ಅಣಬೆ ಕೃಷಿಯ ‘ರಾಜ’

7

ಅಣಬೆ ಕೃಷಿಯ ‘ರಾಜ’

Published:
Updated:
ಅಣಬೆ ಕೃಷಿಯ ‘ರಾಜ’

‘ನಮ್ಮದು ಸಂಪ್ರದಾಯಸ್ಥ ಕುಟುಂಬ. ಅಣಬೆಯನ್ನು ಹತ್ತಿರವೂ ಸೇರಿಸಲ್ಲ. ಅಂಥದ್ದರಲ್ಲಿ ನಾನು ಏಳೆಂಟು ವರ್ಷದವನಿದ್ದಾಗ ನಮ್ಮ ಪರಿಚಯದವರೊಬ್ಬರು ಬೆಳೆದಿದ್ದ ಅಣಬೆಯನ್ನು ಕುತೂಹಲದಿಂದ ನೋಡಲು ಹೋಗುತ್ತಿದ್ದೆ. ಅದೇ ಅಣಬೆ ನನ್ನ ಜೀವನದ ಉದ್ಯೋಗವಾಗುತ್ತೆಂದು ನಾನಾಗ ಯೋಚಿಸಿರಲಿಲ್ಲ. ಇಂದು ನಾನು ಗಳಿಸಿದ್ದು, ಹೆಸರು ಪಡೆದಿದ್ದು ಎಲ್ಲವೂ ಇದೇ ಅಣಬೆಯಿಂದ....’

ತಮ್ಮ ಮನೆಯ ಮಾಳಿಗೆಯಲ್ಲಿ ಬಿದಿರಿನ ಅಟ್ಟಣಿಗೆ (ರ್‍ಯಾಕ್‌) ಮೇಲೆ ಜೋಡಿಸಿಟ್ಟ ಅಣಬೆ ಬೇಸಾಯದ ಬ್ಯಾಗ್‌ಗಳ ಮುಂದೆ ನಿಂತು ರಾಜಾ ಎಲ್‌. ದುರ್ಗ ಹೇಳುತ್ತ ಹೋದರು. ಅಣಬೆ ಬೇಸಾಯದಲ್ಲಿ ಏಳು ಬೀಳುಗಳನ್ನು ದಾಟಿ ಹೇಗೆ ಲಾಭದ ದಾರಿ ಹುಡುಕಿಕೊಂಡರು ಎಂಬುದನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.

ಅಣಬೆ ಬೇಸಾಯವನ್ನು ಕೈ ಹಿಡಿಯುವ ಮೊದಲು ರಾಜಾ ಅವರು ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕಲ್‌ ಶಾಪ್‌ ಇಟ್ಟುಕೊಂಡಿದ್ದರಂತೆ. ತಂದೆಯವರ ಅನಾರೋಗ್ಯದ ಕಾರಣ ಅದನ್ನು ಮುಂದುವರಿಸಲಾಗಲಿಲ್ಲ. ಮನೆಯಲ್ಲಿದ್ದುಕೊಂಡೇ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿದರು. ಆಗ ಹೊಳೆದದ್ದು ಅಣಬೆ ಬೇಸಾಯ.

ಧಾರವಾಡದ ಮಾಳಮಡ್ಡಿಯಲ್ಲಿ ಓಂ ಶ್ರೀ ಸತ್ಯಸಾಯಿ ಆಯಿಸ್ಟರ್‌ ಮಶ್ರೂಮ್‌ ಎಂಬ ನೋಂದಾಯಿತ ಸಂಸ್ಥೆ ಮೂಲಕ ರಾಜಾ ಅಣಬೆ ಬೇಸಾಯ ನಡೆಸುತ್ತಿದ್ದಾರೆ. ಇವರು ಬೆಳೆಯುವ ಅಣಬೆಗೆ ರಾಜ್ಯವಲ್ಲದೆ ಮಧ್ಯಪ್ರದೇಶ, ದಕ್ಷಿಣ ಭಾರತದ ಇತರ ರಾಜ್ಯಗಳಿಂದಲೂ ಭಾರಿ ಬೇಡಿಕೆ ಇದೆ. ‘ಅಣಬೆ ಬೇಸಾಯ ಯಾರು ಬೇಕಾದರೂ ಮಾಡಬಹುದು. ಆದರೆ, ಮಾರುಕಟ್ಟೆ ವಿಚಾರದಲ್ಲಿ ಸೋಲುತ್ತಾರೆ’ ಎಂದು ಹೇಳುತ್ತಾರೆ. ಆರಂಭದ ಮೂರು ವರ್ಷ ಮಾರುಕಟ್ಟೆ ವಿಚಾರದಲ್ಲಿ ಸೋಲುಕಂಡ ರಾಜಾ ನಂತರದ ವರ್ಷದಿಂದ ಅಣಬೆ ಕೃಷಿಯಲ್ಲಿ ನಷ್ಟವೆಂಬ ಮಾತನ್ನು ಮೂಟೆಕಟ್ಟಿ ಮೂಲೆಗೆಸೆದರು. ಲಾಭದ ಹಾದಿಯಲ್ಲೇ ಸಾಗುತ್ತ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡುಕೊಂಡರು.

(ಕೊಯ್ಯಲು ಸಿದ್ಧವಾಗಿರುವ ಆಯಿಸ್ಟರ್‌ ಅಣಬೆ)

ಅಣಬೆ ಕೃಷಿಯ ಬಗ್ಗೆ ಅಗತ್ಯ ತರಬೇತಿ ಪಡೆದುಕೊಂಡು 1983ರಲ್ಲಿ ಮನೆಯ ಮಾಳಿಗೆಯಲ್ಲೇ ಅಣಬೆ ಕೃಷಿಯನ್ನು ಆರಂಭಿಸಿದರು. ಅಂದುಕೊಂಡಂತೆ ಆಯಿಸ್ಟರ್‌ ಅಣಬೆಯನ್ನು ಬೆಳೆದರು. ಆದರೆ ಖರೀದಿಸುವವರು ಬೇಕಲ್ಲ? ಫ್ರಿಜ್‌ನಿಂದ ಹೊರಗೆ ಎರಡು ದಿನಗಳಿಗಿಂತ ಹೆಚ್ಚು ಇಡುವಂತಿಲ್ಲ! ಹೀಗಿರುವಾಗ ಕೈಸೇರುತ್ತಿದ್ದ ಅಣಬೆಯಲ್ಲಿ ಅರ್ಧದಷ್ಟು ಖರೀದಿಸುವವರಿಲ್ಲದೆ ಹಾಳಾಗಿ ಹೋಗುತ್ತಿತ್ತು. ಹೀಗೆ ನಡೆದಿದ್ದು ಒಂದೆರಡು ತಿಂಗಳಲ್ಲ. ಬರೋಬ್ಬರಿ ಮೂರು ವರ್ಷ! ಆದರೂ ಅಣಬೆ ಬೆಳೆಯುವುದನ್ನು ರಾಜಾ ಅವರು ಕೈಬಿಡಲಿಲ್ಲ. ಛಲಕ್ಕೆ ಬಿದ್ದು ಮಾರುಕಟ್ಟೆಯನ್ನು ಕಂಡುಕೊಂಡರು. ಅಲ್ಲಿಂದ ಅವರ ಕೈಯನ್ನು ಅಣಬೆ ಹಿಡಿಯಿತು. ತಿಂಗಳಿಗೆ ಲಕ್ಷದವರೆಗೂ ಆದಾಯ ಎಣಿಸಲು ಆರಂಭಿಸಿರು.

ಈ ಯಶಸ್ಸು ರಾಜಾ ಅವರಿಗೆ ಅಷ್ಟು ಸುಲಭದಲ್ಲಿ ದಕ್ಕಿದ್ದಲ್ಲ. ಅಣಬೆಯನ್ನು ಬೇಕಾಬಿಟ್ಟಿಯಾಗಿ ಬೆಳೆಯದೆ ಅದನ್ನು ಯೋಜಿತ ರೀತಿಯಲ್ಲಿ ಬೆಳೆಯಬೇಕು. ಒಂದೇ ಬಾರಿಗೆ ಅಣಬೆ ಕೈಸೇರುವ ಬದಲು ಪ್ರತಿನಿತ್ಯವೂ ಒಂದಷ್ಟು ಪ್ರಮಾಣದಲ್ಲಿ ತಾಜಾ ಅಣಬೆ ಕಟಾವಿಗೆ ಬರುತ್ತಿದ್ದರೆ ಮಾರಾಟಕ್ಕೆ ಅನುಕೂಲ. ಅದೇ ರೀತಿಯಲ್ಲಿ ಬೆಳೆ ಬರುವಂತೆ ಕೃಷಿ ರೂಪಿಸಿದರು. ಪ್ರತಿನಿತ್ಯ ಮೂರು ಬ್ಯಾಗುಗಳು ತುಂಬುವಷ್ಟು ಅಣಬೆ (5–6 ಕೆ.ಜಿ.) ಕೊಯ್ಲು ಮಾಡುತ್ತಾರೆ. ಒಂದು ಕೆ.ಜಿ. ಆಯಿಸ್ಟರ್‌ ಅಣಬೆಗೆ 350 ದರವಿದೆ ಎನ್ನುತ್ತಾರೆ ರಾಜಾ ಅವರು.

ತಾಜಾ ಅಣಬೆಗಳನ್ನು ಮಾತ್ರವಲ್ಲದೆ ಒಣ ಅಣಬೆಯ ಮಾರುಕಟ್ಟೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಮಾರ್ಚ್‌ನಿಂದ ಮೇವರೆಗಿನ ಅವಧಿಯಲ್ಲಿ ಅಣಬೆಯನ್ನು ಒಣಗಿಸಿ, ಸಂಸ್ಕರಿಸಿ ಮಾರುತ್ತಾರೆ. ಒಂದು ಕೆ.ಜಿ. ಒಣ ಅಣಬೆಗೆ ₹3,500 ದರವಿದೆ. ಜತೆಗೆ ಅಣಬೆ ಪುಡಿಯನ್ನು ಮಾಡಿ ಮಾರಾಟ ಮಾಡುತ್ತಾರೆ. ಕ್ಯಾನ್ಸರ್‌ಗೆ ಅಣಬೆ ಔಷಧಿಯ ಆಹಾರ ಎನಿಸಿದ್ದರಿಂದ ವೈದ್ಯರ ಶಿಫಾರಸ್ಸು ಪತ್ರವಿದ್ದಲ್ಲಿ ಮಾತ್ರ ಅಂಥವರಿಗೆ ಅಣಬೆ ಪುಡಿಯನ್ನು ನೀಡುತ್ತಾರೆ.

ಅಣಬೆ ಬೆಳೆಯುವುದಷ್ಟೆ ಅಲ್ಲದೆ ಅಣಬೆ ಬೇಸಾಯದ ತರಬೇತಿಯನ್ನು ರಾಜಾ ಅವರು ನೀಡುತ್ತಿದ್ದಾರೆ. ಈಗಾಗಲೇ 1500ಕ್ಕೂ ಹೆಚ್ಚು ಜನ ಇಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 500ಕ್ಕೂ ಹೆಚ್ಚು ಮಂದಿ ಅಣಬೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕನ್ನಡ ಮಾಧ್ಯಮದವರಿಗೆ ಮೂರು ದಿನ, ಇಂಗ್ಲಿಷ್ ಮಾಧ್ಯಮದವರಿಗೆ ಎರಡು ದಿನಗಳ ತರಬೇತಿ ಇರಲಿದೆ. ಇಲ್ಲಿ ತರಬೇತಿ ಪಡೆದವರಿಗೆ ನೀಡಲಾಗುವ ಪ್ರಮಾಣಪತ್ರದ ಮೇಲೆ ಅಣಬೆ ಕೃಷಿಗಾಗಿ ಬ್ಯಾಂಕ್‌ ಸಾಲಸೌಲಭ್ಯ ಸಿಗುವುದು ವಿಶೇಷ. ಅಣಬೆ ಬೀಜವನ್ನೂ ಸ್ವತಃ ತಯಾರಿಸಿಕೊಳ್ಳುತ್ತಾರೆ. ಅಗತ್ಯವಿದ್ದವರಿಗೆ ಕೆ.ಜಿ.ಯೊಂದಕ್ಕೆ ₹270ರಂತೆ (ಪ್ರಸ್ತುತ ದರ) ಅಣಬೆ ಬೀಜಗಳನ್ನು ನೀಡುತ್ತಾರೆ. ಒಂದು ಕೆ.ಜಿ ಅಣಬೆ ಬೀಜದಿಂದ 500 ಗ್ರಾಂ ತೂಕದ ಭತ್ತದ ಹುಲ್ಲಿನಿಂದ ಸಿದ್ಧಪಡಿಸುವ 9 ಬ್ಯಾಗುಗಳನ್ನು ತಯಾರಿಸಬಹುದು. ಇವರು ತಮ್ಮ ಅಣಬೆ ಕೃಷಿಯ ಅನುಭವವನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪಾಠವಾಗಿ ಹೇಳುತ್ತಾರೆ. ವಿದ್ಯಾರ್ಥಿಗಳು ಇವರಲ್ಲಿಗೆ ಬಂದು ಮಾಹಿತಿ ಪಡೆದು ಹೋಗುತ್ತಾರೆ.

ಸಂಪರ್ಕ: 9342186951

**

ಪ್ರೊಟೀನ್‌ಯುಕ್ತ ಸಸ್ಯಾಹಾರ

ಅಣಬೆಯನ್ನು ಹೆಚ್ಚಿನವರು ಮಾಂಸಾಹಾರ ಎಂಬ ಕಾರಣಕ್ಕೆ ಸೇವಿಸುತ್ತಿಲ್ಲ. ಆದರೆ ಇದು ಪ್ರೊಟೀನ್‌ಯುಕ್ತ ಹೇರಳ ಪೋಷಕಾಂಶ ಹೊಂದಿರುವ ಸಸ್ಯಾಹಾರವೆನಿಸಿದೆ. ಸಕ್ಕರೆ ಕಾಯಿಲೆಯವರು, ಹೃದಯ ಸಂಬಂಧಿ ಕಾಯಿಲೆಯಿದ್ದವರು, ಕ್ಯಾನ್ಸರ್‌ ರೋಗಿಗಳಿಗೆ ಅಣಬೆ ಔಷಧೀಯ ಆಹಾರ. ಮಾಂಸಾಹಾರ ತಿನ್ನದವರು ಅಣಬೆ ತಿನ್ನುವುದರಿಂದ ನಮ್ಮ ಶರೀರಕ್ಕೆ ಕೊರತೆಯಾಗುವ ಕೆಲ ಜೀವಸತ್ವಗಳನ್ನು ಪಡೆಯಬಹುದು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry