ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು

7

ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು

Published:
Updated:
ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು

ಕಾಸ್‌ಗಂಜ್‌(ಉತ್ತರ ಪ್ರದೇಶ): ಗಣರಾಜ್ಯೋತ್ಸವ ದಿನದಂದು ಎರಡು ಕೋಮಿನ ಗುಂಪುಗಳ ನಡುವೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ್‌ಗಂಜ್‌ ಜಿಲ್ಲಾ ಪೊಲೀಸರು 81 ಜನರನ್ನು ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡೂ ಧರ್ಮಗಳ ಬಂಧಿತರ ಕುಟುಂಬದವರು ಒಟ್ಟಾಗಿ ಸೇರಿ ಬಿಡುಗಡೆಗೆ ಆಗ್ರಹಿಸಿದರು. ಇದು ಮಾನವೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಹೆಚ್ಚಿನವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೊಳಗಾಗಿರುವ ಎರಡೂ ಧರ್ಮದವರ ಕುಟುಂಬದವರು ಬಿಡುಗಡೆಗಾಗಿ ಆಗ್ರಹಿಸಿ ಠಾಣೆ ಎದುರು ಜಮಾಯಿಸಿದ್ದಾರೆ.

ಸದ್ಯ ಈ ಸಂಬಂಧ ಬಂಧನಕ್ಕೊಳಗಾಗಿರುವ ರೈಲ್ವೆ ಪಾಠಕ್‌ ಕಾಲೊನಿಯ ಕೂಲಿ ಕಾರ್ಮಿಕ ಮತೀನ್‌ ಖಾನ್‌(27) ಅವರ ತಾಯಿ ಜಮೀನಿ ಬೇಗಂ ಹಾಗೂ 18 ವರ್ಷದ ಹಿಂದೂ ಯುವಕ ಜೋಗಿಂದರ್‌ ಅವರ ತಾಯಿ ರಮಾದೇವಿ ಅವರು ಅಕ್ಕಪಕ್ಕದಲ್ಲಿ ಕುಳಿತು ತಮ್ಮ ಮಕ್ಕಳ ಬಿಡುಗಡೆಗಾಗಿ ಆಗ್ರಹಿಸಿದರು.

‘ಮನೆಯ ಹೊರಗೆ ನಿಂತು ಹಲ್ಲು ಉಜ್ಜುತ್ತಿದ್ದ ಮತೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅವನನ್ನು ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಬಂಧಿಸಲಾಗಿದೆ. ಅವನ ಬಿಡುಗಡೆಗಾಗಿ ನಾನಿಲ್ಲಿ ಕಾಯುತ್ತಿದ್ದೇನೆ’ ಎಂದು ಪೊಲೀಸ್ ಠಾಣೆಯ ಹೊರಗಡೆಯ ಪಾದಾಚಾರಿ ರಸ್ತೆಯ ಮೇಲೆ ಕುಳಿತ್ತಿದ್ದ ಮತೀನ್‌ ತಾಯಿ ಬೇಗಂ ಭಾನುವಾರ ಹೇಳಿದ್ದಾರೆ.

ಪಕ್ಕದಲ್ಲೇ ಕುಳಿತಿದ್ದ ರಮಾದೇವಿ ಅವರು, ‘ನನ್ನ ಮಗನಿಗೂ ಘಟನೆಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.

ಮತ್ತೊಬ್ಬ ಬಂಧಿತನ ತಾಯಿ ಸುನೀತಾ ದೇವಿ, ‘ಎಲ್ಲವೂ ಇಲ್ಲೇ ಇರುವಾಗ ಇಲ್ಲಿಂದ ಹೇಗೆ ತೆರಳುವುದು’ ಹೇಳಿದ್ದಾರೆ. ತಮ್ಮ ಮಗನ ಆಧಾರ್‌ ಕಾರ್ಡ್‌ ಅನ್ನು ಪತ್ರಕರ್ತರಿಗೆ ತೋರಿಸಿದ ಅವರು ‘ನನ್ನ ಮಗ ಟ್ಯೂಷನ್‌ ಕ್ಲಾಸ್‌ ಮುಗಿಸಿ ಬರುವಾಗ ಬಂಧಿಸಲಾಗಿದೆ. ಆತ ವಿದ್ಯಾರ್ಥಿಯಾಗಿದ್ದು ಈ ಘಟನೆಗೂ ಅವನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.

ಕಾಸ್‌ಗಂಜ್‌ ಹಿಂಸಾಚಾರ: ಇಂಟರ್‌ನೆಟ್‌ ಸೇವೆ ಸ್ಥಗಿತ, ನಿಷೇಧಾಜ್ಞೆ ಜಾರಿ

‘ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನನಗೂ ಗಲಭೆಗೂ ಯಾವುದೇ ಸಂಬಂಧವಿಲ್ಲ’ ಎಂದು ಸದ್ಯ ಬಂಧನದಲ್ಲಿರುವ ಮೊಹಮದ್‌ ನಾಸೀರುದ್ದಿನ್‌(70) ನೋವಿನಿಂದ ಕಣ್ಣೀರು ಹಾಕಿದರು. ಅವರಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ 22 ವರ್ಷದ ಮಗ ಅಕ್ರಮ್‌ಗೆ ಸುಮ್ಮನೆ ನಿಲ್ಲುವಂತೆ ಹಾಗೂ ತಂದೆಯೊಂದಿಗೆ ವ್ಯವಹರಿಸದಂತೆ ತಾಕೀತು ಮಾಡಿರುವುದೂ ವರದಿಯಾಗಿದೆ.

ಸ್ವಲ್ಪ ಸಮಯದ ನಂತರ ಹೊರಗಿದ್ದವರೆಲ್ಲ ಆಹಾರದ ಪೊಟ್ಟಣಗಳನ್ನಿಡಿದು ಠಾಣೆಯತ್ತ ಮುನ್ನಡೆದರು. ಈ ವೇಳೆ ಸಣ್ಣ ಪ್ರಮಾಣದ ಗದ್ದಲ ಉಂಟಾಗಿತ್ತು. ಇದರಿಂದ ಎಚ್ಚೆತ್ತ ಠಾಣಾಧಿಕಾರಿ ಸಂಬಂಧಿಕರನ್ನು ಅಲ್ಲಿಂದ ಕಳುಹಿಸುವಂತೆ ಸಿಬ್ಬಂದಿಗೆ ಆದೇಶಿಸಿದರು. ಮತ್ತೆ ಅವರೆಲ್ಲ ಮೊದಲಿದ್ದ ಸ್ಥಳದತ್ತ ತೆರಳಿದರು.

ಸಂಪೂರ್ಣ ಘಟನೆ ಬಗ್ಗೆ ಮಾತನಾಡಿದ ಗುಂಪಿನಲ್ಲಿದ್ದ ಹಿರಿಯ ಮಹಿಳೆಯೊಬ್ಬರು, ‘ಏನೇ ತಪ್ಪಾಗಿರಲಿ, ಆದರೆ ಅದಕ್ಕಾಗಿ ಎಲ್ಲರೂ ಯಾಕೆ ಬೆಲೆತೆರಬೇಕು’ ಎಂದು ಪ್ರಶ್ನಿಸಿದ್ದಾರೆ.

ಪ್ರಕರಣ

ಗಣರಾಜ್ಯೋತ್ಸವ ದಿನದಂದು(ಶುಕ್ರವಾರ) ಕಾಸ್‌ಗಂಜ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ)ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ 16 ವರ್ಷ ವಯಸ್ಸಿನ ಚಂದನ್‌ಗುಪ್ತಾ ಮೃತಪಟ್ಟಿದ್ದರು ಹಾಗೂ ಗಲಭೆಯಲ್ಲಿ ಇಬ್ಬರು ಗಾಯಗೊಂಡಿದ್ದರು.

ಮಥುರಾ–ಬರೇಲಿ ಹೆದ್ದಾರಿಯಲ್ಲಿ ಆಯೋಜಿಸಲಾಗಿದ್ದ ಬೈಕ್‌ ರ‍್ಯಾಲಿಯಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ಜಟಾಪಟಿ ಸೃಷ್ಟಿಯಾಗಿ ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿತ್ತು.

ಕಾಸ್‌ಗಂಜ್‌ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು -ಗವರ್ನರ್ ರಾಮ್‌ ನಾಯ್ಕ್‌

ಶನಿವಾರ ಹಿಂಸಾಚಾರ ಭುಗಿಲೆದ್ದಿತ್ತು. ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಲಾಗಿತ್ತು.

ಆದ್ದರಿಂದ ಭಾನುವಾರ ಇಲ್ಲಿ ಸಿ, ಐಪಿಸಿ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡುವುದರ ಜತೆಗೆ ರಾತ್ರಿ 10ರ ವರೆಗೂ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆರ್‌ಪಿ ಸಿಂಗ್‌ ಆದೇಶಿಸಿದ್ದರು.

ಹತ್ಯೆ ಹಾಗೂ ಗಲಭೆಗೆ ಪ್ರಚೋದನೆ, ಬಸ್‌ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಕಾನೂನು–ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿರುವ ಕಾರಣ ಶನಿವಾರ ಉತ್ತರ ಪ್ರದೇಶ ಪೊಲೀಸರು ಹಲವರನ್ನು ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry