ಆರಕ್ಕೇರದ, ಮೂರಕ್ಕಿಳಿಯದ ಕೊಕ್ಕೊ

7

ಆರಕ್ಕೇರದ, ಮೂರಕ್ಕಿಳಿಯದ ಕೊಕ್ಕೊ

Published:
Updated:
ಆರಕ್ಕೇರದ, ಮೂರಕ್ಕಿಳಿಯದ ಕೊಕ್ಕೊ

ವೇಗ, ತಂತ್ರಗಾರಿಕೆ, ದೈಹಿಕ ಸಾಮರ್ಥ್ಯ, ಚಾಣಾಕ್ಷತನದಲ್ಲಿ ಕೊಕ್ಕೊ ಆಟ ಎತ್ತರದ ಸ್ಥಾನದಲ್ಲಿ ನಿಲ್ಲುವುದಾದರೂ ಜನಪ್ರಿಯತೆ ಮತ್ತು ಪ್ರೋತ್ಸಾಹದ ವಿಷಯದಲ್ಲಿ ಕೆಳಮಟ್ಟದಲ್ಲೇ ಇದೆ. ಶತಮಾನದಷ್ಟು ಇತಿಹಾಸ ಹೊಂದಿರುವ ಈ ಕ್ರೀಡೆ ಆರಕ್ಕೇರದ ಮೂರಕ್ಕಿಳಿಯದ ಆಟವಾಗಿಯೇ ಉಳಿದುಕೊಂಡಿದೆ.

ಮೈಸೂರಿನಲ್ಲಿ ಕಳೆದ ವಾರ ಎರಡು ಪ್ರಮುಖ ಕೊಕ್ಕೊ ಟೂರ್ನಿಗಳು ನಡೆದವು. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಟೂರ್ನಿ ಮತ್ತು ಅಖಿಲ ಭಾರತ ಅಂತರ ವಿ.ವಿ ಟೂರ್ನಿಯಲ್ಲಿ 900ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಎರಡೂ ಟೂರ್ನಿಗಳಲ್ಲಿ ಆತಿಥೇಯ ಮೈಸೂರು ವಿ.ವಿ ಚಾಂಪಿಯನ್‌ ಆಗಿತ್ತು. ವಿ.ವಿ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಕೊಕ್ಕೊ ಆಟದ ಗತ್ತು ಅನಾವರಣಗೊಂಡಿತ್ತು. ಅದರ ನಡುವೆ ವಿಷಾದದ ಛಾಯೆಯೂ ಎದ್ದುಕಾಣುತ್ತಿತ್ತು.

ಆತಿಥೇಯ ಮೈಸೂರು ವಿ.ವಿ ಸೇರಿದಂತೆ ಎಲ್ಲ ತಂಡಗಳಲ್ಲಿ ಆಡಿದವರಲ್ಲಿ ಹೆಚ್ಚಿನ ಮಂದಿ ಗ್ರಾಮೀಣ ಭಾಗದಿಂದ ಬಂದವರಾಗಿದ್ದರು. ಈ ಆಟ ಇನ್ನೂ ಹಳ್ಳಿ. ಗ್ರಾಮಗಳಿಗೆ ಮಾತ್ರ ಸೀಮಿತವಾಗಿದೆ. ಕಾರ್ಪೊರೇಟ್‌ ವಲಯ ಮತ್ತು ಪ್ರಾಯೋಜಕರ ಕೊರತೆಯೂ ಎದ್ದುಕಂಡಿತು.

ಹಿನ್ನಡೆಗೆ ಕಾರಣಗಳು ಹಲವು: ಕೊಕ್ಕೊ ಆಟದಲ್ಲಿ ವೇಗ, ಸಾಮರ್ಥ್ಯ ಅಡಗಿದೆ. ಚಿಕ್ಕ ವಯಸ್ಸಿನಲ್ಲಿ ಈ ಆಟದಲ್ಲಿ ತೊಡಗಿಸಿಕೊಂಡವನಿಗೆ ಮುಂದೆ ಯಾವುದೇ ಕ್ರೀಡೆಯಲ್ಲಿ ಪಳಗಲು ಸಾಧ್ಯ. ಉತ್ತಮ ಕ್ರೀಡಾಳುವಾಗಿ ಬೆಳೆಯಲು ಅಗತ್ಯವಿರುವ ‘ಬೇಸಿಕ್‌ ಮೂವ್‌ಮೆಂಟ್’ ಕೊಕ್ಕೊ ಆಟದಲ್ಲಿ ದೊರೆಯುತ್ತದೆ. 

ಆದರೂ ವಿವಿಧ ಕಾರಣಗಳಿಂದ ಈ ಕ್ರೀಡೆ ಹಿಂದೆ ಉಳಿದುಕೊಂಡಿದೆ. ಕೊಕ್ಕೊವನ್ನು ಈಗಲೂ ಮಣ್ಣಿನ ಅಂಕಣದಲ್ಲೇ ಆಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಟೂರ್ನಿಗಳು ಮ್ಯಾಟ್‌ಗಳ ಮೇಲೆ ನಡೆಯುತ್ತಿವೆ. ಆದರೆ ಎಲ್ಲ ಕಡೆ ಮ್ಯಾಟ್‌ಗಳ ಬಳಕೆ ಆಗಿಲ್ಲ.

ಮಣ್ಣಿನ ಅಂಕಣದಲ್ಲಿ ಆಡಿ ಬೆಳೆದವರಿಗೆ ಮ್ಯಾಟ್‌ನಲ್ಲಿ ಆಡಲು ಕಷ್ಟವಾಗುತ್ತದೆ. ಅದಕ್ಕಾಗಿ ವಿಶೇಷ ತರಬೇತಿಯ ಅಗತ್ಯವಿದೆ ಎಂದು ಮೈಸೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿರುವ ಬಿ.ಡಿ. ಕಾಂತರಾಜು ಹೇಳುತ್ತಾರೆ.

ಮಣ್ಣಿನ ಅಂಕಣದಲ್ಲಿ ಆಡುವ ಆಟ ವಿದೇಶಿಯರನ್ನು ಆಕರ್ಷಿಸುತ್ತಿಲ್ಲ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿಲ್ಲ. ಮ್ಯಾಟ್‌ ಬಳಕೆ ಹೆಚ್ಚಾದರೆ ಕೊಕ್ಕೊ ಜನಪ್ರಿಯತೆ ಏರಬಹುದು ಎಂಬುದು ಅವರ ಅಭಿಪ್ರಾಯ. ಕೊಕ್ಕೊ ಕ್ರೀಡೆಯ ಬೆಂಬಲಕ್ಕೆ ಪ್ರಾಯೋಜಕರು ಮುಂದೆ ಬರುತ್ತಿಲ್ಲ. ಈ ಕ್ರೀಡೆಯ ನೇರಪ್ರಸಾರ ನಡೆಯುವುದಿಲ್ಲ. ವೀಕ್ಷಕರು ಇಲ್ಲದ ಕಾರಣ ಜಾಹೀರಾತುದಾರರು ಮುಂದೆ ಬರುವುದಿಲ್ಲ.

ಫುಟ್‌ಬಾಲ್, ಕಬಡ್ಡಿ, ಕ್ರಿಕೆಟ್‌ನಲ್ಲಿ ಫೌಲ್ ಮತ್ತು ತೀರ್ಪು ಮರುಪರಿಶೀಲನೆ ನೆವದಲ್ಲಿ ಆಟವನ್ನು ನಡುನಡುವೆ ನಿಲ್ಲಿಸಲು ಅವಕಾಶವಿರುತ್ತದೆ. ಈ ಅವಧಿಯಲ್ಲಿ ಜಾಹೀರಾತು ಪ್ರಸಾರ ಮಾಡಬಹುದು. ಆದರೆ ಕೊಕ್ಕೊದಲ್ಲಿ ಅದಕ್ಕೆ ಅವಕಾಶವಿಲ್ಲ. ಆಟ ಆರಂಭವಾದರೆ ಒಂದು ಇನಿಂಗ್ಸ್‌ (9 ನಿಮಿಷ) ಕೊನೆಗೊಳ್ಳುವವರೆಗೆ ಆಟ ನಿಲ್ಲಿಸುವಂತೆ ಇಲ್ಲ.

ಇನಿಂಗ್ಸ್‌ ನಡುವೆ ಆಟ ನಿಲ್ಲಿಸಲು ಕೊಕ್ಕೊ ನಿಯಮದಲ್ಲಿ  ಅವಕಾಶವಿಲ್ಲ. ಇದರಿಂದ ತೀರ್ಪು ಪರಿಶೀಲಿಸಲು ತಂತ್ರಜ್ಞಾನದ ನೆರವು ಪಡೆಯಲು ಸಾಧ್ಯವಿಲ್ಲ. ಅಂಗಳದ ಅಂಪೈರ್‌ಗಳು ನೀಡುವ ತೀರ್ಪು ಅಂತಿಮವಾಗಿರುತ್ತದೆ. ಕೆಲವೊಮ್ಮೆ ಆಟಗಾರನೊಬ್ಬ ಎದುರಾಳಿಯನ್ನು ಔಟ್‌ ಮಾಡಿದರೆ ಅಂಪೈರ್‌ಗಳಿಗೆ ಸ್ಪಷ್ಟವಾಗಿ ಕಾಣಿಸದು. ಈ ವೇಳೆ ಆಟಗಾರರು ಹೇಳಿದ್ದನ್ನು ನಂಬಿ ತೀರ್ಪು ನೀಡಬೇಕಾಗುತ್ತದೆ. ಇಂತಹ ಇತಿಮಿತಿಗಳು ಈ ಆಟದ ಹಿನ್ನಡೆಗೆ ಕಾರಣವಾಗಿರಲೂಬಹುದು ಎಂದು ಕಾಂತರಾಜು ಹೇಳುತ್ತಾರೆ.

ಇನ್ನೂ ಆಡುವುದು ಏಕೆ?

ಹಣ, ಪ್ರೋತ್ಸಾಹ ದೊರೆಯದಿದ್ದರೂ ಗ್ರಾಮೀಣ ಭಾಗದ ಮಕ್ಕಳು ಇನ್ನೂ ಕೊಕ್ಕೊ ಆಡುತ್ತಿರುವುದು ಏಕೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಶ್ರೀಮಂತರ ಕ್ರೀಡೆ ಎನಿಸಿರುವ ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್ ಆಡಲು ಹಳ್ಳಿಗಳಲ್ಲಿ ಸೌಲಭ್ಯಗಳಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳು ದೈಹಿಕವಾಗಿ ಫಿಟ್ ಆಗಿರಲು ಅನಿವಾರ್ಯವಾಗಿ ಕೊಕ್ಕೊ. ಕಬಡ್ಡಿ ಆಟ ಆಡುವರು. ಒಂದಷ್ಟು ಜಾಗ ಸಿಕ್ಕರೆ ಯಾವುದೇ ಸಲಕರಣೆಯಿಲ್ಲದೆ ಈ ಆಟ ಆಡಬಹುದು.

ಈ ಕಾರಣದಿಂದ ಕೊಕ್ಕೊ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಎಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕೊಕ್ಕೊ ಮತ್ತು ಕಬಡ್ಡಿ ಕೋಚ್‌ ಆಗಿರುವ ಎಂ.ಎಲ್. ಗೋಪಿನಾಥ್ ಹೇಳುತ್ತಾರೆ. ಅಂತರ ವಿ.ವಿ ಟೂರ್ನಿಯಲ್ಲಿ ಚಾಂಪಿಯನ್ ಆದ ಮೈಸೂರು ತಂಡಕ್ಕೆ ಇವರು ಮಾರ್ಗದರ್ಶನ ನೀಡಿದ್ದರು.

ಕ್ರೀಡಾ ಕೋಟಾದಡಿ ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಇತರ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಈ ಕ್ರೀಡೆಯನ್ನು ಆಡುವರು. ಅಖಿಲ ಭಾರತ ಅಂತರ ವಿ.ವಿ ಟೂರ್ನಿ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದವರಿಗೆ ಕ್ರೀಡಾ ಕೋಟಾದಡಿ ಉತ್ತಮ ಅವಕಾಶಗಳು ದೊರೆಯುತ್ತವೆ. ಇದರಿಂದ ಹಲವರು ಕೊಕ್ಕೊ ಆಟದತ್ತ ಚಿತ್ತಹರಿಸುವರು ಎಂಬುದು ಅವರ ಅಭಿಪ್ರಾಯ. 

ದಕ್ಷಿಣ ಏಷ್ಯಾದ ಗಡಿ ದಾಟಿಲ್ಲ

ಭಾರತದಲ್ಲಿ ಜನ್ಮದಾಳಿದ ಕೊಕ್ಕೊ ಕ್ರೀಡೆ ದಕ್ಷಿಣ ಎಷ್ಯಾದ ಗಡಿ ದಾಟಿ ಮುಂದೆ ಹೋಗಿಲ್ಲ. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಕೊಕ್ಕೊಗೆ ಸ್ಥಾನ ದೊರೆತಿದೆ. ಭಾರತವನ್ನು ಹೊರತುಪಡಿಸಿದರೆ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಮಾಲ್ಡೀವ್ಸ್ ನಲ್ಲಿ ಆಡಲಾಗುತ್ತದೆ. 1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಪುಣೆಯ ತಂಡವೊಂದು ಕೊಕ್ಕೊ ಆಟದ ಪ್ರದರ್ಶನ ನೀಡಿತ್ತಲ್ಲದೆ, ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಪ್ರಜಾವಾಣಿ ಚಿತ್ರಗಳು: ಇರ್ಷಾದ್‌ ಮಹಮ್ಮದ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry