7
ಕಾಂಗ್ರೆಸ್‌ ಸೋಲಿಸಲು ಹೊಸ ಸೂತ್ರ

ಮುಸ್ಲಿಮರು ಪ್ರಾಬಲ್ಯ ಇರುವ ಮತಕ್ಷೇತ್ರಗಳಲ್ಲಿ ಒಳ ಮೈತ್ರಿ: ಒವೈಸಿ ಜತೆ ಸಖ್ಯಕ್ಕೆ ಮುಂದಾದ ಬಿಜೆಪಿ?

Published:
Updated:
ಮುಸ್ಲಿಮರು ಪ್ರಾಬಲ್ಯ ಇರುವ ಮತಕ್ಷೇತ್ರಗಳಲ್ಲಿ ಒಳ ಮೈತ್ರಿ: ಒವೈಸಿ ಜತೆ ಸಖ್ಯಕ್ಕೆ ಮುಂದಾದ ಬಿಜೆಪಿ?

ಬೆಂಗಳೂರು: ಮುಸ್ಲಿಮರ ಮತಗಳು ನಿರ್ಣಾಯಕವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಒವೈಸಿ ಜತೆ ಒಳ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.

ಸ್ವಲ್ಪ ಶ್ರಮ ಹಾಕಿದರೆ ಗೆಲುವು ಸಾಧಿಸಬಹುದಾದ ಸುಮಾರು 30 ಕ್ಷೇತ್ರಗಳಲ್ಲಿ ಒವೈಸಿ ಜತೆ ಸಖ್ಯ ಬೆಳೆಸಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪರ ಇರುವ ಮುಸ್ಲಿಮರ ಮತಗಳನ್ನು ವಿಭಜಿಸುವ ಲೆಕ್ಕಾಚಾರ ಇದರ ಹಿಂದಿದೆ. ಹೀಗೆ ಮಾಡಿದಲ್ಲಿ ಅತಿ ಕಡಿಮೆ (1,000ದಿಂದ 2000) ಮತಗಳ ಅಂತರದಿಂದ ಗೆಲುವು ಸಾಧಿಸಲು ಸುಲಭವಾಗುತ್ತದೆ. ಉತ್ತರ ಪ್ರದೇಶದಲ್ಲಿ ಇಂತಹ ಪ್ರಯೋಗ ಯಶಸ್ವಿಯಾಗಿತ್ತು. ಕರ್ನಾಟಕದಲ್ಲಿ ‘ಮಿಷನ್–150’ ಗುರಿ ಸಾಧಿಸಬೇಕಾದರೆ ಮತ ವಿಭಜನೆಯ ತಂತ್ರ ಬೆಳೆಸುವುದು ಸೂಕ್ತ ಎಂಬ ಆಲೋಚನೆ ಪಕ್ಷದ ವರಿಷ್ಠರದ್ದಾಗಿದೆ.

ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ಕೆಲವು ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಲವಿಲ್ಲ. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರವಾದ ಅಲೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೂತ್ ಮಟ್ಟದ ಸಮಿತಿಯನ್ನು ಬಲಪಡಿಸಿ, ಮತದಾರರ ಒಲವು ಗಳಿಸಿಕೊಳ್ಳಲು ಸಾಧ್ಯವಾದರೆ ಗೆಲುವು ಸಾಧಿಸಬಹುದು ಎಂಬ ಅಭಿ

ಪ್ರಾಯ ಪಕ್ಷದ ವರಿಷ್ಠರ ಮಧ್ಯೆ ನಡೆದ ಚರ್ಚೆಯಲ್ಲಿ ವ್ಯಕ್ತವಾಗಿತ್ತು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಸೂತ್ರ ಸಿದ್ಧ ಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ಉತ್ತರ’ದ ಪ್ರಯೋಗ: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಉತ್ತರ ಪ್ರದೇಶದ ಮಾದರಿಯನ್ನು ಬಿಜೆಪಿಗೆ ಅನುಸರಿಸುತ್ತಿದೆ. ಅದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಅನೇಕ ಸಭೆಗಳಲ್ಲಿ ಪ್ರತಿಪಾದಿಸಿದ್ದಾರೆ.

ಬೂತ್ ಮಟ್ಟದ ಸಮಿತಿ ರಚನೆ, ವಿಸ್ತಾರಕ್ ಕಾರ್ಯಕ್ರಮ, ವಿಸ್ತಾರಕ್ ಎಂದು ನೋಂದಾಯಿಸಿದ ಕಾರ್ಯಕರ್ತರಿಗೆ ಬೈಕ್‌ ವಿತರಣೆ, ಪ್ರಚಾರ ಸಮಿತಿ ಇವು ಉತ್ತರ ಪ್ರದೇಶದ ಕೆಲವು ಮಾದರಿಗಳಾಗಿವೆ. ಅಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್–ಸಮಾಜವಾದಿ ಪಕ್ಷದ ಮೈತ್ರಿ ಕೂಟದ ಎದುರು ಬಿಜೆಪಿಗೆ ಗೆಲುವು ಕಷ್ಟ ಎಂಬಂತಿದ್ದ 30 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧಿಸಿತ್ತು. ಈ ಪೈಕಿ 19 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಪ್ರಯೋಗವನ್ನು ಕರ್ನಾಟಕದಲ್ಲೂ ನಡೆಸುವ ಬಗ್ಗೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಒಳ ಮೈತ್ರಿ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅಥವಾ ಜಿಲ್ಲಾಧ್ಯಕ್ಷರಿಗೆ ನೀಡಲಾಗುತ್ತದೆ ಎಂದೂ ಮೂಲಗಳು ವಿವರಿಸಿವೆ.

ಈಗಾಗಲೇ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ಈ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಶಾಂತಿನಗರ, ಚಾಮರಾಜಪೇಟೆ, ಪುಲಿಕೇಶಿನಗರ, ಶಿವಾಜಿನಗರ, ಹೆಬ್ಬಾಳ, ಸರ್ವಜ್ಞ ನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರಗಳು ಈ ಪಟ್ಟಿಯಲ್ಲಿವೆ. ಮೈಸೂರು, ತುಮಕೂರು ಜಿಲ್ಲೆಗಳು ಸದ್ಯಕ್ಕೆ ಪರಿಗಣನೆಯಲ್ಲಿವೆ.

ಕಾಂಗ್ರೆಸ್‌ ಪ್ರತಿತಂತ್ರ

ನವದೆಹಲಿ: ‘ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ 60 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಮುಸ್ಲಿಮರ ಮತಗಳನ್ನು ಒಡೆಯುವ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂನ ತಂತ್ರವನ್ನು ವಿಫಲಗೊಳಿಸುತ್ತೇವೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ‘ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಒವೈಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry