ಕೆರೆಕಟ್ಟೆ ಧ್ವಂಸ: ಕಾನೂನು ಕ್ರಮಕ್ಕೆ ಆಗ್ರಹ

7

ಕೆರೆಕಟ್ಟೆ ಧ್ವಂಸ: ಕಾನೂನು ಕ್ರಮಕ್ಕೆ ಆಗ್ರಹ

Published:
Updated:

ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಹಾರೋಹಿತ್ತಲು ಗ್ರಾಮದ ಅರಣ್ಯ ಜಾಗದಲ್ಲಿದ್ದ 'ತಲಕಟ್ಟಿನಕೆರೆ' ಯ ದಂಡೆಯನ್ನು ಸಂಪೂರ್ಣ ನಾಶಪಡಿಸಿ ಅಕ್ರಮ ಸಾಗುವಳಿಗೆ ಮುಂದಾಗಿರುವ ಕ್ರಮಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಉಚ್ಛ ನ್ಯಾಯಾಲಯವು ಸಾರ್ವಜನಿಕ ಹಿತಾಶಕ್ತಿಯ ಅರ್ಜಿ ಸಲ್ಲಿಕೆಯ ಅನುಸಾರ ಕೆರೆಯನ್ನು ಸ್ವಾಧೀನ ಪಡಿಸಿಕೊಂಡು ಒತ್ತುವರಿದಾರನಿಗೆ ₹10,000 ದಂಡ ವಿಧಿಸುವಂತೆ ಆದೇಶ ನೀಡಿತ್ತು. ಸುಮಾರು 2 ಎಕರೆ ಪ್ರದೇಶದ ಈ ಕೆರೆಯನ್ನು ಕಳೆದ 2 ದಶಕಗಳಿಂದ ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡು ಬಂದಿದ್ದು , ಇದೀಗ ಅಡಿಕೆ ಗಿಡಗಳನ್ನು ನೆಟ್ಟು ಸಂಪೂರ್ಣ ಒತ್ತುವರಿಗೆ ಸನ್ನದ್ಧರಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆ ಕೆರೆ ಒತ್ತುವರಿ ತೆರವು ಮಾಡುವಂತೆ ಕೋರಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮತ್ತು ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಗೊವಿಂದಪ್ಪ ದೂರಿದರು.

ಸುಮಾರು 25 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶದ ಜಮೀನು ಹಾಗೂ ಮೂಕ ಪ್ರಾಣಿಗಳಿಗೆ ನೀರು ಒದಗಿಸುವ ಹಾರೋಹಿತ್ತಲು ಗ್ರಾಮದ ಅರಣ್ಯ ವ್ಯಾಪ್ತಿಗೆ ಒಳಪಡುವ ಈ ಕೆರೆಯನ್ನು ಒತ್ತುವರಿ ದಾರರಿಂದ ತೆರವುಗೊಳಿಸಿ ಕೆರೆ ಪುನರುಜ್ಜೀವನ ಯೋಜನೆಯಡಿ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೊಸನಗರ ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರ ಮಾರ್ಗದರ್ಶನದಲ್ಲಿ ಗುರುವಾರ ಕಂದಾಯ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶೋಭಾ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ.ನಂ. 31 ರ ಈ ಕೆರೆ ಒತ್ತುವರಿ ಜಾಗ ಸೇರಿದಂತೆ ಇಲ್ಲಿ 444. 22 ಎಕರೆ ಅರಣ್ಯ ಜಾಗವಿದ್ದು, ಇಲಾಖೆ ಕೋರಿದಲ್ಲಿ ತೆರವಿಗೆ ಕಾನೂನು ರೀತಿಯ ರಕ್ಷಣೆ ಕೊಡಲು ಕಂದಾಯ ಇಲಾಖೆ ಬದ್ಧವಾಗಿದೆ ಎಂದು ಕಂದಾಯ ಅಧಿಕಾರಿ ಮಂಜುನಾಥ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry