ಸಿಮೆಂಟ್‌ ಕಲಾಕೃತಿ ರಚನೆಗೆ ಸಿದ್ಧಹಸ್ತ

7

ಸಿಮೆಂಟ್‌ ಕಲಾಕೃತಿ ರಚನೆಗೆ ಸಿದ್ಧಹಸ್ತ

Published:
Updated:
ಸಿಮೆಂಟ್‌ ಕಲಾಕೃತಿ ರಚನೆಗೆ ಸಿದ್ಧಹಸ್ತ

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದ ಯುವ ಕಲಾವಿದ ಸುನಿಲ ಎ.ಪೂಜಾರಿ ಆಧುನಿಕ ಕಲಾ ಪದ್ಧತಿ ಮತ್ತು ಸಿಮೆಂಟಿನಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ಧಹಸ್ತರು.

‘ಪಕ್ಷಿಗಳನ್ನು ರಕ್ಷಿಸಿ’ ಶಿರೋನಾ ಮೆಯಲ್ಲಿ ಇವರು ರಚಿಸಿದ 10 ಆಧುನಿಕ ಕಲಾಕೃತಿಗಳು ಗಣ್ಯರ ಮತ್ತು ಹಿರಿಯ ಕಲಾವಿದರಿಂದ ಪ್ರಶಂಸೆಗೆ ಪಾತ್ರವಾಗಿವೆ. ಈ ಮೂಲಕ ಕಲೆಯಲ್ಲಿ ಇವರ ಸಾಮಾಜಿಕ ಕಳಕಳಿ ವ್ಯಕ್ತವಾಗಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆ ಮಿಯು ಇವರಿಗೆ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಆವರಣ ದಲ್ಲಿನ ಲಂಬಾಣಿ ಮಹಿಳೆಯರ ಕಲಾಕೃತಿ, ಕುಂದಾಪುರದಲ್ಲಿನ ಕೆ.ಶಿವರಾಮ ಕಾರಂತ ಉದ್ಯಾನದಲ್ಲಿ ಯಕ್ಷಗಾನ ಕಲಾವಿದನ 9 ಅಡಿ ಎತ್ತರದ ಕಲಾಕೃತಿ ಮತ್ತು ಕಾರವಾರದ ಉದ್ಯಾನದಲ್ಲಿ ಆದಿವಾಸಿ ಕುಣಬಿ ಕುಣಿತದ ಸಿಮೆಂಟ್ ಕಲಾಕೃತಿಗಳನ್ನು ರಚಿಸಲು ಜವಾಬ್ದಾರಿ ವಹಿಸಿತ್ತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

ನಾಗಪುರದ ಕೇಂದ್ರ ಸಂಸ್ಕೃತಿ ಸಚಿವಾಲಯದ ದಕ್ಷಿಣ ಮಧ್ಯಭಾರತ ಸಂಸ್ಕೃತಿ ಕೇಂದ್ರದ ಆವರಣದಲ್ಲಿ ಹಳೆಯ ವಾಡೆಯ ಕಲಾಕೃತಿಯನ್ನು ಇವರು ರಚಿಸಿದ್ದಾರೆ. ಮೈಸೂರು, ಬಸವಕಲ್ಯಾಣ, ನಂಜನಗೂಡು ಮುಂತಾದೆಡೆ ಗೋಡೆಗಳಲ್ಲಿ ಪೌರಾಣಿಕ, ಐತಿಹಾಸಿಕ ಸನ್ನಿವೇಶಗಳನ್ನು ಪ್ರತಿಬಿಂಬಿಸುವ ಉಬ್ಬು ಚಿತ್ರಗಳನ್ನು ರಚಿಸಿದ್ದಾರೆ. ಕಿನ್ನಾಳ ಕಲೆ, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ವ್ಯಕ್ತಿ ಚಿತ್ರಣ, ನಿಸರ್ಗ ಚಿತ್ರಣದಲ್ಲಿಯೂ ಇವರು ಸೈ ಎನಿಸಿಕೊಂಡಿದ್ದಾರೆ.

‘ಬೀದರ್ ಜಿಲ್ಲೆಯ ಐತಿಹಾಸಿಕ ವಾಸ್ತುಶಿಲ್ಪಗಳು ಮತ್ತು ಬಿದ್ರಿ ಕಲಾವಿದ ಅಬ್ದುಲ್ ರೌಫ್ ಅವರ ಕಲೆ ಮತ್ತು ಬದುಕು ಹಾಗೂ ದಕ್ಷಿಣ ಭಾರತದ ಐತಿಹಾಸಿಕ ಸ್ಥಳಗಳ ಕಲಾಕೃತಿಗಳ ಬಗ್ಗೆ ಪ್ರಬಂಧಗಳನ್ನು ರಚಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇನೆ. ಚಿತ್ರಕಲೆಯಲ್ಲಿ ಪಿಎಚ್.ಡಿ

ಪದವಿ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಸುನಿಲ ಪೂಜಾರಿ ಹೇಳಿದರು.

‘ಇವರ ಚಿತ್ರಗಳಲ್ಲಿ ಗಾಢಬಣ್ಣ ಎದ್ದು ಕಾಣುತ್ತದೆ. ಗೆರೆಗಳು ಸ್ಪಷ್ಟವಾಗಿದ್ದು ನೆರಳು, ಬೆಳಕಿನ ಸಂಯೋಜನೆ ಉತ್ತಮವಾಗಿದೆ’ ಎಂದು ಹಿರಿಯ ಚಿತ್ರಕಲಾವಿದ ಪ್ರಭು ರಾಠೋಡ ಅಭಿಪ್ರಾಯಪಟ್ಟರು.

ಹುಮನಾಬಾದ್ ವೀರಭದ್ರೇಶ್ವರ ಚಿತ್ರಕಲಾ ಕಾಲೇಜಿನಲ್ಲಿ ಎಂ.ವಿ.ಎ ಪದವಿ ಪಡೆದಿದ್ದಾರೆ. ಹಾವೇರಿ ಜಿಲ್ಲೆ ಗೋಟಗೂಡಿಯ ಜನಪದ ವಿಶ್ವ ವಿದ್ಯಾಲಯದಲ್ಲಿ ಸಿಮೆಂಟ್ ಕಲಾಕೃತಿ ರಚನೆಯ ತರಬೇತಿ ಪಡೆದಿ ದ್ದಾರೆ. ಬೆಂಗಳೂರು, ಕಲಬುರ್ಗಿಯ ಚಿತ್ರಸಂತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದಿಂದ ಚಿತ್ರದುರ್ಗ, ನಾಗಪುರ, ಹುಮನಾ ಬಾದ್, ಬಸವಕಲ್ಯಾಣ, ಬೀದರ್‌ನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದರು.

ಕಲಬುರ್ಗಿ ಮತ್ತು ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಿದ್ದ ಯುವಜನೋತ್ಸವಗಳಲ್ಲಿ ಚಿನ್ನದ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಹುಲಸೂರನಲ್ಲಿನ ಪ್ರಥಮ ಕಲ್ಯಾಣ ಕರ್ನಾಟಕ ವಿಭಾಗೀಯ ಕನ್ನಡ ಸಾಹಿತ್ಯ ಸಮ್ಮೇಳನ, ಹಾರಕೂಡದಲ್ಲಿನ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಲಾಗಿದೆ.

* * 

ನಗರಗಳಲ್ಲಿ ಮಾತ್ರ ಚಿತ್ರಕಲೆಗೆ ಮಹತ್ವವಿದೆ. ಗ್ರಾಮೀಣ ಭಾಗದಲ್ಲಿಯೂ ಈ ಬಗ್ಗೆ ಆಸಕ್ತಿ ಮೂಡಿಸುವುದಕ್ಕೆ ಪ್ರಯತ್ನ ನಡೆಯಬೇಕು.

ಸುನಿಲ ಪೂಜಾರಿ, ಕಲಾವಿದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry