ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿಡಿ, ದೇವರಲ್ಲಿ ಭಕ್ತಿಯಿಡಿ

Last Updated 30 ಜನವರಿ 2018, 7:24 IST
ಅಕ್ಷರ ಗಾತ್ರ

ತುಮಕೂರು: 'ದ್ವೇಷ ಬಿಡಿ, ದೇವರಲ್ಲಿ ಭಕ್ತಿಯಿಡಿ. ಜೊತೆಯಲ್ಲಿರುವವರನ್ನು ದ್ವೇಷಿಸಿದರೆ ಅದು ದೇವರನ್ನು ದ್ವೇಷಿಸಿದಂತೆ. ಆದ್ದರಿಂದ ಭಗವಂತನನ್ನು ಭಕ್ತಿಯಿಂದ ಆರಾಧಿಸುವುದರೊಂದಿಗೆ ಪರಸ್ಪರ ದ್ವೇಷ, ಅಸೂಯೆ, ಕಿತ್ತಾಟವನ್ನು ತೊರೆದು ಜೊತೆಯಲ್ಲಿರುವ ಭಕ್ತರನ್ನೂ ಪ್ರೀತಿ- ಭಕ್ತಿಯಿಂದ ಆದರಿಸಬೇಕು’ ಎಂದು ಉತ್ತರಾಧಿಮ ಮಠದ ಮುಖ್ಯಾಧಿಕಾರಿ ಅನಂತಾಚಾರ್ಯ ಗೋದಾವರಿ ಹೇಳಿದರು.

ಅಖಿಲಭಾರತ ಮಾಧ್ವ ಮಹಾಮಂಡಳಿಯ ವತಿಯಿಂದ ನಗರದ ಚಿಕ್ಕಪೇಟೆಯ ಉತ್ತರಾದಿ ಮಠದಲ್ಲಿ ನಡೆದ ಮಧ್ವ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಆಚರಿಸಬೇಕು ಹಾಗೂ ಅನುಸರಿಸಬೇಕು. ಅದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಶ್ರಮಿಸಬೇಕು ಎಂದು ಹೇಳಿದರು.

‘ಶ್ರೀಕೃಷ್ಣ ಮಧ್ವಾನುಗ್ರಹ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಸ್ಕೃತ ವಿದ್ವಾಂಸ ಜಯತೀರ್ಥಾಚಾರ್ಯ, ‘ಯತಿಶ್ರೇಷ್ಠ ಮಧ್ವಾಚಾರ್ಯರು ವೇದ, ಉಪನಿಷತ್ತು, ಪುರಾಣಗಳಿಗೆ ಭಾಷ್ಯ ಬರೆದರು. ತಮ್ಮ ತತ್ವ-ಸಿದ್ಧಾಂತಗಳನ್ನು ಅತ್ಯಂತ ವೈಜ್ಞಾನಿಕವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಮಧ್ವರ ಸಿದ್ಧಾಂತಗಳು ಪ್ರಸ್ತುತ ಹೆಚ್ಚು ಅವಶ್ಯಕವಾಗಿವೆ’ ಎಂದು ಹೇಳಿದರು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕೃತ ಕಲಿಕೆ ಹಾಗೂ ವೇದೋಪನಿಷತ್ತುಗಳ ಕಲಿಕೆ ಅತ್ಯಗತ್ಯ. ಇದರಿಂದ ಅವರ ಭವಿಷ್ಯದ ಜೀವನ ಅತ್ಯುತ್ತಮವಾಗಲಿದೆ. ಈ ನಿಟ್ಟಿನಲ್ಲಿ ತಾವು ಹಲವು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ವೇದಗಳನ್ನು ಕಲಿಸುತ್ತಿರುವುದಾಗಿ ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎನ್.ಆರ್.ನಾಗರಾಜರಾವ್, ಮಹಾಮಂಡಲದ ತುಮಕೂರು ಶಾಖೆ ಗೌರವ ಅಧ್ಯಕ್ಷ ಗೋಪಾಲಕೃಷ್ಣರಾವ್, ಶ್ರೀಕೃಷ್ಣ ಮಂದಿರದ ಅಧ್ಯಕ್ಷರಾದ ಶ್ರೀನಿವಾಸ ಹತ್ವಾರ್, ಪ್ರಾಧ್ಯಾಪಕ ಪ್ರೊ.ವೇಣುಗೋಪಾಲ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಭಜನಾ ತಂಡಗಳೊಂದಿಗೆ ಚಿಕ್ಕಪೇಟೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು.

ಶೀಘ್ರ ಮಾಧ್ವ ಸಮ್ಮೇಳನ

ಅಖಿಲ ಭಾರತ ಮಾಧ್ವ ಮಹಾಮಂಡಲದ ತುಮಕೂರು ಶಾಖೆಯ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಅವರು ಮಾತನಾಡಿ, ‘ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಹಾಗೂ ಮಧ್ವಾಚಾರ್ಯರ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೂ ಪ್ರಚುರ ಪಡಿಸಲು ನಿಯಮಿತವಾಗಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಅತಿ ಶೀಘ್ರದಲ್ಲಿ ಮಾಧ್ವ ಸಮ್ಮೇಳನವನ್ನು ಆಯೋಜಿಸಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT