ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ: ಆರಂಭವಾಗದ ಖರೀದಿ ಕೇಂದ್ರ

ನೆರವಿಗೆ ಬಾರದ ಬೆಂಬಲ ಬೆಲೆ l ಬೆಳೆದಷ್ಟನ್ನೂ ಖರೀದಿಸಲು ರೈತರ ಆಗ್ರಹ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ / ವಿಜಯಪುರ: ‘ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ’ ಎಂಬ ಗಾದೆ ಮಾತಿನಂತಾಗಿದೆ ಕಡಲೆ ಬೆಳೆ ಬೆಳೆದ ರೈತರ ಸ್ಥಿತಿ.

ಈ ವರ್ಷ ಕಡಲೆ ಬಂಪರ್ ಫಸಲು ಬಂದಿದೆ. ಆದರೆ, ಬೆಲೆ ಇಲ್ಲ! ಕಳೆದ ವರ್ಷ ಕ್ವಿಂಟಲ್‌ಗೆ ₹6,000 ರಿಂದ ₹7,000 ಇದ್ದ ಕಡಲೆ ಬೆಲೆ ಈ ಬಾರಿ ದಿಢೀರೆಂದು ₹ 3,400ರಿಂದ ₹ 3,700ಕ್ಕೆ ಕುಸಿದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಬೆಲೆ ಕುಸಿದ ಕಾರಣಕ್ಕೆ ರಾಜ್ಯ ಸರ್ಕಾರ ಕ್ವಿಂಟಲ್‌ ಕಡಲೆಗೆ ₹4,400 ಬೆಂಬಲ ಬೆಲೆ ಘೋಷಿಸಿ, ರೈತರ ನೆರವಿಗೆ ಬರುವುದಾಗಿ ಹೇಳಿದೆ. ಆದರೆ, ಖರೀದಿ ಕೇಂದ್ರಗಳು ಆರಂಭವಾಗದ ಕಾರಣ ಅದರ ಪ್ರಯೋಜನ ರೈತರಿಗೆ ಇನ್ನೂ ಆಗಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿ ಹಲವು ಕಡೆ ಪ್ರತಿಭಟನೆಗಳು ನಡೆದಿವೆ.

‘ಧಾರವಾಡ ಜಿಲ್ಲೆಯಲ್ಲಿ ಇದುವರೆಗೂ ಮೂರು ದಿನ ಪ್ರತಿಭಟನೆ ಮಾಡಿದೆವು. ಜ.12ರಂದು ರಸ್ತೆ ತಡೆ ಮಾಡಿದಾಗ 18ರಿಂದ ಆರಂಭಿಸಲಾಗುವುದು ಎಂದು ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರು ಭರವಸೆ ನೀಡಿದ್ದರು. ಆದರೆ, ಅದು ಆಗಲಿಲ್ಲ. ಕೊನೆಗೆ ಜ.22ಕ್ಕೆ ಮತ್ತೆ ಪ್ರತಿಭಟನೆ ಮಾಡಿದೆವು. ಆಗಲೂ ಭರವಸೆ ಮಾತ್ರ ಸಿಕ್ಕಿತು. ಇದುವರೆಗೂ ಖರೀದಿ ಕೇಂದ್ರ ಮಾತ್ರ ಆರಂಭವಾಗಿಲ್ಲ’ ಎನ್ನುತ್ತಾರೆ ಅಣ್ಣಿಗೇರಿ ರೈತ ಹೋರಾಟ ಸಮಿತಿ ಕಾರ್ಯದರ್ಶಿ ಶಿವಶಂಕರ ಕಲ್ಲೂರ.

‘ಡಿಸೆಂಬರ್‌ ಮಧ್ಯದಿಂದಲೇ ಕಡಲೆ ರಾಶಿ ಆರಂಭವಾಗಿದ್ದು, ಮುಕ್ಕಾಲು ಪ್ರದೇಶದ ಕಟಾವು ಪೂರ್ಣಗೊಂಡಿದೆ. ಸೂಕ್ತ ಬೆಲೆ ಸಿಗದ ಕಾರಣ ಕೆಲವು ರೈತರು ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಾಲಗಾರರ ಕಾಟ ಇರುವ ರೈತರಿಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಕನಿಷ್ಠ ಖರೀದಿ ಕೇಂದ್ರವನ್ನು ಆರಂಭಿಸಿದರೆ ಕಡಿಮೆ ನಷ್ಟ ಆಗಲಿದೆ. ಇಲ್ಲದಿದ್ದರೆ ದೊಡ್ಡ ಸಮಸ್ಯೆಯೇ ಆಗಲಿದೆ’ ಎನ್ನುತ್ತಾರೆ ಅವರು.

ಮಿತಿಗೆ ವಿರೋಧ: ಪ್ರತಿ ರೈತರಿಂದ ಕೇವಲ 10 ಕ್ವಿಂಟಲ್‌ ಕಡಲೆ ಮಾತ್ರ ಬೆಂಬಲ ಬೆಲೆ ಕೊಟ್ಟು ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಡಲೆ ಬೆಳೆದಿರುವ ದಾಖಲೆ ನೀಡಿದರೆ, ಬೆಳೆದಷ್ಟನ್ನೂ ಖರೀದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

8 ಲಕ್ಷ ಟನ್‌ ಉತ್ಪನ್ನ: ‘ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು, ಗದಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಯ 13.63 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬೆಳೆಯಲಾಗಿದೆ. 8 ಲಕ್ಷ ಟನ್‌ ಉತ್ಪನ್ನ ದೊರೆತಿದೆ’ ಎಂದು ವಿಜಯಪುರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ಮಾಹಿತಿ ನೀಡಿದರು.

‘ಕ್ವಿಂಟಲ್‌ ಕಡಲೆಗೆ ಕನಿಷ್ಠ ₹6,000 ಸಿಕ್ಕರೆ ರೈತರು ನಿರಾಳ. ಇದಕ್ಕಿಂತ ಕಡಿಮೆಯಾದರೆ ಕಷ್ಟಕ್ಕೆ ಸಿಲುಕುತ್ತಾರೆ. ವಾರ್ಷಿಕ 1.69 ಲಕ್ಷ ಟನ್‌ ವಿದೇಶಕ್ಕೆ ರಫ್ತಾಗುತ್ತದೆ. ಆದರೆ ಈಚೆಗೆ ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ವಿದೇಶಗಳಲ್ಲಿಯೂ ಬೇಡಿಕೆ ಕಡಿಮೆ ಆಗಿದೆ’ ಎಂದು ಅವರು ಹೇಳಿದರು.

‘ಮ್ಯಾನ್ಮಾರ್‌, ಆಫ್ರಿಕಾ ದೇಶಗಳಿಂದ ಕಡಲೆ ಆಮದಾಗಿದೆ. ನಮ್ಮಲ್ಲೂ ಫಸಲು ಚೆನ್ನಾಗಿ ಬಂದಿದೆ. ಬಜಾರ್‌ನಲ್ಲಿ ಕೇಳುವವರೇ ಇಲ್ಲದಿರುವುದರಿಂದ ಧಾರಣೆ ಸಹಜವಾಗಿ ಕುಸಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಲಾಭವಿಲ್ಲದಂತಾಗಿದೆ’ ಎಂದು ವಿಜಯಪುರ ಎಪಿಎಂಸಿ ಮಾರುಕಟ್ಟೆ ವ್ಯಾಪಾರಿ ಸಿದ್ದಯ್ಯ ವಂದಾಲಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT