ಸಮಗ್ರ ಮೀನುಗಾರಿಕಾ ನೀತಿಗೆ ಒತ್ತಾಯ

7

ಸಮಗ್ರ ಮೀನುಗಾರಿಕಾ ನೀತಿಗೆ ಒತ್ತಾಯ

Published:
Updated:
ಸಮಗ್ರ ಮೀನುಗಾರಿಕಾ ನೀತಿಗೆ ಒತ್ತಾಯ

ಉಡುಪಿ: ಮತ್ಸ್ಯ ಸಂಪತ್ತು ನಾಶವಾಗುತ್ತಿದೆ. ಮೀನುಗಾರಿಕ ಮುಖಂಡರೆಲ್ಲಾ ಒಂದಾಗಿ ಚರ್ಚಿಸಿ, ಬೇಡಿಕೆ ಪಟ್ಟಿಯನ್ನು ಒಂದು ವಾರದ ಒಳಗೆ ಸಿದ್ಧಪಡಿಸಿ ಅದನ್ನು ಮುಂದಿನ ಬಜೆಟ್‌ನಲ್ಲಿ ಮೀನುಗಾರಿಕಾ ಸಮಗ್ರ ನೀತಿಯಾಗಿ ಘೋಷಿಸಲು ಮುಖ್ಯಮಂತ್ರಿ ಹಾಗೂ ಮೀನುಗಾರಿಕ ಸಚಿವರಿಗೆ ಒತ್ತಾಯ ಮಾಡಲಾಗುತ್ತದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್‌ ಭರವಸೆ ನೀಡಿದ್ದಾರೆ.

ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೋಗವೀರರ ಯುವ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಗುರಿಕಾರಿಕ ಸಮಾವೇಶ, ಗೌರವಧನ ವಿತರಣೆ ಹಾಗೂ ಮತ್ಸ್ಯ ಜ್ಯೋತಿ ಮೀನುಗಾರ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಕಾರವಾರದಿಂದ ಉಪ್ಪಳದವ ರೆಗಿನ ಕರಾವಳಿ ಭಾಗದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿ ಮಾಡುವ ಅಗತ್ಯವಿದೆ. ವಿವಿಧ ಹೋಬಳಿಗಳ ಮುಖಂಡರು ಒಂದಾಗಿ ಮೀನುಗಾರಿಕೆ ಅಗತ್ಯವಿರುವ ಬಲೆ ಕಣ್ಣು, ಪಂಪ್‌, ಮೋಟಾರ್, ಬುಲ್‌ಟ್ರಾಲ್, ಬೋಟಿನ ಅಳತೆ ಹಾಗೂ ಇತರ ಬೇಡಿಕೆಗಳ ಕ್ರೋಡೀಕರಿಸಿ ಮನವಿ ನೀಡಿ. ಅದನ್ನು ಸರ್ಕಾರದ ಮಟ್ಟದಲ್ಲಿ ಜಾರಿಗೆ ತರುವಂತಾಗಬೇಕು. ಈ ಮೂಲಕ ಮುಂದಿನ ತಲೆಮಾರಿಗೆ ಮತ್ಸ್ಯಕ್ಷಾಮ ತಲೆದೊರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಯುವ ಸಂಘಟನೆ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೊಗವೀರರ ಯುವ ಸಂಘಟನೆಗಳು ಈಗಾಗಲೇ ಜಿಲ್ಲೆಯಲ್ಲಿ ಸುಮಾರು 1ಲಕ್ಷ ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಬೈಂದೂ ರಿನಿಂದ ಹೆಜಮಾಡಿವರೆಗೆ ಅಪಘಾತಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಸಂಘಟನೆ ವತಿ ಯಿಂದ ಹಮ್ಮಿಕೊಳ್ಳಲಾಗುವುದು ಎಂದರು.

ಮಂದಾರ್ತಿ ಅಕ್ಕು ಮರಕಾಲ್ತಿ, ಕೋಟ ನಾಗು ಮರಕಾಲ್ತಿ, ಕುಂದಾಪುರ ನಾಗಮ್ಮ, ಕೋಟೇಶ್ವರದ ಚಂದು, ಬೈಂದೂರು ವೆಂಕಮ್ಮ, ಉದ್ಯಾವರ ಸುಂದರಿ ಬಂಗೇರ, ಉಪ್ಪೂರು ಗಿರಿಜಾ ಮೈಂದನ್, ಬ್ರಹ್ಮಾವರ ಕಮಲಾ ಕುಂದರ್, ಮಂಗಳೂರು ಲಲಿತಾ ಸಾಲ್ಯಾನ್‌ ಮತ್ತು ಯಶೊಧ ಅವರಿಗೆ ಮತ್ಸ್ಯ ಜ್ಯೋತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಗ್ವಾಡಿ ಹೋಬಳಿಯ ಬೀಜಾಡಿ ಕೂಡಿಗೆಯ ಬಸವ ಗುರಿಕಾರ, ಬಾರ್ಕೂರು ಹೋಬಳಿಯ ಬಜೆ ಮೇಲ್ಸಾಲು ಮೊಗವೀರ ಗ್ರಾಮ ಸಭಾ, ಉಚ್ಚಿಲ- ಮಂಗಳೂರು ಹೋಬಳಿಯ ಜನಾರ್ದನ ಗುರಿಕಾರ ಅವರನ್ನು ಸನ್ಮಾನಿಸಲಾಯಿತು.

ಮೋಗವೀರ ಸಂಘದ ಅಧ್ಯಕ್ಷ ವಿನಯ ಕರ್ಕೇರ, ಉಚ್ಚಿಲ ಅಧ್ಯಕ್ಷ ಎಚ್.ಗಂಗಾಧರ್‌ ಕರ್ಕೇರ, ಬಗ್ವಾಡಿ ಹೋಬಳಿ ಶಾಖಾಧ್ಯಕ್ಷ ಕೆ.ಕೆ ಕಾಂಚನ್, ಬಾರಕೂರು ವಿಶ್ವನಾಥ್‌ ಮಾಸ್ತರ್‌,ಗಣೇಶ್ ಕಾಂಚನ್‌, ಉದ್ಯಮಿ ಟಿ.ವೆಂಕಟೇಶ್ ಉಪ ಸ್ಥಿತರಿದ್ದರು.

ಪರಿಶಿಷ್ಟ ಪಂಗಡಕ್ಕೆ ಸೇರಿಸಿ

39 ಉಪಜಾತಿಗಳನ್ನು ಒಳಗೊಂಡ ಮೊಗವೀರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಇದರಿಂದ ಜನಾಂಗಕ್ಕೆ ವಿದ್ಯೆ, ಉದ್ಯೋಗಗಳಲ್ಲಿ ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬಿಜೆಪಿಯ ಮುಖಂಡರು ಕೇಂದ್ರ ಸರಕಾರಕ್ಕೆ ಒತ್ತಡ ತರಬೇಕು. ಕಾಂಗ್ರೆಸ್, ಬಿಜೆಪಿ ಈ ಬಾರಿಯ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಬೇಕು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್‌ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry