ವಿಜ್ಞಾನ ವಸ್ತುಪ್ರದರ್ಶನ: ಸೃಜನಶೀಲತೆ ದರ್ಶನ

7

ವಿಜ್ಞಾನ ವಸ್ತುಪ್ರದರ್ಶನ: ಸೃಜನಶೀಲತೆ ದರ್ಶನ

Published:
Updated:
ವಿಜ್ಞಾನ ವಸ್ತುಪ್ರದರ್ಶನ: ಸೃಜನಶೀಲತೆ ದರ್ಶನ

ಮಂಡ್ಯ: ಪರಿಸರ ಸ್ನೇಹಿ ಫ್ರಿಜ್‌, ಸೌರ ವಿದ್ಯುತ್‌ ಆಧಾರಿತ ರೈಲು ನಿಲ್ದಾಣ, ಸ್ವಯಂ ಚಾಲಿತ ರೈಲ್ವೆ ಗೇಟ್‌, ತೂಗು ಸೇತುವೆ, ಎಟಿಎಂನಲ್ಲಿ ಭದ್ರತೆ, ಸೌರ ಮಂಡಲ, ಜಾಗತಿಕ ತಾಪಮಾನ, ಬೆಳೆ ರಕ್ಷಣಾ ಯಂತ್ರ, ವಿದ್ಯುತ್‌ ಉಳಿತಾಯ... ಇದು, ನಗರದ ಎಸ್‌.ಬಿ. ಸಮುದಾಯ ಭವನದಲ್ಲಿ ಸೋಮವಾರ ಆರಂಭವಾದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕಂಡ ದೃಶ್ಯಗಳು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತದ ವತಿಯಿಂದ ಇನ್‌ಸ್ಪೈರ್‌ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 350 ಶಾಲೆಗಳ ಮಕ್ಕಳು ಮಾದರಿ ಪ್ರದರ್ಶನ ಮಾಡಿದರು. ಮಾರ್ಗದರ್ಶಕ ಶಿಕ್ಷಕರೊಂದಿಗೆ ಬಂದಿದ್ದ ಮಕ್ಕಳು ಪ್ರೇಕ್ಷಕರಿಗೆ ಮಾದರಿ ಮಾಹಿತಿಯನ್ನು ವಿವರಿಸಿದರು.

ಸೌರಶಕ್ತಿ ಬಳಸಿ ತಯಾರಿಸಿದ್ದ ಮಾದರಿ, ಸೌರ ವಿದ್ಯುತ್‌ನಿಂದ ಚಾಲನೆಗೊಂಡಿದ್ದ ಬೆಳೆ ರಕ್ಷಣಾ ಯಂತ್ರ ಎಲ್ಲರ ಗಮನ ಸೆಳೆಯಿತು. ಕೃಷಿ ಬೆಳೆ ಸಂರಕ್ಷಿಸಿಕೊಳ್ಳುವ ಬಗೆ ಯನ್ನು ನಾಗಮಂಗಲ ತಾಲ್ಲೂಕು, ಹಟ್ಣ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರತಿಭಾ ವಿವರಿಸಿದರು. ಯಂತ್ರಕ್ಕೆ ಊಟದ ತಟ್ಟೆ ಅಳವಡಿಸಿ ಸದಾ ಶಬ್ದ ಬರುವಂತೆ ಯಂತ್ರ ರೂಪಿಸಲಾಗಿತ್ತು. ತಟ್ಟೆ ಶಬ್ದಕ್ಕೆ ಬೆದರುವ ಪ್ರಾಣಿ, ಪಕ್ಷಿಗಳು ಬೆಳೆಯ ಹತ್ತಿರಕ್ಕೆ ಸುಳಿಯುವುದಿಲ್ಲ ಎಂದು ವಿವರಿಸಿದರು.

ನೀರಿನ ಸದ್ಬಳಕೆ ಮಾಹಿತಿ: ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು ಮಾಡ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಜಯ್‌ಕುಮಾರ್‌ ನೀರಿನ ಸದ್ಬಳಕೆ ಕುರಿತ ವಿವರಿಸಿದರು.

ಕೃಷಿ ಭೂಮಿಯಲ್ಲಿ ಸೆನ್ಸಾರ್‌ ಯಂತ್ರ ಅಳವಡಿಸಿದರೆ ನೀರಿನ ಅವಶ್ಯಕತೆ ಇದ್ದಾಗ ಕೊಳವೆ ಬಾವಿ ಮೋಟರ್‌ ಸ್ವಯಂ ಚಾಲನೆ ಗೊಳ್ಳುತ್ತದೆ. ಹೊಲದಲ್ಲಿ ತೇವಾಂಶ ಹೆಚ್ಚಾದಾಗ ಮೋಟರ್‌ ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ನೀರು ವ್ಯರ್ಥವಾಗುವುದಿಲ್ಲ ಎಂದು ಅಜಯ್‌ ಕುಮಾರ್‌ ವಿವರಿಸಿದರು.

ಎಚ್‌.ಡಿ. ಕೋಟೆಯ ಚಂದ್ರ ಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಾಗತಿಕ ತಾಪಮಾನದಿಂದ ಉಂಟಾಗುವ ಅಪಾಯದ ಬಗ್ಗೆ ಮಾದರಿ ಸೃಷ್ಟಿಸಿದ್ದರು.

ಓಜೋನ್‌ ಪದರ ಸುರಕ್ಷಿತವಾಗಿದ್ದ ಕಾಲದಲ್ಲಿ ಜೀವಸಂಕುಲ ಸುರಕ್ಷಿತ ವಾಗಿತ್ತು. ಆದರೆ ಈಗ ಓಜೋನ್‌ ಪದರದಲ್ಲಿ ರಂದ್ರ ಕಾಣಿಸಿಕೊಂಡಿದ್ದು ಪ್ರಾಣಿ, ಪಕ್ಷಿ, ಮನುಷ್ಯರು ಹಲವು ಅಪಾಯ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಇಡೀ ಜೀವಸಂಕುಲ ನಾಶವಾಗುತ್ತದೆ ಎಂಬ ಅಪಾಯವನ್ನು ಮಾದರಿ ಸಾರುತ್ತಿತ್ತು.

ಭಾರತೀನಗರದ ಕೇಂಬ್ರಿಜ್‌ ಶಾಲೆಯ ವಿದ್ಯಾರ್ಥಿನಿ ಟಿ.ಎಸ್‌.ತೇಜಸ್ವಿನಿ ರಕ್ತ ಪರಿಚಲನೆ ಮಾದರಿ ಬಗ್ಗೆ ಮಾಹಿತಿ ನೀಡಿದರು. ಕೆ.ಆರ್‌.ಪೇಟೆ ತಾಲ್ಲೂಕು ಬಂಡಿಹೊಳೆ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಯಶಶ್ವಿನಿ ಪವನ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಬಗ್ಗೆ ಮಾದರಿ ತಯಾರಿಸಿದ್ದರು.

ಮಂಡ್ಯದ ಸೇಂಟ್‌ ಜಾನ್‌ ಪ್ರೌಢ ಶಾಲೆ ವಂದಿತಾ, ನಾಪತ್ತೆಯಾದ ಮಕ್ಕಳ ಹುಡುಕುವ ಬಗೆ ಮೊಬೈಲ್‌ ಆ್ಯಪ್‌ ಮೂಲಕ ವಿವರಿಸಿದರು. ಪಾಂಡವಪುರ ತಾಲ್ಲೂಕು, ಅಲ್ಪಹಳ್ಳಿ ಶಾಲೆ ಶಾಲೆಯ ಕಾರ್ತಿಕ್‌ ಟ್ರಾಫಿಕ್‌ ಸಿಗ್ನಲ್‌ ನಿರ್ವಹಣೆಯ ಮಾದರಿ ತಯಾರಿಸಿದ್ದರು.

ವಿಜ್ಞಾನ ವಸ್ತುಪ್ರದರ್ಶನವನ್ನು ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್‌.ನಾಗರಾಜು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕಿ ಭಾರತಿ, ಮಹದೇವು, ಚಂದ್ರಶೇಖರ್‌, ಗೋಪಾಲಗೌಡ ಹಾಜರಿದ್ದರು.

ಪರ್ಸ್ ಕದ್ದರೆ, ವೈರ್ ಕಚ್ಚಿದರೆ ಸಂಗೀತ!

ಕೆ.ಆರ್‌.ನಗರ ತಾಲ್ಲೂಕು, ಲಕ್ಷ್ಮಿಪುರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ್ದ ‘ಪಿಕ್‌ ಪಾಕೀಟು’ ಮಾದರಿ ನೋಡುಗರ ಮೊಗದ ಮೇಲೆ ನಗು ತರಿಸಿತು.

ಸೆನ್ಸರ್ ಅಳವಡಿಸಿದ ಪ್ಯಾಂಟ್‌ ಜೇಬಿನಿಂದ ಕಳ್ಳರು ಮೊಬೈಲ್‌ ಫೋನ್‌, ಪಾಕೀಟು ಕದ್ದರೆ ತಕ್ಷಣ ಸದ್ದಾಗುತ್ತದೆ. ಜೀನ್ಸ್‌ ಪ್ಯಾಂಟ್‌ನಲ್ಲಿ ಕಾಗದ ತುಂಬಿದ್ದ ವಿದ್ಯಾರ್ಥಿಗಳು ಹಿಂಬದಿ ಜೇಬಿನಲ್ಲಿ ಮೊಬೈಲ್‌ ಇಟ್ಟಿದ್ದರು. ಮೊಬೈಲ್‌ ಮುಟ್ಟಿದರೆ ಪ್ಯಾಂಟ್‌ ಸದ್ದಾಗುತ್ತಿತ್ತು.

ಮಂಡ್ಯ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ‘ವೈರ್‌ ಕಚ್ಚಿ ಸಂಗೀತ ಕೇಳಿ’ ಮಾದರಿ ಗಮನ ಸೆಳೆಯಿತು. ವೈರ್‌ವೊಂದನ್ನು ಹಲ್ಲಿನಿಂದ ಕಚ್ಚಿ ಎರಡೂ ಕಿವಿಗಳನ್ನು ಮುಚ್ಚಿಕೊಂಡರೆ ಸುಂದರ ಹಾಡು ಕೇಳಿಸುತ್ತಿತ್ತು. ಈ ಮಾದರಿ ಎದುರು ಶಾಲಾ ವಿದ್ಯಾರ್ಥಿಗಳು ಸಾಲುಗಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry