ವೈದಿಕ-ಅವೈದಿಕ-ಲಿಂಗಾಯತ

7

ವೈದಿಕ-ಅವೈದಿಕ-ಲಿಂಗಾಯತ

Published:
Updated:

ಭಾರತೀಯ ಧರ್ಮ ಮತ್ತು ದರ್ಶನಗಳಲ್ಲಿ ಕುರಿತ ಚಿಂತನೆಗಳಲ್ಲಿ ವೈದಿಕ-ಅವೈದಿಕ ಎಂಬ ಎರಡು ಪ್ರಮುಖ ಭೇದಗಳು ನಮ್ಮ ಗಮನ ಸೆಳೆಯುತ್ತವೆ. ವೇದಗಳು ಭಾರತ ದೇಶದ ಅತ್ಯಂತ ಪ್ರಾಚೀನ ಸಾಹಿತ್ಯವಾಗಿದ್ದು, ಅವುಗಳನ್ನು ಅಪೌರುಷೇಯ, ಅಲೌಕಿಕ ಮತ್ತು ಅನಾದಿ ಎಂದು ಭಾವಿಸಲಾಗಿದೆ. ಇನ್ನೂ ಮುಂದುವರೆದು ವೇದಗಳು ಪರಬ್ರಹ್ಮನ ಶ್ವಾಸ, ನಿಶ್ವಾಸಗಳೆಂದು ಹೇಳುವವರೂ ಇದ್ದಾರೆ. ಜ್ಞಾನದ ಖನಜ ಎಂದು ಹೇಳಲಾಗಿರುವ ವೇದಗಳನ್ನು ಒಪ್ಪಿಕೊಳ್ಳುವ, ವೇದದಲ್ಲಿ ಹೇಳಲಾಗಿರುವ ಧರ್ಮಾಚರಣೆಗಳನ್ನು ಪರಿಪಾಲಿಸುವ, ವೇದಗಳನ್ನೇ ಪ್ರಮಾಣಗಳೆಂದು ಪ್ರತಿಪಾದಿಸುವ ಧರ್ಮ-ದರ್ಶನಗಳನ್ನು ವೈದಿಕ ವಿಶೇಷಣದೊಂದಿಗೆ ಗುರುತಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಅಂದರೆ ವೇದಗಳನ್ನು ಒಪ್ಪದ ಧರ್ಮ ದರ್ಶನಗಳು ಅವೈದಿಕವೆನಿಸುತ್ತವೆ.

ವೈದಿಕ ಧರ್ಮಾಚರಣೆಗಳನ್ನು ಪರಿಪಾಲಿಸುವ ಶೈವ-ವೈಷ್ಣವಾದಿ ಮತಗಳು ವೈದಿಕ ಧರ್ಮದ ಭಾಗಗಳೆನಿಸಿವೆ. ಅವುಗಳನ್ನೇ ಇಂದು ವಿಶಾಲಾರ್ಥದಲ್ಲಿ ‘ಹಿಂದೂ ಧರ್ಮ’ವೆಂದು ಹೇಳಲಾಗಿದೆ. ಹಾಗೆಯೇ ವೇದ ಪ್ರಮಾಣವನ್ನು ಒಪ್ಪಿಕೊಳ್ಳುವ ಸಾಂಖ್ಯ-ಯೋಗ, ನ್ಯಾಯ-ವೈಶೇಷಿಕ, ವೇದಾಂತ-ಮೀಮಾಂಸಾದಿ ದರ್ಶನಗಳನ್ನು ವೈದಿಕ ದರ್ಶನಗಳೆಂದು ಹೆಸರಿಸಲಾಗಿದೆ. ವೇದಗಳನ್ನೇ ಒಪ್ಪದ, ವೇದಗಳನ್ನು ಖಂಡಿಸುವ ಜೈನ, ಬೌದ್ಧ, ಲಿಂಗಾಯತ, ಸಿಖ್ ಧರ್ಮ ಮತ್ತು ದರ್ಶನಗಳು ಅವೈದಿಕಗಳಾಗಿವೆ. ವೇದಗಳನ್ನು ನಿಂದಿಸುವವರನ್ನು ನಾಸ್ತಿಕ (ನಾಸ್ತಿಕೋ ವೇದನಿಂದಕಃ)ರೆಂದು ಕರೆದಿರುವುದೂ ಉಂಟು.

ಶ್ರುತಿ ಸಮ್ಮತವಾದ ಧರ್ಮ-ದರ್ಶನಗಳ ವಿರೋಧದಲ್ಲಿ ಹುಟ್ಟಿಕೊಂಡ ಅವೈದಿಕ ಧರ್ಮ-ದರ್ಶನಗಳು ವೇದ ಪಾರಮ್ಯವನ್ನು ಒಪ್ಪಿಕೊಳ್ಳದಿರುವುದಕ್ಕೆ ವೇದಗಳಲ್ಲಿ ವ್ಯಾಪಕವಾಗಿ ಪ್ರತಿಪಾದಿತವಾಗಿರುವ ಕರ್ಮಮಾರ್ಗವೇ ಕಾರಣವಾಗಿದೆ. ಯಜ್ಞ-ಯಾಗಾದಿಗಳನ್ನು ನೆರವೇರಿಸುವುದೇ ಮುಖ್ಯವಾಗಿರುವ, ಅದನ್ನೇ ಬದುಕಿನ ಗುರಿ ಎಂದು ಪ್ರತಿಪಾದಿಸುವ ಕರ್ಮ ಮಾರ್ಗದಲ್ಲಿ ಮಾನವೀಯ ಪರಿಶುದ್ಧ ಭಾವನೆಗಳಿಗೆ ಬೆಲೆ ಇಲ್ಲದಂತಾದುದು, ಯಜ್ಞಯಾಗಗಳಲ್ಲಿ ಪ್ರಾಣಿಗಳನ್ನು ವಧಿಸುವುದು, ಧರ್ಮದ ಹೆಸರಿನಲ್ಲಿ ಜೀವ ಹಿಂಸೆ ನಡೆಸುವುದಲ್ಲದೆ ಸಾಮಾಜಿಕ ಅಸಮಾನತೆಯನ್ನು ಒಪ್ಪಿಕೊಂಡಿರುವುದು ಕಾಲಾಂತರದಲ್ಲಿ ಬುದ್ಧ, ಬಸವ, ಮಹಾವೀರ, ಗುರುನಾನಕರಂಥ ಜೀವದಯೆಯುಳ್ಳ ಮಹಿಮಾನ್ವಿತರಿಗೆ ಹಿಡಿಸದೇ ಹೋಯಿತು. ವೇದ ಶಾಸ್ತ್ರಗಳನ್ನು ಬಲ್ಲವರು ಮೇಲು ಕೀಳುಗಳಿಂದ ಕೂಡಿದ ಜಾತಿವ್ಯವಸ್ಥೆಯನ್ನು ಭದ್ರವಾಗಿರಿಸಿ ಜನರನ್ನು ಶೋಷಿಸುವುದಕ್ಕಾಗಿ ವೇದಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಈ ಮಹಾತ್ಮರು ಹೊಸ ಧರ್ಮ, ಹೊಸ ದರ್ಶನಗಳ ಮೂಲಕ ವರ್ಣಾಶ್ರಮ ವ್ಯವಸ್ಥೆ, ಯಜ್ಞಯಾಗಗಳ ಹಿಂಸೆ, ಬಹುದೇವ-ಕ್ಷುದ್ರದೇವತೆಗಳನ್ನು ಉಪಾಸಿಸುವ ವೈದಿಕ ಧರ್ಮಾ (ಕರ್ಮಾ)ಚರಣೆಗಳನ್ನು ಖಂಡಿಸಿದರು. ಅವರು ಪ್ರತಿಪಾದಿಸಿದ ಬೌದ್ಧ, ಲಿಂಗಾಯತ, ಜೈನ ಮತ್ತು ಸಿಖ್‌ ಧರ್ಮ-ದರ್ಶನಗಳು ಇಂದು ಅವೈದಿಕವೆಂದು ಪ್ರಸಿದ್ಧವಾಗಿವೆ.

ಕರ್ನಾಟಕದಲ್ಲಿ ಬಸವಣ್ಣನವರಿಂದ ಹನ್ನೆರಡನೆಯ ಶತಮಾನದಲ್ಲಿ ಸ್ಥಾಪಿತವಾದ ಅವೈದಿಕ ಧರ್ಮವೇ ಲಿಂಗಾಯತ. ವೈದಿಕ ಕರ್ಮಕಾಂಡ, ಶೋಷಣೆ ಮತ್ತು ಅಸಮಾನತೆಯನ್ನು ವಿರೋಧಿಸಿದ ಬಸವಣ್ಣನವರು ವೈದಿಕ ಕರ್ಮ ಮಾರ್ಗಕ್ಕಿಂತಲೂ ಅನುಭಾವ ಮಾರ್ಗವೇ ಶ್ರೇಷ್ಠವೆಂದು ಸಾರಿದರು. ಪ್ರಾಣವಧೆಯನ್ನು ಹೇಳುವ ವೇದ ಘನವಲ್ಲ. ನಮ್ಮೆಲ್ಲರನ್ನು ಪ್ರತಿಪಾಲಿಸುವ ಭಗವಂತನೇ ಘನ. ಅವನು ವೇದ ಶಾಸ್ತ್ರ ತರ್ಕ ಆಗಮಗಳಿಗೆ ಮೀರಿದ ಘನವಾಗಿದ್ದಾನೆ. ಅವನನ್ನು ಸ್ವಾನುಭಾವದಿಂದ ಮಾತ್ರ ಕಾಣಲು ಸಾಧ್ಯ. ಲಿಂಗಾಯತ ಧರ್ಮದಲ್ಲಿ ವೇದ ಮತ್ತು ವೈದಿಕ ಕರ್ಮಾಚರಣೆಗಳಿಗೆ ಯಾವುದೇ ಮನ್ನಣೆ ಇಲ್ಲ. ಲಿಂಗಾಯತರಿಗೆ ಶರಣರ ವಚನಗಳು ಮಾತ್ರ ಮಾನ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry