ನತೆಯನ್ನು ಹೊಂದಿದ ದೇಶದಲ್ಲಿ ಸರ್ವಸಮ್ಮತ ಸಂವಿಧಾನವನ್ನು ರೂಪಿಸುವುದು ಸವಾಲಾಗಿತ್ತು. ಆದರೆ ಡಾ. ಬಿ.ಆರ್‌. ಅಂಬೇಡ್ಕರ್‌ ನೇತೃತ್ವದ ಸಮಿತಿ ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಡಿವೈಎಸ್ಪಿ ನಾಗಪ್ಪ, ಸಿಪಿಐ ಕುಮಾರ್ ಆರಾಧ್ಯ, ಪ್ರೊಬೇಷನರಿ ತಹಶೀಲ್ದಾರ್ ತ್ರಿನೇತ್ರ, ತೂಕ್‌ಬೊಳಕ್ ಕಲೆ ಸಾಹಿತ್ಯ ಮತ್ತು ಕ್ರೀಡೆ ಅಕಾಡೆಮಿ ಅಧ್ಯಕ್ಷ ಎಂ.ಶಂಕರಿ ಪೊನ್ನಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಶಿ ಕಾವೇರಪ್ಪ ಮತ್ತಿತರರು ಉಪಸ್ಥಿತರಿದ್ದರು.

ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ತೂಕ್ ಬೊಳಕ್ ಕಲೆ, ಸಾಹಿತ್ಯ ಮತ್ತು ಕ್ರೀಡೆ ಅಕಾಡೆಮಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರರನ್ನು ಸನ್ಮಾನಿಸಲಾಯಿತು.

ವಿರಾಜಪೇಟೆ ಮೌಂಟನ್ ವ್ಯೂ ಶಾಲೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ, ಬಿಟ್ಟಂಗಾಲದ ರೋಟರಿ ಪ್ರೌಢಶಾಲೆಗೆ ದ್ವಿತೀಯ ಹಾಗೂ ಬಾಳುಗೋಡುವಿನ ಏಕಲವ್ಯ ವಸತಿಶಾಲೆ ತೃತೀಯ ಸ್ಥಾನ ಪಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಸ್ವಾಗತಿಸಿದರು. ಉಪನ್ಯಾಸಕ ಚಾರ್ಲ್ಸ್‌ ಡಿಸೋಜಾ ನಿರೂಪಿಸಿದರು. ಶಿಕ್ಷಕ ಬಿ.ಎಸ್‌. ದೇವರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry