ಮಿಥುನ್ ಕಲ್ಲಡ್ಕಗೆ ನಕಲಿ ಎನ್‌ಕೌಂಟರ್ ಭೀತಿ: ತಾಯಿ ಕಣ್ಣೀರು

7

ಮಿಥುನ್ ಕಲ್ಲಡ್ಕಗೆ ನಕಲಿ ಎನ್‌ಕೌಂಟರ್ ಭೀತಿ: ತಾಯಿ ಕಣ್ಣೀರು

Published:
Updated:
ಮಿಥುನ್ ಕಲ್ಲಡ್ಕಗೆ ನಕಲಿ ಎನ್‌ಕೌಂಟರ್ ಭೀತಿ: ತಾಯಿ ಕಣ್ಣೀರು

ಬಂಟ್ವಾಳ: ‘ ನನ್ನ ಮಗ ಮಿಥುನ್ ಕಲ್ಲಡ್ಕನನ್ನು ಪೊಲೀಸರು ರಾಜಕೀಯ ಪ್ರೇರಿತವಾಗಿ ನಕಲಿ ಎನ್‌ಕೌಂಟರ್ ಮೂಲಕ ಮುಗಿಸಲು ಸಂಚು ಹೂಡಿದ್ದಾರೆ’ ಎಂದು ತಾಯಿ ಲಲಿತಾ ಪೂಜಾರಿ ಆರೋಪಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಲ್ಲಡ್ಕದಲ್ಲಿ ಆರು ತಿಂಗಳ ಹಿಂದೆ ನಡೆದ ಮುಸ್ಲಿಂ ಯುವಕನಿಗೆ ಚಾಕುವಿನಿಂದ ಇರಿತ ಪ್ರಕರಣ ಸೇರಿದಂತೆ ಯಾವುದೇ ಘರ್ಷಣೆಯಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಕೇವಲ ಹಿಂದೂ ಧರ್ಮದ ಬಗ್ಗೆ ವಿಶೇಷ ಶ್ರದ್ಧೆ ಮತ್ತು ಆರ್‌ಎಸ್‌ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರಿಗೆ ಹಿಂದೆ ಸಚಿವ ಬಿ.ರಮಾನಾಥ ರೈ ನಿಂದಿಸಿರುವುದನ್ನು ಆಕ್ಷೇಪಿಸಿದ್ದಾರೆ ಎಂಬ ಕಾರಣಕ್ಕಾಗಿ ಈ ಸಂಚು ರೂಪಿಸಲಾಗಿದೆ’ ಎಂದರು.

‘ಈ ಹಿಂದೆಯೂ ಮಿಥುನ್‌ ವಿರುದ್ಧ ಹಲವು ಬಾರಿ ಸುಳ್ಳು ದೂರು ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ  ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ 'ಕಮ್ಯೂನಲ್ ಗೂಂಡಾ' ಪಟ್ಟಿಗೆ ಸೇರ್ಪಡೆಗೊಳಿಸಿ ನಕಲಿ ಎನ್‌ಕೌಂಟರ್ ನಡೆಸುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

‘ಪೊಲೀಸರು ಮಗನ ವಿರುದ್ಧ ದಾಖಲಿಸಿಕೊಂಡ ಸುಳ್ಳು ಪ್ರಕರಣವನ್ನು ನ್ಯಾಯಾಲಯವು ಈಗಾಗಲೇ ರದ್ದುಗೊಳಿಸಿದೆ. ಈ ನಡುವೆ ಪೊಲೀಸರು ಮತ್ತೆ ದಾಖಲಿಸಿಕೊಂಡಿದ್ದ ಸುಳ್ಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 3ರಂದು ಜಾಮೀನು ದೊರೆತಿದೆ. ಇದೀಗ ಜಿಲ್ಲೆಯ ದಕ್ಷ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜಕೀಯ ಪ್ರೇರಿತ ಪೊಲೀಸ್ ಅಧಿಕಾರಿಗಳು ಆತನನ್ನು ಜೈಲಿನಿಂದ ಹೊರಗೆ ಬಾರದಂತೆ ತಡೆಯಲು ಇದೇ 13ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ’ ಎಂದರು.

‘ದೀಪಕ್ ರಾವ್ ಹತ್ಯೆ ಬಳಿಕ ನಡೆದ ಬಶೀರ್ ಹತ್ಯೆಯನ್ನು ಮಂಗಳೂರಿನ ಕಂಕನಾಡಿ ಜಾತ್ರೆಗೆ ಬಂದಿದ್ದ ಯುವಕರ ತಂಡವೊಂದು ಮಾಡಿದೆ ಎಂದು ಹೇಳಿಕೆ ನೀಡಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಮಿಥುನ್ ಹಣಕ್ಕಾಗಿ ಜೈಲಿನಲ್ಲೇ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಕಟ್ಟು ಕಥೆ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರೆ ಆರ್ಥಿಕ ನೆರವಿನ ಜತೆಗೆ ಎಲ್ಲಾ ಕೇಸುಗಳಿಂದಲೂ ಮುಕ್ತಿ ನೀಡುತ್ತೇವೆ ಎಂಬ ಆಮಿಷವನ್ನು ವಿಥುನ್ ಈ ಮೊದಲು ತಿರಸ್ಕರಿಸಿದ್ದನು’ ಎಂದು ಅವರು ಸ್ಪಷ್ಟಪಡಿಸಿದರು.

ಮಿಥುನ್ ತಂದೆ ನಾರಾಯಣ ಪೂಜಾರಿ, ಸಹೋದರ ಪವನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry