ಹನುಮ ಜಯಂತಿ ಶಾಂತಿಯುತ

7

ಹನುಮ ಜಯಂತಿ ಶಾಂತಿಯುತ

Published:
Updated:
ಹನುಮ ಜಯಂತಿ ಶಾಂತಿಯುತ

ಹುಣಸೂರು: ಪೊಲೀಸರು ಹಾಗೂ ಕ್ಯಾಮೆರಾ ಕಣ್ಗಾವಲಿನಲ್ಲಿ ಹನುಮ ಜಯಂತಿ ನಗರದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಹನುಮ ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಸುಮಾರು 6 ಗಂಟೆ ನಡೆದ ಮೆರವಣಿಗೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು. ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಆರಂಭಿಸಲು ಹನುಮ ಜಯಂತಿ ಆಚರಣಾ ಸಮಿತಿಗೆ ಅನುಮತಿ ನೀಡಲಾಗಿತ್ತು.

ಡಿ.3ರಂದು ನಡೆಯುತ್ತಿದ್ದ ಹನುಮ ಜಯಂತಿ ವೇಳೆ ಗಲಾಟೆ ಉಂಟಾಗಿ ಲಾಠಿ ಪ್ರಹಾರ ಮಾಡಲಾಗಿತ್ತು. ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಡಿ ಸಂಸದ ಪ್ರತಾಪ ಸಿಂಹ ಅವರನ್ನೂ ಬಂಧಿಸಲಾಗಿತ್ತು. ಈ ವಿಚಾರ ರಾಜ್ಯದಾದ್ಯಂತ ಸದ್ದು ಮಾಡಿತ್ತು. ಆ ಬಳಿಕ ಜಯಂತಿ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಶಾಂತಿಯುತವಾಗಿ ಆಚರಣೆ ಮಾಡುವುದಾಗಿ ಸಂಘಟಕರು ಭರವಸೆ ನೀಡಿದ ಬಳಿಕ ಜಿಲ್ಲಾ ಆಡಳಿತ ಒಪ್ಪಿಗೆ ನೀಡಿತ್ತು.

11 ಅಡಿ ಎತ್ತರದ ಹನುಮ ಮೂರ್ತಿಯನ್ನು ಲಕ್ಷ್ಮಿನರಸಿಂಹಸ್ವಾಮಿ ದೇಗುಲದಿಂದ ರಂಗನಾಥ ಬಡಾವಣೆಗೆ ತರಲಾಯಿತು. ತರಹೇವಾರಿ ಹೂ ಹಾಗೂ ಕೇಸರಿ ಬಾವುಟಗಳಿಂದ ಅಲಂಕರಿಸಿದ ಟ್ರ್ಯಾಕ್ಟರ್‌ನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಡೊಳ್ಳು, ನಗಾರಿ, ತಮಟೆಗಳು ರಂಗು ತುಂಬಿದವು. ವಾದ್ಯಗಳ ನಿನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಹನುಮ ಭಕ್ತರು ಸುಮಾರು 5 ಕಿ.ಮೀ ದೂರದ ಮಂಜುನಾಥಸ್ವಾಮಿ ಬಡಾವಣೆವರೆಗೂ ಸಾಗಿದರು.

ತಲೆಗೆ ಕೇಸರಿ ಪೇಟ ಧರಿಸಿ, ಕೇಸರಿ ಶಲ್ಯ ಹಾಕಿಕೊಂಡಿದ್ದ ಸಂಸದ ಪ್ರತಾಪಸಿಂಹ ನಂದಿ ಧ್ವಜ ಹೊತ್ತು ಕುಣಿದರು. ಇದರಿಂದ ಪ್ರೇರಿತರಾದ ಯುವಕರು ದಾರಿಯುದ್ದಕ್ಕೂ ನೃತ್ಯ ಮಾಡಿದರು. ಜನರನ್ನು ನಿಯಂತ್ರಿಸಲು ಬಂದಿದ್ದ ಉಪವಿಭಾಗಾಧಿಕಾರಿ ಕೆ.ನಿತೀಶ್‌ ಅವರನ್ನು ಸಂಸದ ತರಾಟೆ ತೆಗದುಕೊಂಡರು.

‘ಜಿಲ್ಲಾಡಳಿತ ಅವಕಾಶ ನೀಡಿದ ಮಾರ್ಗದಲ್ಲಿಯೇ ಸಾಗುತ್ತಿದ್ದೇವೆ. ಓಡಿಕೊಂಡು ಹೋಗಲು ಇದೇನು ಮ್ಯಾರಥಾನ್‌ ಅಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾದರೆ ಕೋಪ ಬರುತ್ತದೆ. ಆಗ ಗಲಾಟೆಯೂ ನಡೆಯುತ್ತದೆ. ಇದೆಲ್ಲದಕ್ಕೂ ಅವಕಾಶ ಮಾಡಿಕೊಡಬೇಡಿ’ ಎಂದು ಗದರಿದರು.

ಐಜಿಪಿ ವಿಪುಲ್‌ ಕುಮಾರ್‌, ಎಸ್‌ಪಿ ರವಿ ಡಿ.ಚನ್ನಣ್ಣನವರ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮಾರ್ಗದುದ್ದಕ್ಕೂ 80 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry